ಸಿಡ್ನಿ: ಆಸ್ಟ್ರೇಲಿಯಾ ಯುವತಿಯ ಹೃದಯ ಕದ್ದ ಬೆಂಗಳೂರಿನ ಯುವಕ!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ನಡೆಯುವ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಅಭಿಮಾನಿಯೊಬ್ಬ, ಆಸ್ಟ್ರೇಲಿಯಾದ ಹುಡುಗಿಗೆ ಲವ್ ಪ್ರಪೋಸ್ ಮಾಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು. ಅಲ್ಲದೆ, ಆ ಯುವಕ ಯಾರೆಂಬ ಕುತೂಹಲ ಎಲ್ಲರಲ್ಲೂ ಶುರುವಾಗಿತ್ತು. 
ರೋಸಿಲೀ ವಿಂಬುಷ್ ಮತ್ತು ದಿಪೇನ್ ಮಂಡಲಿಯಾ
ರೋಸಿಲೀ ವಿಂಬುಷ್ ಮತ್ತು ದಿಪೇನ್ ಮಂಡಲಿಯಾ

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ನಡೆಯುವ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತೀಯ ಅಭಿಮಾನಿಯೊಬ್ಬ, ಆಸ್ಟ್ರೇಲಿಯಾದ ಹುಡುಗಿಗೆ ಲವ್ ಪ್ರಪೋಸ್ ಮಾಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು. ಅಲ್ಲದೆ, ಆ ಯುವಕ ಯಾರೆಂಬ ಕುತೂಹಲ ಎಲ್ಲರಲ್ಲೂ ಶುರುವಾಗಿತ್ತು. 

ಇದೀಗ ಯುವಕ ಬೆಂಗಳೂರಿನವನೆಂದು ತಿಳಿದುಬಂದಿದೆ. ಆ ಯುವಕ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿರುವ ದಿಪೇನ್ ಮಂಡಲಿಯಾ ಎಂದು ಹೇಳಲಾಗುತ್ತಿದೆ. 

ಕಳೆದ ಒಂದೂವರೆ ವರ್ಷದಿಂದ ಪರಿಚಯವಿದ್ದ ಗೆಳತಿ, ಆಸೀಸ್ ಪ್ರಜೆಯಾಗಿರುವ ರೋಸಿಲೀ ವಿಂಬುಷ್'ಗೆ ಕ್ರೀಡಾಂಗಣದಲ್ಲಿ ದಿಪೇನ್ ಲವ್ ಪ್ರಪೋಸ್ ಮಾಡಿದ್ದರು. 

ಪಂದ್ಯದ ನಡುವಲ್ಲೇ ಆಸ್ಟ್ರೇಲಿಯಾ ಯುವತಿಗೆ ಯುವಕ ಪ್ರಪೋಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. 

ದಿಪೇನ್ ಮಂಡಲಿಯಾ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಮ್ಯಾನೇಜ್'ಮೆಂಟ್ ಪದವಿ ಪಡೆದಿದ್ದಾರೆ. ದೀಪೆನ್, ಸದ್ಯ ಆಸ್ಟ್ರೇಲಿಯಾದ ಮೆಲ್ಬರ್ನ್'ನಲ್ಲಿನ ಜೆಟ್'ಸ್ಟಾರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಒಂದು ತಿಂಗಳ ಹಿಂದಿನಿಂದಲೂ ಯಾವ ರೀತಿ ಪ್ರಪೋಸ್ ಮಾಡಬೇಕೆಂದು ಚಿಂತಿಸುತ್ತಿದ್ದೆ. ಬಳಿಕ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಮುಂದೆ ಪ್ರಪೋಸ್ ಮಾಡಲು ನಿರ್ಧರಿಸಿದ್ದೆ. ಆದರೆ, ಅಷ್ಟರಲ್ಲಿ ಅಂತರ್ ರಾಷ್ಟ್ರೀಯ ಗಡಿ ನಿರ್ಬಂಧ ಸಮಸ್ಯೆಗಳು ಆರಂಭವಾಗಿತ್ತು. ಹೀಗಾಗಿ ಕುಟುಂಬಸ್ಥರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಪಂದ್ಯದ ಹಿಂದಿನ ದಿನ ರಾತ್ರಿ ಸಿಡ್ನಿ ಕ್ರಿಕೆಟ್ ಮೈದಾನದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಎಲ್ಲವೂ ಯೋಜಿತ ರೀತಿಯಲ್ಲೇ ನಡೆಯಿತು ಎಂದು ದಿಪೇನ್ ಮಂಡಲಿಯಾ ಹೇಳಿದ್ದಾರೆ. 

ನಾವು ಕ್ರಿಕೆಟ್ ಅಭಿಮಾನಿಗಳು. ನಮ್ಮ ತಂಡಗಳಿಗೆ ಬೆಂಬಲ ನೀಡುವ ವಿಚಾರ ಬೇರೆಯಾಗಿರುತ್ತದೆ. ಭಾರತಕ್ಕೆ ನನ್ನ ಬೆಂಬಲ ಮುಂದುವರೆಯುತ್ತದೆ. ಹಾಗೆಯೇ ರೋಸಿಲೀ ವಿಂಬುಷ್ ಅವರ ಬೆಂಬಲ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ. 

