4 ದಿನಗಳ ಟೆಸ್ಟ್: ನಾಯಕ ವಿರಾಟ್ ಕೊಹ್ಲಿ, ರವಿ ಶಾಸ್ತ್ರಿಗೆ ಬಿಸಿಸಿಐ ಬೆಂಬಲ

ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಕುರಿತು ಚರ್ಚಿಸಲು ಐಸಿಸಿ ಸಿದ್ಧವಾಗುತ್ತಿದೆ. ಆದರೆ, ವಿಶ್ವದ ಅತ್ಯಂತ ಶ್ರೀಮಂತ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದಕ್ಕೆ ರೆಡ್ ಸಿಗ್ನಲ್ ನೀಡಲು ಸಜ್ಜಾಗುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಬೆನ್ನಿಗೆ ನಿಲ್ಲಲು ತಯಾರಿ ನಡೆಸುತ್ತಿದೆ.
ರವಿಶಾಸ್ತ್ರಿ-ವಿರಾಟ್ ಕೊಹ್ಲಿ
ರವಿಶಾಸ್ತ್ರಿ-ವಿರಾಟ್ ಕೊಹ್ಲಿ

ನವದೆಹಲಿ: ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಕುರಿತು ಚರ್ಚಿಸಲು ಐಸಿಸಿ ಸಿದ್ಧವಾಗುತ್ತಿದೆ. ಆದರೆ, ವಿಶ್ವದ ಅತ್ಯಂತ ಶ್ರೀಮಂತ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದಕ್ಕೆ ರೆಡ್ ಸಿಗ್ನಲ್ ನೀಡಲು ಸಜ್ಜಾಗುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಬೆನ್ನಿಗೆ ನಿಲ್ಲಲು ತಯಾರಿ ನಡೆಸುತ್ತಿದೆ.
 
ಐದು ದಿನಗಳ ಟೆಸ್ಟ್ ಪಂದ್ಯವನ್ನು ನಾಲ್ಕು ದಿನಗಳಿಗೆ ಕಡಿತಗೊಳಿಸುವ ಐಸಿಸಿ ನಿರ್ಧಾರ ಕ್ರಿಕೆಟ್ ಆತ್ಮವಾಗಿರುವ ಟೆಸ್ಟ್ ಕ್ರಿಕೆಟ್ ಸ್ವರೂಪಕ್ಕೆ ವಿರುದ್ಧವಾದದ್ದು ಎಂದು ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ವಿರೋಧಿಸಿದ್ದರು. ಐಎಎನ್ಎಸ್ ನೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜತೆ ಬಿಸಿಸಿಐ ಜನವರಿ 12 ರಂದು ಮುಂಬೈನಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚರ್ಚೆ ನಡೆಸಲಿದೆ. ವಿರಾಟ್ ಹಾಗೂ ರವಿ ಶಾಸ್ತ್ರಿ ಅವರಿಗೆ ಬಿಸಿಸಿಐ ಖಂಡಿತ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಜತೆಯೂ ಚರ್ಚೆ ನಡೆಸುವ ಅಗತ್ಯವಿದೆ. ಕೊಹ್ಲಿ ಮತ್ತು ರವಿ ಶಾಸ್ತ್ರಿ ಯಾವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅದೇ ಹಾದಿಯಲ್ಲಿಯೇ ಬಿಸಿಸಿಐ ಇದೆ. ನಮ್ಮ ನಾಯಕ ಹಾಗೂ ಕೋಚ್ ಅಲ್ಲದೇ, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲಿಸಿಸ್ ಅವರೂ ಇದೇ ರೀತಿ ಹೇಳಿದ್ದಾರೆ. ಐಸಿಸಿ ಕೆಳ ಕ್ರಮಾಂಕದ ತಂಡಗಳಿಗೆ ಇದು ಆಯ್ಕೆಯಾಗಬಹದು. ಆದರೆ, ಎರಡು ಅಗ್ರ ತಂಡಗಳು ಮುಖಾಮುಖಿಯಾದಾಗ ಟೆಸ್ಟ್ ಕ್ರಿಕೆಟ್ ನ ಸಾಂಪ್ರದಾಯ ಕಳೆದುಕೊಳ್ಳಲಿದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲನೇ ಟಿ-20 ಪಂದ್ಯಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ್ದರು. ಹೊನಲು-ಬೆಳಕಿನ ಟೆಸ್ಟ್ ಪಂದ್ಯ ಆಯೋಜನೆ ಮಾಡಿರುವುದು ಹೆಚ್ಚಿನ ಉತ್ಸುಕತೆ ಉಂಟು ಮಾಡಿದೆ. ಆದರೆ, ಐದು ದಿನಗಳಿಂದ ನಾಲ್ಕು ದಿನಗಳಿಗೆ ಇಳಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ. ಇದು ಟೆಸ್ಟ್ ಸ್ವರೂಪಕ್ಕೆ ದಕ್ಕೆಯನ್ನುಂಟು ಮಾಡುತ್ತದೆ ಎಂದು ಕೊಹ್ಲಿ ವಿರೋಧಿಸಿದ್ದರು. ನಾಯಕ ವಿರಾಟ್ ಕೊಹ್ಲಿಗೆ ಕೋಚ್ ರವಿಶಾಸ್ತ್ರಿ ಕೂಡ ಬೆಂಬಲಿಸಿದ್ದರು. 

ನಾಲ್ಕು ದಿನಗಳ ಟೆಸ್ಟ್ ಅಸಂಬದ್ಧವಾಗಿದೆ. ಇದು ಮುಂದುವರಿದರೆ ನಾವು ಸೀಮಿತ ಓವರ್ ಗಳ ಟೆಸ್ಟ್ ಗಳನ್ನು ಹೊಂದಿರಬಹುದು. ಐದು ದಿನಗಳ ಟೆಸ್ಟ್ ಗಳನ್ನು ಹಾಳುಮಾಡುವ ಅಗತ್ಯವಿಲ್ಲ. ಒಂದು ವೇಳೆ ಅವರು  ಒಂದು ದಿನ ಕಡಿತ ಮಾಡಲು ಬಯಸಿದರೆ ಅಗ್ರ ಆರು ತಂಡಗಳು ಐದು ದಿನಗಳ ಟೆಸ್ಟ್ ಆಡಲು ಅವಕಾಶ ಮಾಡಿಕೊಡಿ ಮತ್ತು ಮುಂದಿನ ಆರು ತಂಡಗಳಿಗೆ ನಾಲ್ಕು ದಿನಗಳ ಟೆಸ್ಟ್ ಆಡಲು ಅವಕಾಶ ನೀಡಿ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com