ನಾಳೆ ಭಾರತ-ಆಸ್ಟ್ರೇಲಿಯಾ ನಡುವೆ 3ನೇ ಏಕದಿನ ಪಂದ್ಯ: ಗೆಲುವಿನ ಲಯ ಕಂಡುಕೊಳ್ಳಲು ಟೀಂ ಇಂಡಿಯಾ ತವಕ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬುಧವಾರ (ಡಿಸೆಂಬರ್‌ 2ರಂದು) ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ನಾಳೆ ಭಾರತ-ಆಸ್ಟ್ರೇಲಿಯಾ ನಡುವೆ 3ನೇ ಏಕದಿನ ಪಂದ್ಯ: ಗೆಲುವಿನ ಲಯ ಕಂಡುಕೊಳ್ಳಲು ಟೀಂ ಇಂಡಿಯಾ ತವಕ

ಕ್ಯಾನ್ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬುಧವಾರ (ಡಿಸೆಂಬರ್‌ 2ರಂದು) ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ (ಎಸ್‌ಸಿಜಿ) ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸತಿಥೇಯ ಆಸ್ಟ್ರೇಲಿಯಾ ತಂಡ ಕ್ರಮವಾಗಿ 66 ಮತ್ತು 51 ರನ್‌ಗಳ ಭರ್ಜರಿ ಜಯ ದಾಖಲಿಸಿ ಸರಣಿ ಗೆಲುವನ್ನು ಖಾತ್ರಿ ಪಡಿಸಿಕೊಂಡಿದೆ. ಟೀಮ್‌ ಇಂಡಿಯಾ ಕಳಪೆ ಬೌಲಿಂಗ್‌ ಪ್ರದರ್ಶನದ ಸಂಪೂರ್ಣ ಲಾಭ ಪಡೆದ ಆಸೀಸ್‌ ಪಡೆ ಮೊದಲ ಪಂದ್ಯದಲ್ಲಿ 374/6 ಮತ್ತು ಎರಡನೇ ಪಂದ್ಯದಲ್ಲಿ 389/4 ರನ್‌ಗಳ ಬೃಹತ್‌ ಮೊತ್ತ ಪೇರಿಸಿ ಯಶಸ್ಸು ಕಂಡಿದೆ.

ಆಸೀಸ್‌ನ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಬ್ಯಾಕ್‌ ಟು ಬ್ಯಾಕ್‌ ಶತಕ ದಾಖಲಿಸುವ ಮೂಲಕ ಸತತ ಪಂದ್ಯಶ್ರೇಷ್ಠ ಗೌರವವನ್ನೂ ಪಡೆದುಕೊಂಡಿದ್ದಾರೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಸ್ಮಿತ್‌ ಓಟಕ್ಕೆ ಬ್ರೇಕ್‌ ಹಾಕಿ ಟಿ20 ಸರಣಿ ಆರಂಭಕ್ಕೂ ಮುನ್ನ ಗೆಲುವಿನ ಲಯ ಕಂಡುಕೊಳ್ಳುವುದು ಭಾರತ ತಂಡದ ಲೆಕ್ಕಾಚಾರವಾದರೆ, 3-0 ಅಂತರದಲ್ಲಿ ಸರಣಿ ವೈಟ್‌ವಾಷ್‌ ಮಾಡುವತ್ತ ಆಸ್ಟ್ರೇಲಿಯಾ ಕಣ್ಣಿಟ್ಟಿದೆ.

ಇನ್ನು 2ನೇ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಗಾಯಗೊಂಡಿದ್ದು, ಮೂರನೇ ಒಡಿಐ ಮತ್ತು ಟಿ20 ಕ್ರಿಕೆಟ್‌ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಮೂರನೇ ಒಡಿಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಆಡುವ 11ರ ಬಳಗದಲ್ಲಿ ಅನಿವಾರ್ಯವಾಗಿ ಕನಿಷ್ಠ ಒಂದು ಬದಲಾವಣೆ ತರುವಂತ್ತಾಗಿದೆ. ಮತ್ತೊಂದೆಡೆ ಸತತವಾಗಿ ಸೋತು ಸುಣ್ಣವಾಗಿರುವ ವಿರಾಟ್‌ ಕೊಹ್ಲಿ ಬಳಗ ಕೂಡ ತನ್ನ ಆಡುವ 11ರ ಬಳಗದಲ್ಲಿ ಕೆಲ ಮಹತ್ವದ ಬದಲಾವಣೆ ತಂದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.

ಹವಾಮಾನ ವರದಿ/ ಪಿಚ್‌ ರಿಪೋರ್ಟ್‌: ಮನುಕಾ ಓವಲ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಯಾವುದೇ ಮುನ್ಸೂಚನೆ ಇಲ್ಲ. ಬದಲಿಗೆ ಬಿರುಬಿಸಿಲು ಇರಲಿದೆ. ಉಷ್ಣಾಂಶ 24 ಡಿಗ್ರಿ ಸೆಲ್ಷಿಯಸ್‌ನಷ್ಟಿರಲಿದ್ದು, ಡೇ-ನೈಟ್‌ ಪಂದ್ಯ ಯಾವುದೇ ಅಡಚಣೆಯಿಲ್ಲದೆ ನಡೆಯುವ ಸಾಧ್ಯತೆ ಹೆಚ್ಚಿದೆ.

