ಕೆ.ಎಲ್ ರಾಹುಲ್ ಮಧ್ಯಮ ಕ್ರಮಾಂಕದ ಯಶಸ್ಸಿಗೆ ಕಾರಣ ಇವರಂತೆ?

ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಭಾರತ ತಂಡದ ಕೆ.ಎಲ್. ರಾಹುಲ್ ಮಧ್ಯಮ ಕ್ರಮಾಂಕದ  ಬ್ಯಾಟಿಂಗ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. 
ಕೆ.ಎಲ್ ರಾಹುಲ್
ಕೆ.ಎಲ್ ರಾಹುಲ್

ರಾಜ್ ಕೋಟ್: ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಭಾರತ ತಂಡದ ಕೆ.ಎಲ್. ರಾಹುಲ್ ಮಧ್ಯಮ ಕ್ರಮಾಂಕದ  ಬ್ಯಾಟಿಂಗ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. 

ಆಸೀಸ್ ಮಾಜಿ ನಾಯಕ ಸ್ಟೀವನ್ ಸ್ಮಿತ್, ಎ.ಬಿ ಡಿವಿಲಿಯರ್ಸ್ ಹಾಗೂ ಕೇನ್ ವಿಲಿಯಮ್ಸನ್ ಅವರ ಬ್ಯಾಟಿಂಗ್ ವೀಡಿಯೋಗಳು ವೀಕ್ಷಿಸಿದ್ದರಿಂದ ಎರಡನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಕನ್ನಡಿಗ ಹೇಳಿದ್ದಾರೆ.
  
ಮೊದಲನೇ ಏಕದಿನ ಪಂದ್ಯದಲ್ಲಿ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ರಾಜ್ ಕೋಟ್ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ 52 ಎಸೆತಗಳಲ್ಲಿ 80 ರನ್ ಗಳಿಸಿದ್ದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 36 ರನ್ ಗಳಿಂದ ಗೆಲುವು ಸಾಧಿಸಿ ಸರಣಿಯನ್ನು 1-1 ಸಮಬಲ ಸಾಧಿಸಿತ್ತು.
  
ಈ ಬಗ್ಗೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದ ಕೆ.ಎಲ್. ರಾಹುಲ್, “ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಬಳಿ ಮಾತನಾಡಿದ್ದೇನೆ. ನಾಯಕ ವಿರಾಟ್ ಕೊಹ್ಲಿ ಬಳಿ ಮಾತನಾಡಿದ್ದು, ಹಲವು ವೀಡಿಯೋಗಳನ್ನು ವೀಕ್ಷಿಸಿದ್ದೇನೆ. 

ಎಬಿಡಿ, ಸ್ಟೀವನ್ ಸ್ಮಿತ್ ಹಾಗೂ ಕೇನ್ ವಿಲಿಯಮ್ಸನ್ ಅವರ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೀಡಿಯೋಗಳನ್ನು ತುಂಬಾ ನೋಡಿದ್ದೇನೆ. ಇವುಗಳಿಂದ ನಾನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನೆರವಾಗಿದೆ,” ಹೇಳಿದ್ದಾರೆ.
  
“ಪಂದ್ಯದ ವಿವಿಧ ಸನ್ನಿವೇಶಗಳಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬ ಬಗ್ಗೆ ವೀಡಿಯೋಗಳನ್ನು ನೋಡುತ್ತೇನೆ. ಹಲವು ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವುದರಿಂದ ನನಗೆ ಪಂದ್ಯವನ್ನು ಸನ್ನಿವೇಶವನ್ನು ಅರಿತುಕೊಂಡು ಆಡುವುದನ್ನು ಕಲಿತಿದ್ದೇನೆ. ಇದನ್ನೇ ನಾನು ಈ ಪಂದ್ಯದಲ್ಲೂ ಮಾಡಿದೆ,’’ ಎಂದು ಕೆ.ಎಲ್ ರಾಹುಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
  
ಕರ್ನಾಟಕದ ಬ್ಯಾಟ್ಸ್ ಮನ್ ಟಿ-20 ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ಇತ್ತೀಚೆಗೆ ಕ್ರಮವಾಗಿ 102, 77, 45, 54, 47 ಮತ್ತು 80 ರನ್ ಗಳನ್ನು ವಿವಿಧ ಕ್ರಮಾಂಕದಲ್ಲಿ ಗಳಿಸಿದ್ದಾರೆ.
  
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 1-1 ಸಮಬಲ ಸಾಧಿಸಿದ್ದು, ನಾಳೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com