ತಂದೆಯ ಅಗಲಿಕೆಯ ನೋವಲ್ಲೇ ದಾಖಲೆ ಬರೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್!

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಟೆಸ್ಟ್ ಕ್ರಿಕೆಟ್ ನಲ್ಲಿ 7 ವರ್ಷಗಳ ಬಳಿಕ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್

ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಪಂದ್ಯದಲ್ಲಿ 36.3 ಓವರ್ ಗಳಲ್ಲಿ 77 ರನ್ ನೀಡಿ 5 ವಿಕೆಟ್ ಉರುಳಿಸಿದ ವೇಗಿ ಮೊಹಮ್ಮದ್ ಸಿರಾಜ್, ಟೆಸ್ಟ್ ಕ್ರಿಕೆಟ್ ನಲ್ಲಿ 7 ವರ್ಷಗಳ ನಂತರ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 

ಉಭಯ ಇನಿಂಗ್ಸ್ ಗಳಲ್ಲಿ ಕ್ಯಾಮೆರನ್ ಗ್ರೀನ್ ಅವರನ್ನು ಔಟ್ ಮಾಡಿದ್ದ ಸಿರಾಜ್, ಮರ್ನಸ್ ಲಾಬುಶೇನ್(ಮೊದಲ ಇನಿಂಗ್ಸ್) ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ ಟ್ರಾವಿಸ್ ಹೆಡ್ ಮತ್ತು ನೇಥನ್ ಲಯಾನ್ ಅವರನ್ನು ಔಟ್ ಮಾಡಿದ್ದಾರೆ.

2013ರ ನವೆಂಬರ್ ನಲ್ಲಿ ಕೋಲ್ಕೊತಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಆಟಗಾರ ಕನಿಷ್ಠ 5 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ವೇಗಿ ಮೊಹಮ್ಮದ್ ಶಮಿ 9 ವಿಕೆಟ್ ಕಬಳಿಸಿ ಈ ಸಾಧನೆ ತೋರಿದ್ದರು. ಗಾಯದ ಸಮಸ್ಯೆಯಿಂದಾಗಿ ಮೊಹಮ್ಮದ್ ಶಮಿ ಆಸೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಕಾರಣ ಅವರ ಸ್ಥಾನದಲ್ಲಿ ಸಿರಾಜ್ ಆಡಿದರು.

ಮೆಲ್ಬೋರ್ನ್ ಟೆಸ್ಟ್ ನಲ್ಲಿ ಸಿರಾಜ್ ಜತೆ ಆಡಿದ ಆಫ್ ಸ್ಪಿನ್ನರ್ ಅಶ್ವಿನ್ ಸಹ 5 ವಿಕೆಟ್ ಉರುಳಿಸಿದ್ದಾರೆ. 2011ರಲ್ಲಿ ಡೆಲ್ಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಿತ್ತಿದ್ದರು. ಮೆಲ್ಬೋರ್ನ್ ಟೆಸ್ಟ್ ನಲ್ಲಿ ಭಾರತ, 8 ವಿಕೆಟ್ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಮೊಹಮ್ಮದ್ ಸಿರಾಜ್ ತಂದೆ ಮೊಹಮ್ಮದ್ ಗೌಸ್ ನಿಧನರಾಗಿದ್ದರು. ಆದರೆ ಅದಾಗಲೇ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಮೊಹಮ್ಮದ್ ಸಿರಾಜ್ ತಂದೆಯ ಅಂತ್ಯಕ್ರಿಯೆಗಾಗಿ ಹೈದರಾಬಾದ್ ಗೆ ಆಗಮಿಸದೆ ಆಸ್ಟ್ರೇಲಿಯಾದಲ್ಲೇ ಉಳಿದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com