ಬ್ಯಾಟಿಂಗ್‌ ಕೋಚ್ ಕುತ್ತಿಗೆಗೆ ಯೂನಿಸ್‌ ಚಾಕು ಹಿಡಿಯಲು ಅಜರುದ್ದೀನ್‌ ಕಾರಣ: ರಶೀದ್‌ ಲತೀಫ್

ಬ್ಯಾಟಿಂಗ್‌ ಬಗ್ಗೆ ಸಲಹೆ ನೀಡಲು ಮುಂದಾಗಿದ್ದಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌ ತಮ್ಮ ಕುತ್ತಿಗೆಗೆ ಚಾಕು ಹಿಡಿದಿದ್ದರು ಎಂದು ಪಾಕ್‌ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್‌ ಗಂಭೀರ ಆರೋಪ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಗ್ರ್ಯಾಂಟ್ ಫ್ಲವರ್-ಯೂನಿಸ್ ಖಾನ್
ಗ್ರ್ಯಾಂಟ್ ಫ್ಲವರ್-ಯೂನಿಸ್ ಖಾನ್

ಕರಾಚಿ: ಬ್ಯಾಟಿಂಗ್‌ ಬಗ್ಗೆ ಸಲಹೆ ನೀಡಲು ಮುಂದಾಗಿದ್ದಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್‌ ಖಾನ್‌ ತಮ್ಮ ಕುತ್ತಿಗೆಗೆ ಚಾಕು ಹಿಡಿದಿದ್ದರು ಎಂದು ಪಾಕ್‌ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್‌ ಗಂಭೀರ ಆರೋಪ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಸದ್ಯ ಶ್ರೀಲಂಕಾ ತಂಡದ ಬ್ಯಾಟಿಂಗ್‌ ಕೋಚ್‌ ಆಗಿರುವ ಜಿಂಬಾಬ್ವೆಯ ಮಾಜಿ ಆಟಗಾರ ಗ್ರ್ಯಾಂಟ್‌ ಫ್ಲವರ್‌ ಇದಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಸೇವೆ ಸಲ್ಲಿಸಿದ್ದರು. ಈ ಬಗ್ಗೆ ತಮ್ಮ ಸಹೋದರ ಆಂಡಿ ಫ್ಲವರ್‌ ಜೊತೆಗಿನ ಆನ್‌ಲೈನ್‌ ಚಾಟ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಯೂನಿಸ್‌ ಖಾನ್‌ ಜೊತೆಗೆ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದರು.

ಪಾಕಿಸ್ತಾನದ ತಂಡದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿರುವ ಮಾಜಿ ಸ್ಟಾರ್‌ ಬ್ಯಾಟ್ಸ್‌ಮನ್‌ ಯೂನಿಸ್‌ ಖಾನ್‌ ಅವರನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಇತ್ತೀಚೆಗೆ ಪಾಕ್‌ ತಂಡದ ಇಂಗ್ಲೆಂಡ್‌ ಪ್ರವಾಸ ಸಲುವಾಗಿ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕ ಮಾಡಿದೆ.

ಇನ್ನು ಪಾಕ್‌ ತಂಡಕ್ಕೆ ಕೋಚಿಂಗ್‌ ನೀಡುತ್ತಿದ್ದ ದಿನಗಳನ್ನು ನೆನೆದು ಮಾತನಾಡಿದ್ದ ಗ್ರ್ಯಾಂಟ್‌ ಫ್ಲವರ್‌, "ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯವದು. ಅಂದು ಮುಂಜಾನೆ ಉಪಹಾರ ಸೇವಿಸುವ ಸಂದರ್ಭದಲ್ಲಿ ಯೂನಿಸ್‌ ಬಳಿ ಚರ್ಚೆಗೆ ಇಳಿದು ಬ್ಯಾಟಿಂಗ್‌ ಕುರಿತಾಗಿ ಸಲಹೆ ನೀಡಲು ಮುಂದಾದೆ. ಆದರೆ ನನ್ನ ಸಲಹೆಯನ್ನು ಸ್ವೀಕರಿಸದೆ ಕೋಪದಲ್ಲಿ ನನ್ನ ಕುತ್ತಿಗೆಗೆ ಚಾಕು ಹಿಡಿದಿದ್ದರು. ಪಕ್ಕದಲ್ಲೇ ಇದ್ದ ಮುಖ್ಯ ಕೋಚ್‌ ಮಿಕಿ ಆರ್ಥರ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದ್ದರು ಎಂದು ಗ್ರ್ಯಾಂಟ್‌ ಫ್ಲವರ್‌ ಹೇಳಿಕೊಂಡಿದ್ದರು.

ಈ ಬಗ್ಗೆ ಮಾತಿಗಿಳಿದಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಶೀದ್‌ ಲತೀಫ್, ಬಹುಶಃ ಈ ಘಟನೆಯ ಹಿಂದೆ ಮೊಹಮ್ಮದ್‌ ಅಝರುದ್ದೀನ್‌ ಕಾರಣವಾಗಿದ್ದಿರಬಹುದು ಎಂದು ಅಚ್ಚರಿ ಸುದ್ದಿಯನ್ನು ಹೊರಹಾಕಿದ್ದಾರೆ. 2016ರಲ್ಲಿ ಯೂನಿಸ್‌ ಖಾನ್‌ ಓವಲ್‌ನಲ್ಲಿ ದ್ವಿಶತಕ ಬಾರಿಸಿದ್ದ ವೇಳೆ ಬ್ಯಾಟಿಂಗ್‌ ಕೋಚ್‌ ಹೆಸರು ತೆಗೆದುಕೊಳ್ಳುವ ಬದಲು ಅಝರುದ್ದೀನ್‌ ಹೆಸರನ್ನು ತೆಗೆದುಕೊಂಡಿದ್ದರು ಎಂಬ ಸಂಗತಿಯನ್ನು ಲತೀಫ್ ವಿವರಿಸಿದ್ದಾರೆ.

ಯೂನಿಸ್‌ ಖಾನ್‌ ಬಹಳ ವಿಭಿನ್ನ ವ್ಯಕ್ತಿತ್ವದವರು. ಡ್ರೆಸಿಂಗ್‌ ರೂಮ್‌ನಲ್ಲಿ ಏನಾಗಿರಬಹುದು ಎಂಬುದು ಯಾರಿಗೂ ಗೊತ್ತಿಲ್ಲ. ಅಂದಹಾಗೆ ಇದಕ್ಕೆ ಅಝರುದ್ದೀನ್‌ ಕಾರಣ ಆಗಿದ್ದಿರಬಹುದು. ಏಕೆಂದರೆ 2016ರಲ್ಲಿ ಯೂನಿಸ್‌ ಖಾನ್‌ ಓವಲ್‌ನಲ್ಲಿ ದ್ವಿಶತಕ ಬಾರಿಸಿದ್ದರು. ಆಗ ಬ್ಯಾಟಿಂಗ್‌ ಕೋಚ್‌ ಬಗ್ಗೆ ಯೂನಿಸ್‌ ಮಾತನಾಡಿರಲಿಲ್ಲ. ಬದಲಿಗೆ ಅಝರುದ್ದೀನ್‌ ಅವರಿಂದ ಪಡೆದ ಸಲಹೆ ತಮಗೆ ನೆರವಾಯಿತು ಎಂದು ಹೇಳಿಕೊಂಡಿದ್ದರು ಎಂದು ಲತೀಫ್‌ ಯೂಟ್ಯೂಬ್‌ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com