ಕೆಪಿಎಲ್ ಬೆಟ್ಟಿಂಗ್: ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕನ ಬಂಧನ

ಐಪಿಎಲ್ ನಂತರ ಇದೀಗ ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಗೂ ಬೆಟ್ಟಿಂಗ್ ಬಿಸಿ ತಟ್ಟಿದ್ದು, ಬೆಟ್ಟಿಂಗ್ ದಂಧೆ ಬೇಧಿಸಿದ ಸಿಸಿಬಿ ಪೊಲೀಸರು, ದುಬೈ ಮೂಲದ ಬುಕಿ ಜತೆ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಐಪಿಎಲ್ ನಂತರ ಇದೀಗ ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಗೂ ಬೆಟ್ಟಿಂಗ್ ಬಿಸಿ ತಟ್ಟಿದ್ದು, ಬೆಟ್ಟಿಂಗ್ ದಂಧೆ ಬೇಧಿಸಿದ ಸಿಸಿಬಿ ಪೊಲೀಸರು, ದುಬೈ ಮೂಲದ ಬುಕಿ ಜತೆ ಬೆಟ್ಟಿಂಗ್ ನಡೆಸಿದ ಆರೋಪದ ಮೇಲೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಷ್ಫಕ್‌ ಅವರನ್ನು ಬಂಧಿಸಿದ್ದಾರೆ.

ಅಲಿ ಕೆಪಿಎಲ್ ಬೆಟ್ಟಿಂಗ್ ದಂಧೆಯ ಪ್ರಮುಖ ಆರೋಪಿಯಾಗಿದ್ದಾರೆ. ಆದರೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ನಮಗೆ ಇನ್ನು ಖಚಿತ ಮಾಹಿತಿ ಇಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ(ಅಪರಾಧ) ಸಂದೀಪ್ ಪಾಟೀಲ್ ಅವರು ಹೇಳಿದ್ದಾರೆ.

ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ನಡೆಸುತ್ತಿರುವ ಅನುಮಾನದ ಮೇಲೆ ಅಲಿ ಅವರನ್ನು ಮೂರು ದಿನಗಳ ಹಿಂದೆ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಮತ್ತು ಇದರೆ ಭಾಗಿಯಾಗಿರುವ ಕೆಲ ಸೆಲೆಬ್ರಿಟಿಗಳು ಹಾಗೂ ತನ್ನ ಸ್ನೇಹಿತರ ಹೆಸರನ್ನು ಹೇಳಿದ್ದಾರೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಅಲಿ ಅಷ್ಫಕ್​ ದುಬೈ ಮೂಲದ ಬುಕಿ ಜತೆ 11 ಲಕ್ಷ ರೂ. ಬೆಟ್ಟಿಂಗ್​ ಆಡಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಎಲ್​ ಟೂರ್ನಿಯ ನಿಯಮಾವಳಿಗಳ ಬಗ್ಗೆ ಮಾಹಿತಿ ಕೇಳಿ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಗೆ(ಕೆಎಸ್​ಸಿಎ) ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.

ಅಲಿ ಅಷ್ಫಕ್​ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮೂರು ದಿನಗಳಿಂದ ವಿಚಾರಣೆ ನಡೆಸಿದ್ದರು. ಅಲಿಯನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ಯಾಂಥರ್ಸ್ ಮಾಲೀಕ ಸಂಪರ್ಕ ಹೊಂದಿದ್ದ ವಿದೇಶಿ ಬುಕಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com