ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ?: ಕಪಿಲ್ ದೇವ್

ವೆಲ್ಲಿಂಗ್ ಟನ್ ನ ಬೇಸಿನ್ ರಿಸರ್ವ್ ನಲ್ಲಿ ಸೋಮವಾರ ನಡೆದ ಕೀವಿಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳ ಅಂತರದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾವನ್ನು ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಟೀಕಿಸಿದ್ದಾರೆ.

Published: 25th February 2020 04:20 PM  |   Last Updated: 25th February 2020 04:36 PM   |  A+A-


KLRahul_Kapildev1

ಕೆಎಲ್ ರಾಹುಲ್, ಕಪಿಲ್ ದೇವ್

Posted By : Nagaraja AB
Source : UNI

ನವದೆಹಲಿ: ವೆಲ್ಲಿಂಗ್ ಟನ್ ನ ಬೇಸಿನ್ ರಿಸರ್ವ್ ನಲ್ಲಿ ಸೋಮವಾರ ನಡೆದ ಕೀವಿಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳ ಅಂತರದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾವನ್ನು ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಟೀಕಿಸಿದ್ದಾರೆ. ಉತ್ತಮ ರೀತಿಯಲ್ಲಿ ಕ್ರಿಕೆಟ್ ಆಡಿರುವ ನ್ಯೂಜಿಲೆಂಡ್ ತಂಡವನ್ನು ನಾವೆಲ್ಲರೂ ಹೊಗಳಬೇಕಿದೆ ಎಂದು ಅವರು ಹೇಳಿದ್ದಾರೆ.

ಸೀಮಿತ ಓವರ್‌ಗಳ ಸ್ವರೂಪದಲ್ಲಿ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟಿರುವುದನ್ನು ಕಪಿಲ್ ದೇವ್ ತೀವ್ರವಾಗಿ ಖಂಡಿಸಿದ್ದಾರೆ.

ಕೆ.ಎಲ್‌ ರಾಹುಲ್‌, ಭಾರತ ತಂಡದ ಪರ ಟಿ-20 ಮತ್ತು ಏಕದಿನ ಸರಣಿಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರಾಗಿದ್ದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧದ ಸೀಮಿತ ಓವರ್‌ಗಳ ಸ್ವರೂಪದಲ್ಲೂ ಗಮನಾರ್ಹ ಪ್ರದರ್ಶನ ತೋರಿದ್ದರು. ಇದೆಲ್ಲವನ್ನೂ ಗಮನಿಸಿ ರಾಷ್ಟ್ರೀಯ ಆಯ್ಕೆದಾರರು ಟೆಸ್ಟ್‌ ತಂಡಕ್ಕೂ ಆಯ್ಕೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಅಂತಿಮವಾಗಿ ಅವರನ್ನು ಕೈ ಬಿಡಲಾಗಿತ್ತು.

"ಟಿ20 ಸರಣಿಯಲ್ಲಿ 0-5 ಅಂತರದಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿದ್ದ  ನ್ಯೂಜಿಲೆಂಡ್‌ ತಂಡವನ್ನು ಕೊಂಡಾಡಬೇಕು. ಮೂರು ಏಕದಿನ ಪಂದ್ಯ ಬಳಿಕ ಮೊದಲ ಟೆಸ್ಟ್‌ ಎಲ್ಲದರಲ್ಲೂ ಕಿವೀಸ್‌ ತಂಡದಿಂದ ಶ್ರೇಷ್ಠ ಆಟ ಮೂಡಿಬಂದಿದೆ. ಇದನ್ನು ವಿಮರ್ಶೆ ಮಾಡಿದರೆ, ಭಾರತ ತಂಡದಲ್ಲಿ ಇಷ್ಟೊಂದು ಬದಲಾವಣೆ ಮಾಡುವ ಅಗತ್ಯವೇನಿದೆ ಎಂಬುದು ಅರ್ಥವಾಗುತ್ತಿಲ್ಲ. ಪ್ರತಿ ಪಂದ್ಯದಲ್ಲಿ ಹೊಸ ತಂಡ ಆಡುತ್ತಿದೆ. ತಂಡದಲ್ಲಿ ಯಾರೊಬ್ಬರೂ ಖಾಯಂ ಅಲ್ಲ. ಆಟಗಾರರ ಸ್ಥಾನ ಭದ್ರವಾಗದಿದ್ದರೆ ಅವರ ಪ್ರದರ್ಶನ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ," ಎಂದು ಕಪಿಲ್‌ ಟೀಕಾ ಪ್ರಹಾರ ನಡೆಸಿದ್ದಾರೆ.

