ಕನ್ನಡಿಗ ಮಯಾಂಕ್ ಅಬ್ಬರದ ದ್ವಿಶತಕ: ಭಾರತಕ್ಕೆ 343 ರನ್ ಮುನ್ನಡೆ

ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಶತಕ ಹಾಗೂ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ.
ಮಾಯಾಂಕ್ ಅಗರ್ವಾಲ್
ಮಾಯಾಂಕ್ ಅಗರ್ವಾಲ್

ಇಂದೋರ್: ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಶತಕ ಹಾಗೂ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ.

ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಒಂದು ವಿಕೆಟ್ ಕಳೆದುಕೊಂಡು 86 ರನ್ ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಭಾರತ ತಂಡ, ಎರಡನೇ ದಿನದಾಟ ಮುಕ್ತಾಯಕ್ಕೆ 114 ಓವರ್‌ಗಳಿಗೆ ಆರು ವಿಕೆಟ್ ನಷ್ಟಕ್ಕೆ 493 ರನ್ ದಾಖಲಿಸಿದೆ. ಇದರೊಂದಿಗೆ 343 ರನ್ ಮುನ್ನಡೆ ಸಾಧಿಸಿತು.

ಎರಡನೇ ದಿನವಾದ ಶುಕ್ರವಾರ ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ ಪೂಜಾರ ಜೋಡಿ ಹೆಚ್ಚು ಹೊತ್ತು ಉಳಿಯಲಿಲ್ಲ. 72 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಅರ್ಧ ಶತಕ ಪೂರೈಸಿದ ಪೂಜಾರ ಇಂದು ಬಹುಬೇಗ ಅಬು ಝಾಯೆದ್ ಗೆ ವಿಕೆಟ್ ಒಪ್ಪಿಸಿದರು. ನಂತರ, ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿ ಝಾಯೆದ್ ಗೆ ಶೂನ್ಯಕ್ಕೆ ಔಟ್ ಆದರು.

ಎರಡನೇ ದಿನ ಅಂಗಳದಲ್ಲಿ ಹೆಚ್ಚು ಆಕರ್ಷಿತರಾಗಿದ್ದು ದ್ವಿಶತಕ ದಾಖಲಿಸಿದ ಮಯಾಂಕ್ ಅಗರ್ವಾಲ್. ಅದ್ಭುತ ಬ್ಯಾಟಿಂಗ್ ಮಾಡಿದ ಅವರು ಬಾಂಗ್ಲಾ ಬೌಲರ್‌ಗಳಿಗೆ ಬೆವರಿಳಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಸಮಯೋಜಿತವಾಗಿ ಎದುರಿಸಿದರು. 

330 ಎಸೆತಗಳನ್ನು ಆಡಿದ ಮಾಯಾಂಕ್ ಅವರು 243 ರನ್ ಗಳಿಸಿ ವೃತ್ತಿ ಜೀವನದ ಎರಡನೇ ದ್ವಿಶತಕ ಸಿಡಿಸಿದರು. ಇದರೊಂದಿಗೆ ಕೇವಲ ಎರಡು ತಿಂಗಳು ಅಂತರದಲ್ಲೇ ಎರಡನೇ ದ್ವಿಶತಕ ಇದಾಯಿತು. ಇವರ ಅದ್ಭುತ ಇನಿಂಗ್ಸ್‌‌ನಲ್ಲಿ ಎಂಟು ಸಿಕ್ಸರ್ ಹಾಗೂ 28 ಬೌಂಡರಿಗಳಿದ್ದವು. ಇದು ಎಂಟನೇ ಪಂದ್ಯವಾಗಿರುವ ಮಯಾಂಕ್ ಅಗರ್ವಾಲ್, ಕೇವಲ 12 ಇನಿಂಗ್ಸ್‌ ಗಳಲ್ಲಿ 71.50 ರ ಸರಾಸರಿಯಲ್ಲಿ 858 ರನ್ ಗಳಿಸಿದ್ದಾರೆ. ಇವರು ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೃತ್ತಿ ಜೀವನದ ಚೊಚ್ಚಲ ದ್ವಿಶತಕ ಸಿಡಿಸಿದ್ದರು. ಬಾಂಗ್ಲಾದೇಶ ವಿರುದ್ಧ ಒಂದೇ ಇನಿಂಗ್ಸ್‌‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌‌ಮನ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಸಚಿನ್ ತೆಂಡೂಲ್ಕರ್ 2004/05ರ ಆವೃತ್ತಿಯಲ್ಲಿ ಬಾಂಗ್ಲಾ ವಿರುದ್ಧ 248 ರನ್ ಗಳಿಸಿದ್ದರು.