ಎಲ್ಲವೂ ನಮ್ಮ ಪ್ಲಾನ್ ರೀತಿಯಲ್ಲಿಯೇ ನಡೆದಿತ್ತು. ಆದರೆ, ವಿಡಿಯೋ ಈ ಮಟ್ಟಕ್ಕೆ ವೈರಲ್ ಆಗುತ್ತದೆ ಎಂದುಕೊಂಡಿರಲಿಲ್ಲ. ವಿಡಿಯೋ ಪ್ರಸಾರವಾಗುತ್ತಿದ್ದಂತೆಯೇ ನನ್ನ ಸ್ನೇಹಿತರು ಹಾಗೂ ಕುಟುಂಬಸ್ಥರು ಎಡೆಬಿಡದೆ ಫೋನ್ ಮಾಡುತ್ತಿದ್ದರು. ಆಗಲೇ ವಿಡಿಯೋ ಈ ಮಟ್ಟಕ್ಕೆ ವೈರಲ್ ಆಗಿರುವುದು ನನಗೆ ತಿಳಿದಿದ್ದು ಎಂದಿದ್ದಾರೆ. 

ಬೆಂಗಳೂರಿv ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಮುಂದಿನ ವಿದ್ಯಾಭ್ಯಾಸಕ್ಕೆ ದಿಪೇನ್ ಅವರು ಸಿಡ್ನಿಗೆ ತೆರಳಿದ್ದರು. ಮತ್ತೊಂದೆಡೆ ರೋಸೀಲೀ ಅವರೂ ಕೂಡ ಮುಂದಿನ ವಿದ್ಯಾಭ್ಯಾಸಕ್ಕೆ ಮೆಲ್ಬರ್ನ್'ಗೆ ತೆರಳಿದ್ದರು. 

ಮೆಲ್ಬರ್ನ್ ಅಪಾರ್ಟ್'ಮೆಂಟ್'ಗೆ ತೆರಳಿದ್ದಾಗ ಈ ಹಿಂದೆ ಇದೇ ಅಪಾರ್ಟ್'ಮೆಂಟ್ ನಲ್ಲಿ ವಾಸವಿದ್ದವರಿಗೆ ಬರುತ್ತಿದ್ದ ಇಮೇಲ್ ಗಳು ನನಗೆ ಬರಲು ಶುರುವಾಗಿತ್ತು. ನೇರವಾಗಿ ಈ ಹಿಂದೆ ಅಪಾರ್ಟ್'ಮೆಂಟ್ ನಲ್ಲಿ ವಾಸವಿದ್ದವರಿಗೆ ಆ ಮೇಲ್'ಗಳನ್ನು ಕಳುಹಿಸಲು ನಾನು ಪ್ರಯತ್ನಿಸುತ್ತಿದ್ದೆ. ಈ ವೇಳೆ ಫೇಸ್'ಬುಕ್ ಪ್ರೈವೇಟ್ ಗ್ರೂಪ್ ನಲ್ಲಿ ರೋಸೀಲೀ ಅವರು ಸಿಕ್ಕಿದ್ದರು. ಇಮೇಲ್ ಬಗ್ಗೆ ಅವರಿಗೆ ತಿಳಿಸಿದ್ದೆ. ಬಳಿಕ ನಮ್ಮ ಮಾತುಕತೆ ಕೇವಲ 10 ಸೆಕೆಂಡ್ ಗಳಲ್ಲಿ ಮುಕ್ತಾಯಗೊಂಡಿತ್ತು. ಇದಾದ ಕೆಲ ದಿನಗಳ ಬಳಿಕ ಮತ್ತೆ ನನಗೆ ಇಮೇಲ್ ಬರಲು ಆರಂಭವಾಗಿತ್ತು. ಮತ್ತೆ ರೋಸಿಲೀ ಅವರನ್ನು ಸಂಪರ್ಕಿಸಿದ್ದೆ. ಬಳಿಕ ರೋಸಿಲೀ ಅವರು ಧನ್ಯವಾದ ಹೇಳುವ ಸಲುವಾಗಿ ಕಾಫಿ ಕೊಡಿಸಿದ್ದರು. ಆ ಕಾಫಿ ಕುಡಿಯಲು ನಾವಿಬ್ಬರು ತೆಗೆದುಕೊಂಡ 10 ನಿಮಿಷಗಳ ಮಾತುಕತೆ ಪ್ರೀತಿಗೆ ಬೀಳುವಂತೆ ಮಾಡಿತ್ತು. ಬಳಿಕ ನಮ್ಮ ಭೇಟಿ ಗಂಟೆಗಟ್ಟಲೇ ಮುಂದುವರೆಯಲು ಆರಂಭವಾಗಿತ್ತು. ಕ್ರಿಕೆಟ್ ಬಗ್ಗೆಯೂ ನಾವಿಬ್ಬರೂ ಸಾಕಷ್ಟು ಮಾತನಾಡುತ್ತಿದ್ದೆವು ಎಂದು ದಿಪೇನ್ ಅವರು ತಮ್ಮ ಪ್ರೀತಿ ಆರಂಭವಾದ ಬಗೆಯನ್ನು ವಿವರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com