ಧವನ್, ರಾಹುಲ್, ಕೊಹ್ಲಿ ಅರ್ಧಶತಕ: ಆಸ್ಟ್ರೇಲಿಯಾ ತಂಡಕ್ಕೆ 341 ರನ್ ಸವಾಲಿನ ಗುರಿ

ಮೊದಲನೇ ಪಂದ್ಯದಲ್ಲಿ ಮಾಡಿದ್ದ ತಪ್ಪುುಗಳನ್ನು ತಿದ್ದಿಕೊಂಡ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.
ಪರಸ್ಪರ ಹಾರೈಸಿಕೊಂಡ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್
ಪರಸ್ಪರ ಹಾರೈಸಿಕೊಂಡ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್

ರಾಜ್‌ಕೋಟ್ : ಮೊದಲನೇ ಪಂದ್ಯದಲ್ಲಿ ಮಾಡಿದ್ದ ತಪ್ಪುುಗಳನ್ನು ತಿದ್ದಿಕೊಂಡ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯದಂತೆ ಇಂದಿನ ಹಣಾಹಣಿಯಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಿಗದಿತ 50 ಓವರ್ ಗಳಿಗೆ 6 ವಿಕೆಟ್ ನಷ್ಟಕ್ಕೆ 340 ರನ್ ದಾಖಲಿಸಿತು. ಆ ಮೂಲಕ ಪ್ರವಾಸಿ ತಂಡಕ್ಕೆ 341 ರನ್ ಸವಾಲಿನ ಗುರಿ ನೀಡಿದೆ.

ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡಿತು. 13.3 ಓವರ್ ಗಳವರೆಗೂ ಬ್ಯಾಾಟಿಂಗ್ ಮಾಡಿದ ಈ ಜೋಡಿ  81 ರನ್ ಕಲೆ ಹಾಕಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟಿತು. ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ರೋಹಿತ್ 44 ಎಸೆತಗಳಲ್ಲಿ 42 ರನ್ ಗಳಿಸಿ ಆ್ಯಡಂ ಝಂಪಾಗೆ ವಿಕೆಟ್ ಒಪ್ಪಿಸಿದರು. ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅರ್ಧಶತಕ ಸಿಡಿಸಿ ಕಿರು ನಗೆ ಬೀರಿದರು. 76 ಎಸೆತಗಳಲ್ಲಿ ಆರು ಸಿಕ್ಸರ್ ಸೇರಿದಂತೆ 78 ರನ್ ಗಳಿಸಿದರು. 

ಇದಕ್ಕೂ ಮುನ್ನ ಎಂದಿನಂತೆ ತಮ್ಮ ಲಯ ಮುಂದುವರಿಸಿದ ಶಿಖರ್ ಧವನ್ ಆಸ್ಟ್ರೇಲಿಯಾ ಬೌಲರ್‌ಗಳನ್ನು ಅದ್ಭುತವಾಗಿ ಎದುರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಸಮಯೋಜಿತ ಬ್ಯಾಟಿಂಗ್ ಮಾಡಿದರು. 90 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 13 ಬೌಂಡರಿಯೊಂದಿಗೆ 96 ರನ್ ಗಳಿಸಿದರು. ಇನ್ನೇನು ಶತಕ ಗಳಿಸುವ ಹಾದಿಯಲ್ಲಿದ್ದ ಎಡಗೈ ಬ್ಯಾಟ್ಸ್‌ ಮನ್ ಕೇನ್ ರಿಚರ್ಡ್‌ಸನ್ ಎಸೆತದಲ್ಲಿ ಸ್ಟಾರ್ಕ್‌ಗೆ ಕ್ಯಾಚ್ ನೀಡಿದರು. ಧವನ್ ಹಾಗೂ ಕೊಹ್ಲಿ ಜೋಡಿ ಎರಡನೇ ವಿಕೆಟ್‌ಗೆ 103 ರನ್ ಜತೆಯಾಟವಾಡಿತ್ತು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆ.ಎಲ್ ರಾಹುಲ್ ಅರ್ಧಶತಕ ಸಿಡಿಸಿ ಸೈ ಎನಿಸಿಕೊಂಡರು. ಸ್ಫೋಟಕ ಬ್ಯಾಟಿಂಗ್ ಮಾಡಿದ ರಾಹುಲ್, ಯಾವುದೇ ತಪ್ಪುು ಹೊಡೆತಗಳಿಗೆ ಕೈ ಹಾಕದೆ ಸಮಯೋಜಿತವಾಗಿ ಬ್ಯಾಟ್ ಬೀಸಿದರು. ಕೇವಲ 52 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ 80 ರನ್ ಗಳಿಸಿದರು. ಇವರ ಅರ್ಧಶತಕದ ಬಲದಿಂದ ಭಾರತದ ಮೊತ್ತ 340 ರನ್ ದಾಖಲಿಸಲು ಸಾಧ್ಯವಾಯಿತು. ಕೊನೆಯಲ್ಲಿ ರವೀಂದ್ರ ಜಡೇಜಾ ಅಜೇಯ 20 ರನ್ ಗಳಿಸಿದರು. 

ಆಸ್ಟ್ರೇಲಿಯಾ ಪರ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿದ ಆ್ಯಡಂ ಝಂಪಾ ಮೂರು ವಿಕೆಟ್, ಕೇನ್ ರಿಚರ್ಡ್‌ಸನ್ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಭಾರತ: 50 ಓವರ್ ಗಳಿಗೆ 340/6 (ಶಿಖರ್ ಧವನ್ 96, ಕೆ.ಎಲ್ ರಾಹುಲ್ 80, ವಿರಾಟ್ ಕೊಹ್ಲಿ 78, ರೋಹಿತ್ ಶರ್ಮಾ 42, ರವೀಂದ್ರ ಜಡೇಜಾ ಔಟಾಗದೆ 20; ಆ್ಯಡಂ ಝಂಪಾ 50 ಕ್ಕೆ 3, ಕೇನ್ ರಿಚರ್ಡ್‌ಸನ್ 73 ಕ್ಕೆ 2)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com