ಅಗರ್ವಾಲ್-ರಹಾನೆ ಜುಗಲ್‌ಬಂದಿ
ನಾಲ್ಕನೇ ವಿಕೆಟ್‌ಗೆ ಜತೆಯಾದ ಮಯಾಂಕ್ ಅಗರ್ವಾಲ್ ಹಾಗೂ ಅಜಿಂಕ್ಯ ರಹಾನೆ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಎರಡನೇ ದಿನ ಬಹುತೇಕ ಸಮಯ ಕ್ರೀಸ್‌ನಲ್ಲಿ ಕಳೆದ ಈ ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿತು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 190 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿತು.

ಎರಡನೇ ದಿನ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಬೇಗ ಉರುಳುತ್ತಿದ್ದಂತೆ ಮಯಾಂಕ್ ಅಗರ್ವಾಲ್‌ಗೆ ಹೆಚ್ಚು ಸಮಯ ಅಜಿಂಕ್ಯ ರಹಾನೆ ಸಾಥ್ ನೀಡಿದರು. 172 ಎಸೆತಗಳನ್ನು ಎದುರಿಸಿದ ಅವರು, 9 ಬೌಂಡರಿಗಳೊಂದಿಗೆ 86ರನ್ ಗಳಿಸಿದರು. ಅಲ್ಲದೇ, ಟೆಸ್ಟ್‌ ಕ್ರಿಕೆಟ್‌ನಲ್ಲಿ 4061ರನ್ ಪೂರೈಸಿದರು.

ರಹಾನೆ ಔಟ್ ಆದ ಬಳಿಕ ಮಯಾಂಕ್‌ಗೆ ಮತ್ತೊಂದು ತುದಿಯಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮ ಸಾಥ್ ನೀಡಿದರು. ಈ ಜೋಡಿ ಐದನೇ ವಿಕೆಟ್‌ಗೆ 123 ರನ್ ಕಲೆ ಹಾಕಿತು. ಇತ್ತೀಚೆಗೆ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿರುವ ರವೀಂದ್ರ ಜಡೇಜಾ ಶುಕ್ರವಾರ ಅರ್ಧಶತಕ ಸಿಡಿಸಿದರು. ಮಯಾಂಕ್ ಅಗರ್ವಾಲ್‌ಗೆ ಒಂದು ತುದಿಯಲ್ಲಿ ಸಾಥ್ ನೀಡುತ್ತಿದ್ದ ಅವರು 76 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಉಮೇಶ್ ಯಾದವ್(25) ಇದ್ದಾರೆ.

ಬಾಂಗ್ಲಾದೇಶ ಪರ ಅಬು ಝಾಯೆದ್ ನಾಲ್ಕು ವಿಕೆಟ್ ಪಡೆದರೆ, ಎಬಾದತ್ ಹುಸೇನ್ ಹಾಗೂ ಮೆಹಡಿ ಹಸನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ
ಪ್ರಥಮ ಇನಿಂಗ್ಸ್‌: 150

ಭಾರತ
ಪ್ರಥಮ ಇನಿಂಗ್ಸ್‌: 114 ಓವರ್ ಗಳಿಗೆ 493/6 (ಮಯಾಂಕ್ ಅಗರ್ವಾಲ್ 243, ಅಜಿಂಕ್ಯಾಾ ರಹಾನೆ 86, ರವೀಂದ್ರ ಜಡೇಜಾ ಔಟಾಗದೆ 60, ಚೇತೇಶ್ವರ ಪೂಜಾರ 54; ಅಬು ಝಾಯೆದ್ 108 ಕ್ಕೆೆ 4, ಎಬಾದತ್ ಹುಸೇನ್ 115 ಕ್ಕೆೆ 1, ಮೆಹಡಿ ಹಸನ್ 125 ಕ್ಕೆ 1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com