ಪ್ರಾಣ ಹೋಗುವ ಪರಿಸ್ಥಿತಿ ಇಲ್ಲ: ದೆಹಲಿ ವಾಯುಮಾಲಿನ್ಯ ಕುರಿತು ಬಾಂಗ್ಲಾ ಕ್ರಿಕೆಟ್ ಕೋಚ್ ಹೇಳಿಕೆ

ದೆಹಲಿಯಲ್ಲಿ ವಾಯುಮಾಲಿನ್ಯವಿದೆಯಾದರೂ, ಪ್ರಾಣಹೋಗುವ ಪರಿಸ್ಥಿತಿಯಂತೂ ಇಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಕೋಚ್ ರಸ್ಸೆಲ್ ಡೊಮಿಂಗೊ ಹೇಳಿದ್ದಾರೆ.
ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ ಬಾಂಗ್ಲಾ ಕ್ರಿಕೆಟಿಗರು
ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ ಬಾಂಗ್ಲಾ ಕ್ರಿಕೆಟಿಗರು

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯವಿದೆಯಾದರೂ, ಪ್ರಾಣಹೋಗುವ ಪರಿಸ್ಥಿತಿಯಂತೂ ಇಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಕೋಚ್ ರಸ್ಸೆಲ್ ಡೊಮಿಂಗೊ ಹೇಳಿದ್ದಾರೆ.

ಇದೇ ಭಾನುವಾರ ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ತನ್ನ ಮೊದಲ ಟಿ20 ಪಂದ್ಯವನ್ನಾಡಲಿದ್ದು, ಪಂದ್ಯಕ್ಕೆ ವಾಯುಮಾಲೀನ್ಯ ಅಡ್ಡಿಯುಂಟು ಮಾಡುವ ಭೀತಿ ಇದೆ ಎನ್ನಲಾಗಿತ್ತು. ಆದರೆ ಈ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದರು. 

ಆದರೆ ಇಂದು ಸ್ವತಃ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸುದ್ದಿಗೋಷ್ಠಿ ನಡೆಸಿ ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಮತ್ತೆ ದೆಹಲಿಯಲ್ಲಿ ಟಿ20 ಪಂದ್ಯದ ಮೇಲೆ ಕರಿ ನೆರಳು ಬಿದ್ದಿದೆ. ಇದರ ನಡುವೆಯೇ ದೆಹಲಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರೊಂದಿಗೆ ತಾಲೀಮಿನಲ್ಲಿ ತೊಡಗಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಕೋಚ್ ರಸ್ಸೆಲ್ ಡೊಮಿಂಗೊ ಅವರು, ದೆಹಲಿಯಲ್ಲಿ ವಾಯು ಮಾಲಿನ್ಯವಿದೆಯಾದರೂ, ಪ್ರಾಣಹೋಗುವ ಪರಿಸ್ಥಿತಿಯಂತೂ ಇಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡಕ್ಕೂ ಇಂತಹ ಸಂಕಷ್ಟ ಎದುರಾಗಿತ್ತು. ಬಾಂಗ್ಲಾದೇಶದ ಕ್ರಿಕೆಟಿಗರಿಗೆ ಇಂತಹ ಸನ್ನಿವೇಶ ಹೊಸದೇನು ಅಲ್ಲ. ನಾವು ಕೇವಲ ಪಂದ್ಯದ ಮೇಲೆ ನಮ್ಮ ಗಮನ ಕೇಂದ್ರೀಕರಿಸಿದ್ದೇವೆ. ಟಿ20 ಕೇವಲ 3 ಗಂಟೆಗಳ ಅವಧಿಯ ಪಂದ್ಯವಾಗಿದ್ದು, ಅಂತಹ ಗಂಭೀರ ಸಮಸ್ಯೆ ಎದುರಾಗದು ಎಂದು ಭಾವಿಸಿದ್ದೇವೆ. ಸಮಸ್ಯೆ ಎದುರಾಗಬಹುದು. ಮೂಗು ಕಟ್ಟುವಿಕೆ, ಗಂಟಲು ಕೆರೆತ, ಕಣ್ಣುಗಳ ನವೆಯಂತಹ ಸಮಸ್ಯೆ ಕಾಡಬಹುದು. ಆದರೆ ಪ್ರಾಣ ಹೋಗುವ ಪರಿಸ್ಥಿತಿ ಇಲ್ಲ. ಹೀಗಾಗಿ ಪಂದ್ಯಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಪ್ರಸ್ತುತ ಬಾಂಗ್ಲಾದೇಶ ಕ್ರಿಕೆಟಿಗರು ತಾಲೀಮಿನಲ್ಲಿ ತೊಡಗಿದ್ದು, ವಾಯುಮಾಲೀನ್ಯ ಹಿನ್ನಲೆಯಲ್ಲಿ ಮಾಸ್ಕ್ ಧರಿಸಿಯೇ ಅಭ್ಯಾಸ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com