ವಿಶ್ವ ಟೆಸ್ಟ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ತಂಡ ಸೋಮವಾರ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಟೀಮ್ ಇಂಡಿಯಾ ಹೀನಾಯ ಸೋಲನ್ನು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಅವರು ಕಟುವಾಗಿ ಟೀಕಿಸಿದ್ದಾರೆ. 

"ಒಂದು ತಂಡವನ್ನು ಕಟ್ಟುವಾಗ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಬೇಕು. ಪದೇ-ಪದೆ ಆಟಗಾರರನ್ನು ಬದಲಾಯಿಸುವುದರಲ್ಲಿ ಅರ್ಥವಿಲ್ಲ. ಕೆ.ಎಲ್‌ ರಾಹುಲ್‌ ಅದ್ಭುತ ಲಯದಲ್ಲಿದ್ದಾರೆ. ಆದರೆ, ಅವರನ್ನು ಟೆಸ್ಟ್‌ ತಂಡದಲ್ಲಿ ಆಡಿಸಲಾಗಿಲ್ಲ. ಇದರ ಹಿಂದಿನ ಮರ್ಮವೇ ತಿಳಿಯುತ್ತಿಲ್ಲ. ಒಬ್ಬ ಆಟಗಾರ ಅತ್ಯುತ್ತಮ ಲಯದಲ್ಲಿ ಇರುವಾಗ ಆತನನ್ನು ಆಡಲು ಬಿಡಬೇಕು ಎಂಬುದು ನನ್ನ ನಂಬಿಕೆ," ಎಂದು ಕನ್ನಡಿಗ ರಾಹುಲ್‌ ಪರ ಕಪಿಲ್‌ದೇವ್‌ ಬ್ಯಾಟ್‌ ಬೀಸಿದ್ದಾರೆ.

ಟೀಮ್‌ ಇಂಡಿಯಾದ ಬ್ಯಾಟಿಂಗ್‌ ವಿಭಾಗದಲ್ಲಿ ಅಜಿಂಕ್ಯ ರಹಾನೆ, ಚೇತೇಶ್ವರ್‌ ಪೂಜಾರ ಹಾಗೂ ವಿರಾಟ್‌ ಕೊಹ್ಲಿ ಅವರಂತಹ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದರೆ, ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಸ್ಟಾರ್‌ ಆಟಗಾರರು ಕೈಕೊಟ್ಟ ಪರಿಣಾಮ ತಂಡ ಸೋಲಿನ ಕಡಲಲ್ಲಿ ಮುಳುಗುವಂತಾಯಿತು. ಕ್ಯಾಪ್ಟನ್‌ ಕೊಹ್ಲಿ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

"ಬ್ಯಾಟಿಂಗ್‌ ವಿಭಾಗದಲ್ಲಿ ಸ್ಟಾರ್‌ ಆಟಗಾರರ ದಂಡೇ ಇದೆ. ಎರಡೂ ಇನಿಂಗ್ಸ್‌ಗಳಲ್ಲಿ 200ಕ್ಕೂ ಹೆಚ್ಚು ರನ್‌ಗಳಿಸಲಿಲ್ಲ ಎಂದ ಮೇಲೆ ನೀವು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡಿಲ್ಲ ಎಂದರ್ಥ. ತಂಡದ ಯೋಜನೆ ಮತ್ತು ರಣತಂತ್ರಗಳ ಕಡೆಗೆ ಮತ್ತಷ್ಟು ಗಮನ ನೀಡುವ ಅಗತ್ಯವಿದೆ," ಎಂದು ಕಪಿಲ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡದ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಮೊದಲಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಕೊಹ್ಲಿ ಬಳಗ ವೈಟ್‌ವಾಶ್ ಗೆಲುವು ದಕ್ಕಿಸಿಕೊಂಡಿತ್ತು. ಆದರೆ ನಂತರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳನ್ನು ಸೋತು ಸುಣ್ಣವಾಯಿತು. ಇದೀಗ ಮೊದಲ ಟೆಸ್ಟ್‌ನಲ್ಲೂ ಹೀನಾಯ ಸೋಲಿನ ಆಘಾತಕ್ಕೊಳಗಾಗಿದೆ. ಸರಣಿಯ ಎರಡನೇ ಟೆಸ್ಟ್‌ ಫೆ.29 ರಿಂದ ಕ್ರೈಸ್ಟ್‌ ಚರ್ಚ್‌ನಲ್ಲಿ ಶುರುವಾಗಲಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp