ನ.16, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪಾಲಿಗೆ ಮರೆಯಲಾಗದ ದಿನ, ಏನದು? 

5 ವರ್ಷಗಳ ಹಿಂದೆ ನವೆಂಬರ್ 16ರಂದು ಭಾರತೀಯ ಕ್ರಿಕೆಟ್ ಲೋಕದಲ್ಲಿ ಮರೆಯಲಾಗದ ದಿನ. 
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಮುಂಬೈ: 5 ವರ್ಷಗಳ ಹಿಂದೆ ನವೆಂಬರ್ 16ರಂದು ಭಾರತೀಯ ಕ್ರಿಕೆಟ್ ಲೋಕದಲ್ಲಿ ಮರೆಯಲಾಗದ ದಿನ. ಕ್ರಿಕೆಟ್ ಅಭಿಮಾನಿಗಳ ದೇವರು ಎಂದು ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.


ಸಚಿನ್ ತೆಂಡೂಲ್ಕರ್ ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್ ಅಂಗಳದಲ್ಲಿ ತಮ್ಮ ವೃತ್ತಿಯನ್ನು ಕಳೆದಿದ್ದಾರೆ. ತಮ್ಮ ತವರು ನೆಲ ಮುಂಬೈಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 200ನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಸಚಿನ್ ತೆಂಡೂಲ್ಕರ್ ಎಲ್ಲಾ ರೀತಿಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದರು.


ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಗಳಿಸಿದ್ದು 74 ರನ್, ಸ್ಪಿನ್ನರ್ ನರ್ಸಿಂಗ್ ಡಿಯೊನರಿನ್ ಬೌಲಿಂಗ್ ಮಾಡಬೇಕಾದರೆ ಡರ್ರೆನ್ ಸಾಮ್ಮಿ ಕ್ಯಾಚ್ ಹಿಡಿದು ಸಚಿನ್ ಔಟ್ ಆದರು.ಲಆದರೆ ಸಾಮ್ಮಿ ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡಿದ್ದರೂ ಅದರ ಖುಷಿಯನ್ನು ಸಂಭ್ರಮಿಸಲಿಲ್ಲ. ಏಕೆಂದರೆ ತೆಂಡೂಲ್ಕರ್ ಅವರ ಕೊನೆಯ ಪಂದ್ಯವಾಗಿತ್ತು ಅದು.
ಪಂದ್ಯ ಮುಗಿದ ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಅವರು ನೀಡಿದ ವಿದಾಯ ಭಾಷಣ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದು ಸುಳ್ಳಲ್ಲ.


ಸಮಯ ಬಹುಬೇಗನೆ ಕಳೆದು ಹೋಯಿತು. ಆದರೆ ನೀವು ನನ್ನಲ್ಲಿ ಬಿಟ್ಟುಹೋದ ನೆನಪುಗಳು ಮಾತ್ರ ಶಾಶ್ವತವಾಗಿ ಎಂದೆಂದಿಗೂ ನನ್ನಲ್ಲಿ ಉಳಿಯುತ್ತದೆ. ಅದರಲ್ಲೂ ನಾನಾಡುತ್ತಿದ್ದಾಗ ಸಚಿನ್, ಸಚಿನ್ ಎಂದು ಕೂಗುತ್ತಿದ್ದ ನನ್ನ ಹೆಸರು ನನ್ನ ಉಸಿರು ಇರುವವರೆಗೆ ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿರುತ್ತದೆ ಎಂದು ತೆಂಡೂಲ್ಕರ್ ವಿದಾಯ ಭಾಷಣದಲ್ಲಿ ಹೇಳಿದ್ದರು.
ಈ ವರ್ಷದ ಆರಂಭದಲ್ಲಿ ಐಸಿಸಿ ಹಾಲ್ ಆಫ್ ಫೇಮ್ ನಲ್ಲಿ ಸೇರ್ಪಡೆಗೊಂಡ ಭಾರತೀಯ ಕ್ರಿಕೆಟಿಗರಲ್ಲಿ ಸಚಿನ್ ತೆಂಡೂಲ್ಕರ್ ಆರನೆಯವರಾಗಿದ್ದಾರೆ.


46 ವರ್ಷದ ಸಚಿನ್ ತೆಂಡೂಲ್ಕರ್ 16ನೇ ವರ್ಷದಲ್ಲಿ 1989ರಲ್ಲಿ ಭಾರತದ ಪರವಾಗಿ ಆಡಲು ಪ್ರಾರಂಭಿಸಿದರು. ಆಡಿರುವ ಎಲ್ಲಾ ರೀತಿಯ ಪಂದ್ಯಗಳಲ್ಲಿ ಒಟ್ಟಾರೆ 34, 357 ರನ್ ಗಳಿಸಿದ್ದು, ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಅವರಿಗಿಂತ 6 ಸಾವಿರ ರನ್ ಹೆಚ್ಚಾಗಿದೆ. 


ಅತಿ ಶ್ರೇಷ್ಠ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆ ತೆಂಡೂಲ್ಕರ್ ಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಏಕದಿನ ಪಂದ್ಯಗಳಲ್ಲಿ 18 ಸಾವಿರದ 426 ರನ್ ಗಳು ಮತ್ತು ಟೆಸ್ಟ್ ಪಂದ್ಯಗಳಲ್ಲಿ 15 ಸಾವಿರದ 921 ರನ್ ಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದವರು ಎಂಬ ದಾಖಲೆ ಕೂಡ ಇದೆ.


ಪ್ರಸ್ತುತ ಸಚಿನ್ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ತರಬೇತುದಾರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com