275ಕ್ಕೆ ದಕ್ಷಿಣ ಆಫ್ರಿಕಾ ಆಲೌಟ್‌: ಭಾರತದ ಹಿಡಿತದಲ್ಲಿ ಎರಡನೇ ಪಂದ್ಯ

ಆರ್‌. ಅಶ್ವಿನ್‌ ಅವರ ಸ್ಪಿನ್‌ ಮೋಡಿಗೆ ನಲುಗಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತದ ವಿರುದ್ಧ ಹಿನ್ನಡೆ ಅನುಭವಿಸಿದೆ.
275ಕ್ಕೆ ದಕ್ಷಿಣ ಆಫ್ರಿಕಾ ಆಲೌಟ್‌: ಭಾರತದ ಹಿಡಿತದಲ್ಲಿ ಎರಡನೇ ಪಂದ್ಯ
275ಕ್ಕೆ ದಕ್ಷಿಣ ಆಫ್ರಿಕಾ ಆಲೌಟ್‌: ಭಾರತದ ಹಿಡಿತದಲ್ಲಿ ಎರಡನೇ ಪಂದ್ಯ

ಪುಣೆ: ಕೇಶವ್‌ ಮಹರಾಜ್‌ (72 ರನ್‌) ಹಾಗೂ ನಾಯಕ ಫಾಫ್‌ ಡುಪ್ಲೆಸಿಸ್‌ (64 ರನ್‌) ಅವರ ಅರ್ಧ ಶತಕಗಳ ಹೊರತಾಗಿಯೂ ಆರ್‌. ಅಶ್ವಿನ್‌ ಅವರ ಸ್ಪಿನ್‌ ಮೋಡಿಗೆ ನಲುಗಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತದ ವಿರುದ್ಧ ಹಿನ್ನಡೆ ಅನುಭವಿಸಿದೆ. ಇದರೊಂದಿಗೆ ಟೀಮ್‌ ಇಂಡಿಯಾ ಮೂರನೇ ದಿನದ ಮುಕ್ತಾಯಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. 

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೂರು ವಿಕೆಟ್ ಕಳೆದುಕೊಂಡು 36 ರನ್‍ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ  105.4 ಓವರ್ ಗಳಿಗೆ 275 ರನ್‌ ಗಳಿಸಿ  ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಆಫ್ರಿಕಾ 326 ರನ್‌ಗಳ ಹಿನ್ನಡೆ ಅನುಭವಿಸಿತು. ಶನಿವಾರ ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ಆನ್ರಿಚ್ ನಾಡ್ಜ್ ಹಾಗೂ ಥ್ಯೂನಿಸ್ ಡಿ ಬ್ರೂಯಿನ್ ಅವರು ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ಉಳಿಯಲಿಲ್ಲ.  ಆನ್ರಿಚ್ ನಾಡ್ಜ್ ಕೇವಲ ಮೂರು ರನ್ ಗಳಿಸಿ ಮೊಹಮ್ಮದ್ ಶಮಿ ಎಸೆತದಲ್ಲಿ ವೃದ್ದಿಮನ್ ಸಾಹ ಅವರಿಗೆ ಕ್ಯಾಚ್ ನೀಡಿದರು. 

ಒಂದು ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಥ್ಯೂನಿಸ್ ಡಿ ಬ್ರೂಯಿನ್ ಅವರು 58 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 30ರನ್ ಗಳಿಸಿದರು. ಆ ಮೂಲಕ ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದರು. ಆದರೆ, ಅವರನ್ನು ಉಮೇಶ್ ಯಾದವ್‍ ಕಟ್ಟಿ ಹಾಕಿದರು. 

ಆಸರೆಯಾದ ಡುಪ್ಲೆಸಿ‌ಸ್‌-ಡಿ ಕಾಕ್‌ ಜೋಡಿ: ಕೇವಲ 53 ರನ್‌ ಗಳಿಗೆ ಐದು ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಆಫ್ರಿಕಾ ತಂಡವನ್ನು ಮೇಲೆ ಎತ್ತುವ ಕೆಲಸವನ್ನು ನಾಯಕ ಡುಪ್ಲೆಸಿಸ್‌ ಹಾಗೂ ಡಿ ಕಾಕ್‌ ಮಾಡಿದರು. ಆರನೇ ವಿಕಟ್‌ಗೆ ಜತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ  ಅದ್ಭುತ ಬ್ಯಾಟಿಂಗ್ ಮಾಡಿತು. ಭಾರತದ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಬಹಳ ಎಚ್ಚರಿಕೆಯಿಂದ ಪ್ರದರ್ಶನ ನೀಡಿತು. ಈ ಜೋಡಿ ಮುರಿಯದ ಆರನೇ ವಿಕೆಟ್‍ಗೆ 75 ರನ್ ಕಲೆಹಾಕಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಕ್ವಿಂಟನ್‌ ಡಿ ಕಾಕ್‌ 48 ಎಸೆತಗಳಲ್ಲಿ 31 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಆರ್. ಅಶ್ವಿನ್ ಕ್ಲೀನ್ ಬೌಲ್ಡ್ ಮಾಡಿದರು.

ಡುಪ್ಲೆಸಿಸ್ ಅರ್ಧ ಶತಕ: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದ ನಾಯಕ ಫಾಫ್ ಡುಪ್ಲೆಸಿಸ್ ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದೆ ಸುಲಲಿತವಾಗಿ ಬ್ಯಾಟಿಂಗ್ ಮಾಡಿದರು. 117 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ ಒಂಬತ್ತು ಬೌಂಡರಿಯೊಂದಿಗೆ ಅಜೇಯ 64 ರನ್ ಗಳಿಸಿದರು.  ಒಂದು ತುದಿಯಲ್ಲಿ ವಿಕೆಟ್‌ ಕಾಯ್ದುಕೊಂಡಿದ್ದ ಡುಪ್ಲೆಸಿಸ್ ಅವರನ್ನು ಆರ್‌ . ಅಶ್ವಿನ್‌ ಪೆವಿಲಿಯನ್ ಹಾದಿ ತೋರಿಸಿದರು. ಇದಕ್ಕೂ ಮುನ್ನ ಏಳು ರನ್‌ ಗಳಿಸಿ ಆಡುತ್ತಿದ್ದ ಎಸ್‌. ಮುತ್ತುರಾಜ್‌ ಅವರನ್ನು ರವೀಂದ್ರ ಜಡೇಜಾ ಔಟ್‌ ಮಾಡಿದ್ದರು. 


ಕೊನೆಯಲ್ಲಿ ಕಾಡಿದ್ದ ಮಹರಾಜ್‌-ಫಿಲೆಂಡರ್‌: ಎಂಟನೇ ವಿಕೆಟ್‌ಗೆ ಜತೆಯಾದ ವೆರ್ನಾನ್‌ ಫಿಲೆಂಡರ್‌ ಹಾಗೂ ಕೇಶವ್‌ ಮಹರಾಜ್‌ ಜೋಡಿಯು ದೀರ್ಘ ಕಾಲ ಬ್ಯಾಟಿಂಗ್‌ ಮಾಡುವ ಮೂಲಕ ಭಾರತದ ಬೌಲರ್‌ಗಳನ್ನು ಹೆಚ್ಚು ಕಾಡಿತ್ತು. ಭಾರತದ ವೇಗ ಹಾಗೂ ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಈ ಜೋಡಿ ಸಮಚಿತ್ತದಿಂದ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ನಲ್ಲಿ ವಿಫಲರಾಗಿದ್ದ ಕೇಶವ್‌ ಮಹರಾಜ್‌ ಈ ಇನಿಂಗ್ಸ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದರು. 132 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿಯೊಂದಿಗೆ 72 ರನ್‌ ಗಳಿಸಿ ತಂಡದ ಹಿನ್ನಡೆಯ ಅಂತರವನ್ನು ಕಡಿಮೆಗೊಳಿಸಿದರು. ಬೌಲರ್‌ ವೆರ್ನಾನ್‌ ಫಿಲೆಂಡರ್‌ ಕೊನೆಯ ಹಂತದಲ್ಲಿ ಕೇಶವ್‌ ಮಹರಾಜ್‌ಗೆ ಹೆಗಲು ನೀಡಿದ್ದರು. 192 ಎಸೆತಗಳಲ್ಲಿ 44 ರನ್‌ ಗಳಿಸಿ ಅಜೇಯರಾಗಿ ಉಳಿದರು. ಆದರೆ, ಮತ್ತೊಂದು ತುದಿಯಲ್ಲಿ ಕಗಿಸೋ ರಬಾಡ (2) ಅವರನ್ನು ಆರ್‌. ಅಶ್ವಿನ್‌ ವಿಕೆಟ್‌ ಎತ್ತಿದರು. ಭಾರತದ ಪರ ಅಮೋಘ  ಬೌಲಿಂಗ್‌ ಮಾಡಿದ ಆರ್‌. ಅಶ್ವಿನ್‌ ನಾಲ್ಕು ವಿಕೆಟ್‌ ಪಡೆದರೆ, ಉಮೇಶ್‌ ಯಾದವ್‌ ಮೂರು ಹಾಗೂ ಮೊಹಮ್ಮದ್‌ ಶಮಿ ಎರಡು ವಿಕೆಟ್‌ ಕಬಳಿಸಿದರು.


ಸಂಕ್ಷಿಪ್ತ ಸ್ಕೋರ್‌

ಭಾರತ- ಪ್ರಥಮ ಇನಿಂಗ್ಸ್: 601/5 (ಡಿ)

ದಕ್ಷಿಣ ಆಫ್ರಿಕಾ- ಪ್ರಥಮ ಇನಿಂಗ್ಸ್: 105.4 ಓವರ್ ಗಳಲ್ಲಿ 275/10 (ಕೇಶವ್‌ ಮಹರಾಜ್‌ 72 , ಫಾಫ್ ಡುಪ್ಲೆಸಿಸ್ 64, ವೆರ್ನಾನ್‌ ಫಿಲೆಂಡರ್‌ ಅಜೇಯ 44 , ಕ್ವಿಂಟನ್ ಡಿ ಕಾಕ್ 31,  ಥ್ಯೂನಿಸ್ ಡಿ ಬ್ರೂಯಿನ್ 30;   ಆರ್‌.ಅಶ್ವಿನ್ 69 ಕ್ಕೆ 4, ಉಮೇಶ್ ಯಾದವ್ 37 ಕ್ಕೆ 3, ಮೊಹಮ್ಮದ್ ಶಮಿ 44 ಕ್ಕೆ 2)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com