ಎಂಎಸ್ ಧೋನಿಗೆ ರಾಂಚಿಯಲ್ಲಿ ವಿದಾಯದ ಪಂದ್ಯ ಆಯೋಜಿಸಿ: ಬಿಸಿಸಿಐಗೆ ಜಾರ್ಖಂಡ್ ಸಿಎಂ ಮನವಿ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿನ್ನೆ ನಿವೃತ್ತಿ ಘೋಷಣೆ ಮಾಡಿರುವ ಭಾರತದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ರಾಂಚಿಯಲ್ಲಿ ವಿದಾಯದ ಪಂದ್ಯ ಆಯೋಜಿಸಿ ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಎಂಎಸ್ ಧೋನಿ, ವಿರಾಟ್ ಕೊಹ್ಲಿ
ಎಂಎಸ್ ಧೋನಿ, ವಿರಾಟ್ ಕೊಹ್ಲಿ

ರಾಂಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿನ್ನೆ ನಿವೃತ್ತಿ ಘೋಷಣೆ ಮಾಡಿರುವ ಭಾರತದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ರಾಂಚಿಯಲ್ಲಿ ವಿದಾಯದ ಪಂದ್ಯ ಆಯೋಜಿಸಿ ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹೇಮಂತ್ ಸೊರೇನ್ ಅವರು, ಜಾರ್ಖಂಡ್ ನ ಹೆಮ್ಮೆಯ ಪುತ್ರನಾದ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಧೋನಿ ನೀಲಿ ಬಣ್ಣದ ಜೆರ್ಸಿ ಧರಿಸುವುದನ್ನು ನಾವು ನೋಡಲು ಸಾಧ್ಯವಿಲ್ಲ. ಆದರೆ ದೇಶದ ಜನತೆ ಧೋನಿಯನ್ನು ಅಂತಿಮವಾಗಿ ನೀಲಿ ಬಣ್ಣದ ಜೆರ್ಸಿ ತೊಟ್ಟು ಆಡುವುದನ್ನು ನೋಡಲು ಇಚ್ಛಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಕೊನೆಯದಾಗಿ ವಿದಾಯದ ಪಂದ್ಯವನ್ನಾಡುವ ಅವಕಾಶ ನೀಡಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಇನ್ನು ಹೇಮಂತ್ ಸೊರೇನ್ ಮಾತ್ರವಲ್ಲದೇ ಕ್ರೀಡಾಭಿಮಾನಿಗಳು ಕೂಡ ಧೋನಿ ವಿದಾಯದ ಪಂದ್ಯಕ್ಕೆ ಆಗಹಿಸುತ್ತಿದ್ದಾರೆ. ಧೋನಿ ಮಾತ್ರವಲ್ಲದೇ ಈ ಹಿಂದೆ ವಿದಾಯ ಘೋಷಣೆ ಮಾಡಿದ್ದ ಇತರೆ ಆಟಗಾರರಿಗೂ ವಿದಾಯದ ಪಂದ್ಯ ಆಯೋಜಿಸುವಂತೆ ಆಗ್ರಹಿಸಿದ್ದಾರೆ. 

ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, ಯುವರಾಜ್‌ ಸಿಂಗ್‌, ಗೌತಮ್‌ ಗಂಭೀರ್‌, ಜಹೀರ್‌ ಖಾನ್‌ ಹಾಗೂ ವೀರೇಂದ್ರ ಸೆಹ್ವಾಗ್‌ ಸೇರಿದಂತೆ ಹಲವು ಆಟಗಾರರಿಗೆ ಸೂಕ್ತ ರೀತಿಯಲ್ಲಿ ಕ್ರಿಕೆಟ್‌ ವೃತ್ತಿ ಬದುಕಿನಿಂದ ಬೀಳ್ಕೊಡುಗೆ ನೀಡಲಾಗಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 'ವಿದಾಯ ಪಂದ್ಯ' ಬೇಕು ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.

ನಿವೃತ್ತರಾಗಿರುವ 11 ಜನ ಆಟಗಾರರ ತಂಡವನ್ನೇ ರಚಿಸಿ 'ಇದೋ ಪಂದ್ಯಕ್ಕೆ ತಂಡ ಸಿದ್ಧವಿದೆ. ನೀವೂ ತಂಡ ರಚಿಸಿ, ಎರಡೂ ತಂಡಗಳ ನಡುವೆ ಪಂದ್ಯ ನಡೆಸಿ' ಎಂದು ಅಭಿಮಾನಿಗಳು ಬಿಸಿಸಿಐ ಟ್ಯಾಗ್‌ ಮಾಡಿ ಟ್ವೀಟಿಸಿದ್ದಾರೆ. ಸಚಿನ್‌ ನಂತರ ದೇಶದ ಯಾವುದೇ ಪ್ರಮುಖ ಆಟಗಾರರಿಗೆ ಸರಿಯಾದ ಬೀಳ್ಕೊಡುಗೆ ನೀಡಲಾಗಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ 19ರಿಂದ ಯುಎಇನಲ್ಲಿ ನಡೆಯಲಿರುವ ಐಪಿಎಲ್‌ ಪಂದ್ಯಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮೂಲಕ 'ಎಂಎಸ್‌ಡಿ' ಆಟ ಮುಂದುವರಿಸಲಿದ್ದಾರೆ. 2019ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರಿನ ಪಂದ್ಯವೇ ಅವರ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್. ವಿಕೆಟ್‌ ಕೀಪಿಂಗ್‌, ಬ್ಯಾಟಿಂಗ್‌ ಹಾಗೂ ನಾಯಕತ್ವದಲ್ಲಿ ನಡೆಸಿರುವ ಸಾಧನೆಗಳು ದಾಖಲೆಗಳಾಗಿ ಉಳಿದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com