ಎಂಜಲು ನಿಷೇಧದಿಂದಾಗಿ ಬೌಲರ್ ಗಳ ಕೈ ಕಟ್ಟಿ ಹಾಕಿದಂತಾಗಿದೆ: ಸಚಿನ್ ತೆಂಡೂಲ್ಕರ್

ಕೋವಿಡ್ ಲಾಕ್ ಡೌನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗಿದೆಯಾದರೂ, ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿಹಾಕಿದಂತಾಗಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಮುಂಬೈ: ಕೋವಿಡ್ ಲಾಕ್ ಡೌನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗಿದೆಯಾದರೂ, ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿಹಾಕಿದಂತಾಗಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿ ಹಾಕಿದಂತಾಗಿದ್ದು, ಬಯೋ ಬಬಲ್ ನಲ್ಲಿ ಉಳಿದುಕೊಳ್ಳಲು ಕ್ರಿಕೆಟಿಗರು ಸಾಕಷ್ಟು ಹರಸಾಹಸ ಪಡಬೇಕು. ಇದು ನಿಜಕ್ಕೂ ಅವರಿಗೆ ದೊಡ್ಡ ಸವಾಲಿನ ಕೆಲಸವೇ ಸರಿ, ಇನ್ನು ಕೋವಿಡ್ ನಿಯಮಗಳೂ ಕೂಡ ಕ್ರಿಕೆಟಿಗರನ್ನು ಇನ್ನಿಲ್ಲದಂತೆ ಗೊಂದಲಕ್ಕೀಡು ಮಾಡಿದ್ದು, ಪ್ರಮುಖವಾಗಿ ಎಂಜಲು ನಿಷೇಧ ನಿಯಮ ಬೌಲರ್ ಗಳ ಕೈ ಕಟ್ಟಿ ಹಾಕಿದೆ. ಚೆಂಡಿಗೆ ಎಂಜಲು ಹಾಕುವ ಮೂಲಕ ಬೌಲರ್ ಗಳು ಚೆಂಡಿನ ಮೇಲಿನ ಹಿಡಿತವನ್ನು ಸಾಧಿಸುತ್ತಿದ್ದರು. ಆದರೆ ಇದರ ನಿಷೇದಿಂದಾಗಿ ಚೆಂಡಿನ ಮೇಲಿನ ಹಿಡಿತ ಸಾಧಿಸಲಾಗದೇ ಬೌಲರ್ ಗಳು ಪರದಾಡುತ್ತಿದ್ದಾರೆ. 

ಪ್ರಮುಖವಾಗಿ ಭಾರತ ಜಸ್ ಪ್ರೀತ್ ಬುಮ್ರಾ ರಂತಹ ವೇಗದ ಬೌಲರ್ ಗಳಿಗೆ ತೀವ್ರ ಅನಾನುಕೂಲವಾಗುತ್ತಿದ್ದು, ಈ ನಿಯಮ ನಿಜಕ್ಕೂ ಬೌಲರ್ ಗಳನ್ನು ಅಂಗವಿಕಲರನ್ನಾಗಿ ಮಾಡಿದೆ. ಇದರ ಲಾಭ ಪಡೆಯುತ್ತಿರುವ ಬ್ಯಾಟ್ಸ್ ಮನ್ ಗಳು ರನ್ ಮಳೆ ಹರಿಸುತ್ತಿದ್ದಾರೆ. ವೇಗದ ಬೌಲರ್  ಗಳಿಗೆ ಸ್ವಿಂಗ್ ಪ್ರಮುಖ ಅಸ್ತ್ರವಾಗಿರುತ್ತದೆ. ಚೆಂಡಿಗೆ ಎಂಜಲು ಹಚ್ಚುವುದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಿ ಸ್ವಿಂಗ್ ಮಾಡಬಹುದು. ಆದರೆ ಈಗ ಎಂಜಲು ಹಚ್ಚುವುದನ್ನೇ ನಿಷೇಧ ಮಾಡಿರುವುದರಿಂದ ಬೌಲರ್ ಗಳ ಪ್ರಮುಖ ಅಂಗವನ್ನೇ ಕಸಿದಂತಾಗಿದೆ. ಹೀಗಾಗಿ ಎಂಜಲಿಗೆ ಬದಲಾಗಿ ಬೇರೆ ವ್ಯವಸ್ಥೆ ಮಾಡಲೇ ಬೇಕಿದೆ. ಇಲ್ಲದಿದ್ದರೆ ಬೌಲರ್ ಗಳು ಬಲಿಯಾಗಲಿದ್ದಾರೆ. ಪ್ರಸ್ತುತ ನಮ್ಮಲ್ಲಿ ಎಂಜಲಿಗೆ ಯಾವುದೇ ಪರ್ಯಾಯವಿಲ್ಲ,  ಕ್ರಿಕೆಟ್ ನಲ್ಲಿ ಎಂಜಲು ಹಾಗೂ ಬೆವರು ಸಾಮಾನ್ಯ. ಆದರೆ ಬೆವರನ್ನು ಎಂಜಲಿಗೆ ಪರ್ಯಾಯ ಎನ್ನಲು ಸಾಧ್ಯವಿಲ್ಲ. ಬೆವರಿಗಿಂತ ಎಂಜಲು ಮುಖ್ಯ. ಬೆವರಿನೊಂದಿಗೆ ಹೋಲಿಸಿದರೆ ಬೌಲರ್‌ಗಳು ಎಂಜಲನ್ನು ಹೆಚ್ಚು ಅವಲಂಬಿಸುತ್ತಾರೆ.

ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಬೌಲರ್ ಗಳು ಚೆಂಡಿನ ಮೇಲಿನ ಹಿಡಿತವನ್ನು ಸಮತೋಲನಗೊಳಿಸಬೇಕಾದರೆ ಶೇ.60ರಷ್ಟು ಎಂಜಲು ಮತ್ತು 40 ರಷ್ಟು ಬೆವರಿನ ಅವಶ್ಯಕತೆ ಇರುತ್ತದೆ ಎಂದು ಸಚಿನ್ ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com