ಬ್ಯಾಟಿಂಗ್ ವೈಫಲ್ಯ: ಚೇತೇಶ್ವರ ಪೂಜಾರ ಪರ ಬ್ಯಾಟ್ ಬೀಸಿದ ಉಪ ನಾಯಕ ಅಜಿಂಕ್ಯ ರಹಾನೆ

ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮಂಧಗತಿಯ ಬ್ಯಾಟಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದ ಚೇತೇಶ್ವರ ಪೂಜಾರ ಅವರನ್ನು ಭಾರತ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಸಮರ್ಥಿಸಿಕೊಂಡಿದ್ದಾರೆ.

Published: 27th February 2020 03:06 PM  |   Last Updated: 27th February 2020 04:09 PM   |  A+A-


Cheteshwar Pujara

ಚೇತೇಶ್ವರ ಪೂಜಾರ

Posted By : Vishwanath S
Source : UNI

ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮಂಧಗತಿಯ ಬ್ಯಾಟಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದ ಚೇತೇಶ್ವರ ಪೂಜಾರ ಅವರನ್ನು ಭಾರತ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಸಮರ್ಥಿಸಿಕೊಂಡಿದ್ದಾರೆ.

ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ 123 ಎಸೆತಗಳಲ್ಲಿ 22 ರನ್ ಗಳಿಸಿದ್ದರು. ಇವರ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಟೀಕೆಗೆ ಗುರಿಯಾಗಿದ್ದರು. ಈ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸೋಲು ಕೂಡ ಇದಾಗಿತ್ತು.

ಎರಡನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗಾರರೊಂದಿಗೆ ಮಾತನಾಡಿದ ರಹಾನೆ, “ವೈಯಕ್ತಿಕವಾಗಿ ಹೇಳಬೇಕೆಂದರೆ ಮೊದಲನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ನನ್ನ ಪ್ರಕಾರ ಕಿವೀಸ್ ಬೌಲರ್‌ಗಳ ಎದುರು ಚೇತೇಶ್ವರ ಪೂಜಾರ ಸಿಲುಕಿಕೊಂಡಿರಲಿಲ್ಲ. 

ರನ್ ಗಳಿಸಲು ಅವರು ಪ್ರಯತ್ನಿಸುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಎದುರಾಳಿಯ ಎಲ್ಲಾ ಬೌಲರ್‌ಗಳು  ಸಡಿಲವಾದ ಎಸೆತಗಳನ್ನು ಹಾಕುತ್ತಿರಲಿಲ್ಲ. ಇಂಥ ಪಿಚ್‌ಗಳಲ್ಲಿ ಯಾರೇ ಬ್ಯಾಟಿಂಗ್ ಮಾಡಿದರೂ ಈ ರೀತಿಯ ಸಂಗತಿಗಳು ನಡೆಯುತ್ತವೆ. ಪ್ರತಿಯೊಬ್ಬರ ಆಟದ ವೈಖರಿ ವಿಭಿನ್ನವಾಗಿರುತ್ತದೆ. ಒಂದು ತಂಡವಾಗಿ ನಾವು ಮಧ್ಯಮ ಕ್ರಮಾಂಕದಲ್ಲಿ ಹೇಗೆ ಆಡಬೇಕಿತ್ತು ಎಂಬ ವಿಷಯದ ಬಗ್ಗೆ ಬೆಳಕು ಚೆಲ್ಲಬೇಕಾದ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟರು.

"ಭಾರತ ಎ ತಂಡದ ಪರ ನಾವು ಈ ಅಂಗಳದಲ್ಲಿ ಆಡಿದ್ದೆವು. ಈ ವಿಕೆಟ್‌ನಲ್ಲಿ  ಬೌನ್ಸ್ ಹಾಗೂ ವೇಗ ಉತ್ತಮವಾಗಿದ್ದು, ಬ್ಯಾಟಿಂಗ್ ಚೆನ್ನಾಗಿ ಆಡಬಹುದು ಎಂದು ಹನುಮ ವಿಹಾರಿ ನಮಗೆ ಹೇಳಿದ್ದಾರೆ. ಮೊದಲನೇ ಪಂದ್ಯದ ಫಲಿತಾಂಶವನ್ನು ಮರೆತು ಎರಡನೇ ಕಾದಾಟದಲ್ಲಿ ನಮ್ಮ ಮೇಲೆ ನಾವು ನಂಬಿಕೆ ಇಟ್ಟು ಆಡಬೇಕಷ್ಟೆ. ಆ ಮೂಲಕ ನಮ್ಮ ಪಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ 60 ಅಂಕಗಳನ್ನು ಪಡೆಯಬೇಕು,’’ ಎಂದು ಹೇಳಿದರು.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆ.29 ರಂದು ನಡೆಯಲಿದೆ. ಈಗಾಗಲೇ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಎರಡು ಹಣಾಹಣಿಗಳ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. 

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp