ಅಕ್ಟೋಬರ್‌ 24ಕ್ಕೆ ಧೋನಿ ಭವಿಷ್ಯ ನಿರ್ಧಾರ: ಸೌರವ್ ಗಂಗೂಲಿ ಹೇಳಿದ್ದೇನು?

ಅಕ್ಟೋಬರ್ 24ರಂದು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಲು ಚುನಾಯಿತರಾಗಿರುವ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ಇದೇ ಅಕ್ಟೋಬರ್ 24ರಂದು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಲು ಚುನಾಯಿತರಾಗಿರುವ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಕೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೌರವ್ ಗಂಗೂಲಿ ಅವರು, 'ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ಮಹೇಂದ್ರಸಿಂಗ್ ಧೋನಿ ಅವರ ಭವಿಷ್ಯದ ಕುರಿತು ಕ್ರಿಕೆಟ್ ಆಯ್ಕೆ ಸಮಿತಿಯ ಸದಸ್ಯರು ಏನು ಹೇಳುತ್ತಾರೆಂದು ತಿಳಿದುಕೊಳ್ಳುತ್ತೇನೆ. ನಂತರ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಹೇಳಿದರು. ಅಂತೆಯೇ ಅಕ್ಟೋಬರ್ 24ರಂದು ಆಯ್ಕೆ ಸಮಿತಿಯೊಂದಿಗಿನ ಸಭೆಯಲ್ಲಿ ಧೋನಿ ಭವಿಷ್ಯದ ಕುರಿತು ತಿಳಿದುಕೊಳ್ಳುತ್ತೇನೆ. ಇದೆಲ್ಲದರ ಜೊತೆಗೆ ಧೋನಿ ಅವರ ಮನದಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಅವರೊಂದಿಗೂ ಚರ್ಚಿಸುತ್ತೇನೆ ಎಂದು ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಲು ಚುನಾಯಿತರಾಗಿರುವ ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ಅಕ್ಟೋಬರ್‌ 23ರಂದು ಬಿಸಿಸಿಐ ಚುನಾವಣೆ ಬಳಿಕ ಅಧಿಕೃತವಾಗಿ ಬಿಸಿಸಿಐ ಅಧ್ಯಕ್ಷರಾಗಿ ಹೊರಹೊಮ್ಮಲಿದ್ದಾರೆ. ಇದೇ ವೇಳೆ ತಾವು ಅಧಿಕಾರ ತೆಗೆದುಕೊಂಡ ಮೊರು ದಿನವೇ (ಅಕ್ಟೋಬರ್‌ 24) ವಿಕೆಟ್‌ಕೀಪರ್‌ ಎಂಎಸ್‌ ಧೋನಿ ಅವರ ಭವಿಷ್ಯದ ಕುರಿತಾಗಿ ನಿರ್ಧರಿಸುವಂತೆ ಆಯ್ಕೆದಾರರಿಗೆ ಹೇಳುವುದಾಗಿ ತಿಳಿಸಿದ್ದಾರೆ.

38 ವರ್ಷದ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ, ಕಳೆದ ಜುಲೈನಲ್ಲಿ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿಲ್ಲ. ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸೋಲುಂಡಿತ್ತು. ಆ ಪಂದ್ಯದಲ್ಲಿ ಧೋನಿ ಅರ್ಧಶತಕ ಗಳಿಸಿದರೂ ತಂಡವನ್ನು ಗುರಿ ಮುಟ್ಟಿಸಲು ಸಾಧ್ಯವಾಗದೆ ರನ್‌ ಔಟ್‌ ಆಗಿ ನಿರಾಸೆ ಅನುಭವಿಸಿದ್ದರು.

ವಿಶ್ವಕಪ್‌ ಬಳಿಕ ಭಾರತೀಯ ಸೇನೆಯ ಸೇವೆಯಲ್ಲಿ ತೊಡಗಿಸಿಕೊಂಡ ಧೋನಿ 2 ತಿಂಗಳ ವಿರಾಮ ಪಡೆದಿದ್ದರು. ನಂತರ ವೈಯಕ್ತಿಕ ಕಾರಣಗಳಿಂದ ಮತ್ತೆರಡು ತಿಂಗಳ ಹೆಚ್ಚುವರಿ ವಿರಾಮ ಕೋರಿದ್ದಾರೆ. ಹೀಗಿರುವಾಗ ಧೋನಿ ನಿವೃತ್ತಿ ಕುರಿತಾಗಿ ಎಲ್ಲಾ ವೇದಿಕೆಗಳಲ್ಲೂ ವ್ಯಾಪಕ ಚರ್ಚೆಯಾಗುತ್ತಿದೆ.

ಧೋನಿ ಅವರು ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಇತ್ತು. ಅಲ್ಲದೆ ಮಾಹಿ ವಿಂಡೀಸ್ ಪ್ರವಾಸದಿಂದಲೂ ದೂರ ಸರೆದಿದ್ದರು. ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಗಳ ಸರಣಿಗೆ ಧೋನಿ ಅವರ ಆಯ್ಕೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com