ಭಾರತೀಯ ಚೆಲುವೆ ಜೊತೆಗೆ ಪಾಕ್ ಕ್ರಿಕೆಟಿಗನ ಡೇಟಿಂಗ್ ತಪ್ಪಿಸಿದ್ದ ಎಂಎಸ್ ಧೋನಿ, ಅದು ಹೇಗೆ ಗೊತ್ತ!
ಟೀಂ ಇಂಡಿಯಾದ ಯಶಸ್ವಿ ನಾಯಕನಾಗಿದ್ದ ಎಂಎಸ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಕೆಲ ವಿಶೇಷ ಸಂಗತಿಗಳು ಬಹಿರಂಗಗೊಳ್ಳುತ್ತಿವೆ.
Published: 21st August 2020 05:25 PM | Last Updated: 21st August 2020 05:25 PM | A+A A-

ಎಂಎಸ್ ಧೋನಿ
ನವದೆಹಲಿ: ಟೀಂ ಇಂಡಿಯಾದ ಯಶಸ್ವಿ ನಾಯಕನಾಗಿದ್ದ ಎಂಎಸ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಕೆಲ ವಿಶೇಷ ಸಂಗತಿಗಳು ಬಹಿರಂಗಗೊಳ್ಳುತ್ತಿವೆ.
ಟೀಂ ಇಂಡಿಯಾಗೆ ಆಯ್ಕೆ ಆಗುವ ಮುನ್ನ ಎಂಎಸ್ ಧೋನಿ ಅವರು ಭಾರತ 'ಎ' ತಂಡದಲ್ಲಿ ಆಡಿದ್ದರು. ಅಂದು ಗೆದ್ದಂತಹ ಆ ತ್ರಿಕೋನ ಸರಣಿಯಲ್ಲಿ ಧೋನಿ ತಂಡದ ಪರ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ಸರಣಿಯಲ್ಲಿ ಪಾಕಿಸ್ತಾನ ತಂಡದ ಬೌಲರ್‌ಗಳನ್ನು ಧೂಳೀಪಟ ಮಾಡಿದ್ದಕ್ಕಿಂತಲೂ ಮಿಗಿಲಾಗಿ ಧೋನಿ ಪಾಕ್ ತಂಡದ ಆಟಗಾರನೊಬ್ಬನ ಹೃದಯ ಒಡೆದು ಹೋಗುವಂತಹ ಕೆಲಸವನ್ನೂ ಮಾಡಿದ್ದರು.
ಕ್ರಿಕ್‌ಬಝ್ ಮಾಡಿರುವ ವರದಿ ಪ್ರಕಾರ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಆ ಸರಣಿಯಲ್ಲಿ ಬಾರಿಸಿದ್ದ ಸಿಕ್ಸರ್, ಪಾಕಿಸ್ತಾನ 'ಎ' ತಂಡದ ಆಟಗಾರನೊಬ್ಬನ ಡೇಟಿಂಗ್‌ಗೆ ಕಲ್ಲು ಹಾಕಿತ್ತಂತೆ. ನೈರೋಬಿಯಲ್ಲಿ ನಡೆದ ಪಂದ್ಯದಲ್ಲಿ ಲಾಂಗ್ ಆನ್‌ನಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಪಾಕಿಸ್ತಾನ ತಂಡದ ಆಟಗಾರನೊಬ್ಬ ಅಲ್ಲೆ ಹತ್ತಿರದಲ್ಲಿನ ಗ್ಯಾಲರಿಯಿಂದ ಪಂದ್ಯ ವೀಕ್ಷಿಸುತ್ತಿದ್ದ ಭಾರತೀಯ ಹುಡುಗಿಯೊಂದಿಗೆ ಡೇಟಿಂಗ್ ಸೆಟ್ ಮಾಡಿಕೊಂಡಿದ್ದರಂತೆ.
ಆ ಪಂದ್ಯದಲ್ಲಿ ಧೋನಿ ಸಿಕ್ಸರ್‌ಗಳ ಸುರಿಮಳೆ ಗೈಯುತ್ತಿದ್ದ ಕಾರಣ ಹಲವು ಸಮಯ ಆ ಒಬ್ಬ ಫೀಲ್ಡರ್‌ಗೆ ಬೌಂಡರಿ ಗೆರೆ ಬಳಿಯೇ ನಿಲ್ಲುವಂತೆ ಮಾಡಿತ್ತು. ಈ ಸಮಯದಲ್ಲಿ ಆ ಹುಡುಗಿಯನ್ನು ಡೇಟಿಂಗ್‌ಗೆ ಕರೆಯುವಲ್ಲಿ ಯಶಸ್ವಿಯಾಗಿದ್ದರು ಕೂಡ. ಆದರೆ, ಡೇಟಿಂಗ್ ಸಲುವಾಗಿ ಯಾವುದಾದರು ರೆಸ್ಟೋರೆಂಟ್‌ಗೆ ಹೋಗುವ ಬದಲು ಆಸ್ಪತ್ರೆಗೆ ಹೋಗುವಂತಾಗಿದ್ದು ಧೋನಿ ಹೊಡೆದ ಸಿಕ್ಸರ್ ನಿಂದಾಗಿ ಎಂದು ಹೇಳಿಕೊಂಡಿದ್ದಾರೆ.
ಫೀಲ್ಡಿಂಗ್ ಸ್ಥಳದಲ್ಲಿ ಬದಲಾವಣೆಯಾಗಿ ಮಿಡ್‌ಆಫ್ ಕಡೆಗೆ ಬಂದಿದ್ದ ಆದೇ ಆಟಗಾರನ ತಲೆ ಮೇಲೆ ಚೆಂಡು ಹಾರುವಂತೆ ಧೋನಿ ಸಿಕ್ಸರ್ ಬಾರಿಸಿದ್ದರು. ಬಳಿಕ ಅಲ್ಲಿ ವೈದ್ಯಕೀಯ ಸಿಬ್ಬಂದಿ ದೌಡಾಯಿಸಿದ್ದರು. ಅತ್ತ ತಿರುಗಿ ನೋಡಿದಾಗ ಡೇಟಿಂಗ್ ಫಿಕ್ಸ್ ಮಾಡಿದ್ದ ಹುಡುಗಿಗೆ ಚೆಂಡು ಬಡಿದು ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಪಾಕಿಸ್ತಾನದ ಕ್ರಿಕೆಟಿಗ ನೈಜ ಘಟನೆಯೊಂದನ್ನು ತೆರೆದಿಟ್ಟಿದ್ದಾರೆ.