ಪಿಚ್‌ ಸ್ಥಿತಿಗತಿ: ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಕಳೆದ ಕೆಲ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಕಂಡುಬಂದಿದೆ. ಹೀಗಾಗಿ ಈ ಪಂದ್ಯದಲ್ಲೂ ರನ್‌ ಹೊಳೆ ನಿರೀಕ್ಷಿಸಬಹುದಾಗಿದೆ. ಇನ್ನು ಪಿಚ್‌ ವೇಗಿಗಳಿಗೆ ಮತ್ತು ಇನಿಂಗ್ಸ್‌ ಮಧ್ಯದಲ್ಲಿ ಸ್ಪಿನ್ನರ್‌ಗಳಿಗೂ ನೆರವಾಗಲಿದೆ. ಅಂದಹಾಗೆ ಆರಂಭಿಕ ವಿಕೆಟ್‌ ಪಡೆಯದೇ ಇದ್ದರೆ ಬೌಲರ್‌ಗಳ ಕೆಲಸ ಕಷ್ಟವಾಗುವುದಂತೂ ನಿಶ್ಚಿತ. ಈ ಹಿಂದಿನ ಎರಡೂ ಪಂತ್ತಗಳಲ್ಲಿ ಇತ್ತಂಡಗಳು 300+ ರನ್‌ಗಳನ್ನು ಗಳಿಸಿವೆ. ಈ ಪಂದ್ಯದಲ್ಲೂ ಇಷ್ಟೇ ಬಲವಾದ ಪ್ರದರ್ಶನ ನಿರೀಕ್ಷಿಸಲಾಗಿದೆ.

ಆಸ್ಟ್ರೇಲಿಯಾ ಸಂಭಾವ್ಯ ತಂಡ: 1. ಆರೊನ್‌ ಫಿಂಚ್‌ (ಓಪನರ್‌/ನಾಯಕ), 2. ಮಾರ್ನಸ್‌ ಲಾಬುಶೇನ್ (ಓಪನರ್‌), 3. ಸ್ಟೀವ್‌ ಸ್ಮಿತ್‌ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್), 4. ಕ್ಯಾಮೆರೂನ್ ಗ್ರೀನ್/ಮ್ಯಾಥ್ಯೂ ವೇಡ್ (ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್), 5. ಮೊಯ್ಸೆಸ್‌ ಹೆನ್ರಿಕ್ಸ್‌ (ಆಲ್‌ರೌಂಡರ್‌), 6. ಗ್ಲೆನ್‌ ಮ್ಯಾಕ್ಸ್‌ವೆಲ್‌ (ಆಲ್‌ರೌಂಡರ್‌) 7. ಅಲೆಕ್ಸ್‌ ಕೇರಿ (ವಿಕೆಟ್‌ಕೀಪರ್‌), 8. ಶಾನ್‌ ಅಬಾಟ್‌ (ಬೌಲಿಂಗ್‌ ಆಲ್‌ರೌಂಡರ್), 9. ಮಿಚೆಲ್‌ ಸ್ಟಾರ್ಕ್‌ (ಎಡಗೈ ವೇಗಿ), 10. ಜಾಶ್‌ ಹೇಝಲ್‌ವುಡ್‌ (ಬಲಗೈವೇಗಿ), 11. ಆಡಮ್‌ ಝಾಂಪ (ಲೆಗ್‌ ಸ್ಪಿನ್ನರ್‌)

ಭಾರತ ಸಂಭಾವ್ಯ ತಂಡ: 1. ಮಯಾಂಕ್‌ ಅಗರ್ವಾಲ್ (ಓಪನರ್‌), 2. ಶಿಖರ್‌ ಧವನ್ (ಓಪನರ್‌), 3. ವಿರಾಟ್ ಕೊಹ್ಲಿ (ನಾಯಕ / ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್), 4. ಶ್ರೇಯಸ್‌ ಅಯ್ಯರ್‌ (ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್), 5. ಕೆಎಲ್ ರಾಹುಲ್ (ವಿಕೆಟ್‌ಕೀಪರ್‌) 6. ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್‌), 7. ರವೀಂದ್ರ ಜಡೇಜಾ (ಆಲ್‌ರೌಂಡರ್) , 8. ಟಿ ನಟರಾಜನ್ / ನವದೀಪ್‌ ಸೈನಿ (ವೇಗಿಗಳು), 9. ಯುಜ್ವೇಂದ್ರ ಚಹಲ್‌ (ಲೆಗ್‌ ಸ್ಪಿನ್ನರ್‌), 10. ಮೊಹಮ್ಮದ್ ಶಮಿ (ಬಲಗೈ ವೇಗಿ), 11. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com