ಸೆಹ್ವಾಗ್‌ರ 309 ರನ್‌ಗಿಂತ, ಸಚಿನ್‌ ಗಳಿಸಿದ್ದ 136 ರನ್‌ ಉತ್ತಮ: ಸಕ್ಲೇನ್‌ ಮುಷ್ತಾಕ್

ಸೆಹ್ವಾಗ್ ಗಳಿಸಿದ್ದ 309 ರನ್ ಗಳಿಗಿಂತ ಚೆನ್ನೈನಲ್ಲಿ ಸಚಿನ್ ಗಳಿಸಿದ್ದ 136 ರನ್ ಗಳ ಪ್ರದರ್ಶನವೇ ಅತ್ಯುತ್ತಮವಾದದ್ದು ಎಂದು ಪಾಕಿಸ್ತಾನದ ಮಾಜಿ ಆಟಗಾರ ಸಕ್ಲೇನ್‌ ಮುಷ್ತಾಕ್ ಹೇಳಿದ್ದಾರೆ.
ಸಚಿನ್-ಸೆಹ್ವಾಗ್
ಸಚಿನ್-ಸೆಹ್ವಾಗ್

ನವದೆಹಲಿ: ಸೆಹ್ವಾಗ್ ಗಳಿಸಿದ್ದ 309 ರನ್ ಗಳಿಗಿಂತ ಚೆನ್ನೈನಲ್ಲಿ ಸಚಿನ್ ಗಳಿಸಿದ್ದ 136 ರನ್ ಗಳ ಪ್ರದರ್ಶನವೇ ಅತ್ಯುತ್ತಮವಾದದ್ದು ಎಂದು ಪಾಕಿಸ್ತಾನದ ಮಾಜಿ ಆಟಗಾರ ಸಕ್ಲೇನ್‌ ಮುಷ್ತಾಕ್ ಹೇಳಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ಆಫ್‌ ಸ್ಪಿನ್ನರ್‌ ಸಕ್ಲೇನ್‌ ಮುಷ್ತಾಕ್‌ ಅವರು ಭಾರತ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಎರಡು ಶ್ರೇಷ್ಠ ಇನಿಂಗ್ಸ್‌ಗಳನ್ನು ಸ್ಮರಿಸಿಕೊಂಡಿದ್ದಾರೆ.  ಪಾಕಿಸ್ತಾನದ ವಿರುದ್ಧ 1999ರಲ್ಲಿ ಚೆನ್ನೈನಲ್ಲಿ ಸಚಿನ್‌ ತೆಂಡೂಲ್ಕರ್‌ ಸಿಡಿಸಿದ್ದ 136 ರನ್‌ ಹಾಗೂ 2004ರಲ್ಲಿ ಮುಲ್ತಾನ್‌ನಲ್ಲಿ ವಿರೇಂದ್ರ ಸೆಹ್ವಾಗ್‌ ಗಳಿಸಿದ 309 ರನ್‌ಗಳ ಇನಿಂಗ್ಸ್‌ಗಳನ್ನು ನೆನಪು ಮಾಡಿಕೊಂಡಿದ್ದಾರೆ. ಭಾರತದ ವಿರುದ್ಧ ತಾನು ಕಂಡ ಶ್ರೇಷ್ಠ ಎರಡು ಇನಿಂಗ್ಸ್‌ಗಳೆಂದು ಪಾಕ್‌ ಮಾಜಿ ಸ್ಪಿನ್ನರ್‌ ಹೇಳಿಕೊಂಡಿದ್ದಾರೆ.

