ನಾಯಕತ್ವದಿಂದ ವಜಾಗೊಂಡ ಸರ್ಫರಾಜ್ ಗೆ ಕ್ಷಮೆ ಕೋರಿದ ಪಿಸಿಬಿ! ಕಾರಣ ಏನು?

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಸರ್ಫರಾಜ್ ಅಹ್ಮದ್ ರನ್ನು ವಜಾಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕ್ ಕ್ರಿಕೆಟ್ ಅಭಿಮಾನಿಗಳ ಬಳಿ ಕ್ಷಮೆ ಕೋರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಸರ್ಫರಾಜ್ ಅಹ್ಮದ್ ರನ್ನು ವಜಾಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕ್ ಕ್ರಿಕೆಟ್ ಅಭಿಮಾನಿಗಳ ಬಳಿ ಕ್ಷಮೆ ಕೋರಿದೆ.

ಹೌದು.. ನಿನ್ನೆ ನಡೆದ ಪಿಸಿಬಿ ಸಭೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರ್ಫರಾಜ್ ಅಹ್ಮದ್ ರನ್ನು ಟೆಸ್ಟ್ ಮತ್ತು ಟಿ20 ಮಾದರಿಯ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಸಿತ್ತು. ಇನ್ನು ಆಸಿಸ್ ಪ್ರವಾಸಕ್ಕಾಗಿ ತಂಡದ ಮತ್ತೋರ್ವ ಹಿರಿಯ ಅಟಗಾರ ಅಜರ್ ಅಲಿಗೆ ಟೆಸ್ಟ್ ನಾಯಕತ್ವ ವಹಿಸಲಾಗಿದ್ದು, ಉದಯೋನ್ಮುಖ ಆಟಗಾರ ಬಾಬರ್ ಅಜಮ್ ಗೆ ಟಿ20 ತಂಡದ ನಾಯಕತ್ವ ಜವಾಬ್ದಾರಿ ನೀಡಲಾಗಿದೆ.

ಇನ್ನು ಈ ಬೆಳವಣಿಗೆ ಬೆನ್ನಲ್ಲೇ ಪಿಸಿಪಿ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ವೊಂದನ್ನು ಮಾಡಿತ್ತು. ಇದೀಗ ಈ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ಇದೇ ಟ್ವೀಟ್ ವಿಚಾರವಾಗಿ ಪಿಸಿಬಿ, ಸರ್ಫರಾಜ್ ಅಹ್ಮದ್ ಮತ್ತು ಪಾಕ್ ಕ್ರಿಕೆಟ್ ಅಭಿಮಾನಿಗಳ ಕ್ಷಮೆ ಕೋರಿದೆ. ಇಷ್ಟಕ್ಕೂ ಪಿಸಿಬಿ ಕ್ಷಮೆ ಕೋರಿದ್ದೇಕೆ.. ಆ ಟ್ವೀಟ್ ನಲ್ಲಿ ಏನಿತ್ತು ಎಂಬ ವಿಚಾರಕ್ಕೆ ಬರುವುದಾದರೆ, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಗೆ ಪಾಕಿಸ್ತಾನ ಸಿದ್ಧವಾಗುತ್ತಿದ್ದು, ಇದೇ ವಿಚಾರವಾಗಿ ಪಿಸಿಬಿ ಪಾಕ್ ಆಟಗಾರರು ನೃತ್ಯ ಮಾಡುತ್ತಿರುವ ಟ್ವೀಟ್ ಮಾಡಿತ್ತು. 

ಈ ವಿಡಿಯೋ ಟಿ20 ವಿಶ್ವಕಪ್ ಕುರಿತ ಪ್ರಮೋಷನಲ್ ವಿಡಿಯೋ ಆದರೂ ಅದನ್ನು ಅಪ್ಲೋಡ್ ಮಾಡಿದ್ದ ಸಂದರ್ಭ ಮಾತ್ರ ತಪ್ಪಾಗಿತ್ತು. ಸರ್ಫರಾಜ್ ಅಹ್ಮದ್ ರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ ಕಾರಣಕ್ಕೆ ಪಿಸಿಬಿ ಸಂಭ್ರಮಾಚರಣೆಯ ವಿಡಿಯೋ ಅಪ್ಲೋಡ್ ಮಾಡಿದೆ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದರು.

ಈ ಟ್ವೀಟ್ ವೈರಲ್ ಆದ ಬೆನ್ನಲ್ಲೇ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಪಿಸಿಬಿ, ಟ್ವೀಟ್ ತಪ್ಪಲ್ಲ. ಅದು ಟಿ20 ವಿಶ್ವಕಪ್ ನ ಪ್ರಮೋಷನಲ್ ಟ್ವೀಟ್ ಆಗಿತ್ತು. ಆದರೆ ಟ್ವೀಟ್ ಮಾಡಿದ್ದ ಸಂದರ್ಭ ತಪ್ಪು. ಇದರಿಂದ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನೆಯಾಗಿದೆ. ಇದಕ್ಕಾಗಿ ನಾವು ಕ್ಷಮೆ ಕೋರುತ್ತೇವೆ ಎಂದು ಪಿಸಿಬಿ ಮತ್ತೊಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com