ವಿರಾಟ್ ಕೊಹ್ಲಿ ಎದುರು ಬಾಬರ್‌ ಅಜಾಂ ಪ್ರತಿಭೆ ಕಡೆಗಣನೆಗೆ ಗುರಿಯಾಗಿದೆ: ನಾಸಿರ್ ಹುಸೇನ್

ಆತಿಥೇಯ ಇಂಗ್ಲೆಂಡ್‌ ಮತ್ತು ಪ್ರವಾಸಿ ಪಾಕಿಸ್ತಾನ ವಿರುದ್ಧ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ಗಳ ಸರಣಿಯ ಪ್ರಥಮ ಪಂದ್ಯದ ಮೊದಲ ದಿನದಾಟ ಮಳೆ ಕಾರಣ ಕೇವಲ 49 ಓವರ್‌ಗಳ ಆಟ ಮಾತ್ರವೇ ಕಾಣಲು ಸಿಕ್ಕಿತ್ತು.
ಬಾಬರ್‌ ಅಜಾಂ
ಬಾಬರ್‌ ಅಜಾಂ

ಮ್ಯಾಂಚೆಸ್ಟರ್‌: ಆತಿಥೇಯ ಇಂಗ್ಲೆಂಡ್‌ ಮತ್ತು ಪ್ರವಾಸಿ ಪಾಕಿಸ್ತಾನ ವಿರುದ್ಧ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ಗಳ ಸರಣಿಯ ಪ್ರಥಮ ಪಂದ್ಯದ ಮೊದಲ ದಿನದಾಟ ಮಳೆ ಕಾರಣ ಕೇವಲ 49 ಓವರ್‌ಗಳ ಆಟ ಮಾತ್ರವೇ ಕಾಣಲು ಸಿಕ್ಕಿತ್ತು. 

ಈ ಅವಧಿಯಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಯುವ ಬ್ಯಾಟ್ಸ್‌ಮನ್‌ ಬಾಬರ್‌ ಅಜಾಂ ಅಮೋಘ ಅರ್ಧಶತಕ ಬಾರಿಸಿದ್ದರು. ಬೌಲರ್‌ಗಳಿಗೆ ನೆರವಾಗುತ್ತಿದ್ದ ಸ್ಥಿತಿಗತಿಗಳಲ್ಲಿ ಜೇಮ್ಸ್‌ ಆಂಡರ್ಸನ್, ಸ್ಟುವರ್ಟ್‌ ಬ್ರಾಡ್ ಮತ್ತು ಜೋಫ್ರಾ ಆರ್ಚರ್‌ ಅವರಂತಹ ಬಲಿಷ್ಠ ವೇಗಿಗಳ ಎದುರು ಬಾಬರ್‌ ಅವರ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ಕಂಡು ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್‌ ನಾಸಿರ್‌ ಹುಸೇನ್‌ ಬೆರಗಾಗಿದ್ದಾರೆ.

ಪಾಕ್‌ ತಂಡದ ನೂತನ ಬ್ಯಾಟಿಂಗ್‌ ತಾರೆಯ ಆಟ ಕಂಡು, ಈ ಆಟಗಾರ ವಿರಾಟ್‌ ಕೊಹ್ಲಿ ಅಲ್ಲ ಎಂದ ಕಾರಣಕ್ಕೆ ಈತನ ಪ್ರತಿಭೆಯನ್ನು ಕಡೆಗಣನೆ ಮಾಡಲಾಗಿದೆ. ಯಾರೊಬ್ಬರು ಕೂಡ ಈತನ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಈಗ ವಿಶ್ವ ಕ್ರಿಕೆಟ್‌ನಲ್ಲಿ ಟಾಪ್‌ 4 ಬ್ಯಾಟ್ಸ್‌ಮನ್‌ಗಳೆಂದು ವಿರಾಟ್‌ ಕೊಹ್ಲಿ, ಸ್ಟೀವ್‌ ಸ್ಮಿತ್‌, ಜೋ ರೂಟ್‌ ಮತ್ತು ಕೇನ್‌ ವಿಲಿಯಮ್ಸನ್‌ ಬಗ್ಗೆ ಮಾತ್ರವೇ ಮಾತನಾಡಲಾಗುತ್ತದೆ. ಆದರೆ, ಇದನ್ನು ಟಾಪ್‌ 5 ಎಂದು ಮಾಡಿ ಬಾಬರ್‌ ಅವರನ್ನು ಆ ಪಟ್ಟಿಗೆ ಸೇರಿಸುವ ಅಗತ್ಯವಿದೆ ಎಂದಿದ್ದಾರೆ.

ಬಾಬರ್‌, ಪಂದ್ಯದ ಮೊದಲ ದಿನದಾಟದಲ್ಲಿ 100 ಎಸೆತಗಳನ್ನು ಎದುರಿಸಿ 11 ಫೋರ್‌ಗಳನ್ನು ಬಾರಿಸುವ ಮೂಲಕ 69 ರನ್‌ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದರು. ಆದರೆ, ಎರಡನೇ ದಿನದಾಟದಲ್ಲಿ ಎದುರಿಸಿದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಜೇಮ್ಸ್‌ ಆಂಡರ್ಸನ್‌ಗೆ ವಿಕೆಟ್‌ ಒಪ್ಪಿಸಿ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್‌ ಸೇರಿದರು. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾಬರ್‌ ಅವರ ಸತತ ಐದನೇ 50+ ಸ್ಕೋರ್‌ ಇದು ಎಂಬುದು ಇಲ್ಲಿ ಗಮನಾರ್ಹ.

"ಒಂದು ವೇಳೆ ಇದು ವಿರಾಟ್‌ ಕೊಹ್ಲಿ ಆಗಿದ್ದರೆ, ಪ್ರತಿಯೊಬ್ಬರ ಬಾಯಲ್ಲೂ ಇಂದು ಇವರ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಇದು ಬಾಬರ್‌ ಆಝಮ್ ಆದ ಕಾರಣ ಯಾರೊಬ್ಬರೂ ಮಾತನಾಡುತ್ತಿಲ್ಲ. ಅವರು ಯುವ ಆಟಗಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ," ಎಂದು ಹುಸೇನ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com