ಎರಡೂ ಇನಿಂಗ್ಸ್‌ಗಳಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಸಕ್ಲೇನ್‌ ಮುಷ್ತಾಕ್‌ ಬೌಲಿಂಗ್‌ ಮಾಡಿದ್ದರು. ಚೆನ್ನೈನ ಚಿಪಾಕ್‌ ಕ್ರೀಡಾಂಗನದಲ್ಲಿನ ಸಚಿನ್‌ ತೆಂಡೂಲ್ಕರ್‌ ಇನಿಂಗ್ಸ್‌ ಹೋರಾಟದ ರೀತಿಯಿದ್ದರೆ, ಮುಲ್ತಾನ್‌ನಲ್ಲಿ ಸೆಹ್ವಾಗ್‌ ಅವರ ಬ್ಯಾಟಿಂಗ್‌ ನಿಷ್ಕರುಣಿಯಾಗಿತ್ತು ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಕ್ರಿಕೆಟ್‌ ಬಾಜ್‌ ಟಾಕ್‌ ಶೋದಲ್ಲಿ ಮಾತನಾಡಿದ ಅವರು, "ವಿರೇಂದ್ರ ಸೆಹ್ವಾಗ್‌ ಗಳಿಸಿದ್ದ ತ್ರಿ ಶತಕಕ್ಕಿಂತ, ಚೆನ್ನೈನಲ್ಲಿ ಟೆಸ್ಟ್ ಪಂದ್ಯದ ಕಠಿಣ ಸನ್ನಿವೇಶದಲ್ಲಿ ಸಚಿನ್‌ ತೆಂಡೂಲ್ಕರ್‌ ಸಿಡಿಸಿದ್ದ 136 ರನ್‌ ಇನಿಂಗ್ಸ್‌ ಅತ್ಯಂತ ಮೌಲ್ಯಯುತವಾದ್ದು. ಏಕೆಂದರೆ, ನಾವು ಆ ಸರಣಿಗೆ ತುಂಬಾ ತಯಾರಿ ನಡೆಸಿ ಕಣಕ್ಕೆ ಇಳಿದಿದ್ದೆವು. ಉಭಯ ತಂಡಗಳ ನಡುವೆ ಅಂದು ಭಾರಿ ಕಾದಾಟ ನಡೆದಿತ್ತು,"ಎಂದು ಮುಷ್ತಾಕ್‌ ತಿಳಿಸಿದರು. 

"ಆದರೆ, ಮುಲ್ತಾನ್‌ನಲ್ಲಿ 2004ರಲ್ಲಿನ ಪಂದ್ಯ ಅಷ್ಟೊಂದು ಹೋರಾಟ ಇರಲಿಲ್ಲ. ವಿರೇಂದ್ರ ಸೆಹ್ವಾಗ್‌ ತ್ರಿಶತಕ ಸಿಡಿಸಿದ್ದು ಪಂದ್ಯದ ಮೊದಲನೇ ಇನಿಂಗ್ಸ್‌ ಆಗಿತ್ತು. ಇಲ್ಲಿ ಯಾವುದೇ ಒತ್ತಡವಿರಲಿಲ್ಲ. ಪ್ರಥಮ ಇನಿಂಗ್ಸ್‌ ಆಗಿದ್ದರಿಂದ ನಾವು ಪೂರ್ವ ತಯಾರಿ ನಡೆಸಿರಲಿಲ್ಲ. ಹಾಗಾಗಿ, ಪಂದ್ಯದಲ್ಲಿ ಹೆಚ್ಚಿನ ಒತ್ತಡವಿರಲಿಲ್ಲ. ಇದನ್ನು ಸದುಪಯೋಗ ಪಡಿಸಿಕೊಂಡ ಸೆಹ್ವಾಗ್‌, ವೈಯಕ್ತಿಕ 300ರ ಗಡಿ ದಾಟಲು ಸಾಧ್ಯವಾಯಿತು," ಎಂದು ಹೇಳಿದರು.  ಅಂದು 309 ರನ್‌ ಗಳಿಸಿದ ಸೆಹ್ವಾಗ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಭಾರತದ ಮೊದಲನೇ ಬ್ಯಾಟ್ಸ್‌ಮನ್‌ ಆಗಿದ್ದರು. ಈ ಇನಿಂಗ್ಸ್‌ನಲ್ಲಿ 43 ಓವರ್‌ ಬೌಲಿಂಗ್‌ ಮಾಡಿದ್ದ ಸಕ್ಲೇನ್‌ ಮುಷ್ತಾಕ್‌ 204 ರನ್‌ ನೀಡಿ ಕೇವಲ ಒಂದು ವಿಕೆಟ್‌ ಪಡೆದಿದ್ದರು. ಆದರೆ, ಚೆನ್ನೈ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಮಾಜಿ ಆಫ್‌ ಸ್ಪಿನ್ನರ್‌ ಐದು ವಿಕೆಟ್‌ಗಳ ಸಾಧನೆ ಮಾಡಿದ್ದರು. ಸೆಹ್ವಾಗ್‌ ಸ್ಫೊಟಕ ತ್ರಿಶತಕದಲ್ಲಿ ಪಿಚ್‌ ಪ್ಲ್ಯಾಟ್‌ ಆಗಿದ್ದು, ಇದರಸಂಪೂರ್ಣ ಲಾಭವನ್ನು ಅವರು ಪಡೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com