ಸಚಿನ್‌ಗೆ ಸೆಹ್ವಾಗ್‌ ರೀತಿ ಆಡುವಂತೆ ಸಲಹೆ ನೀಡಿದ್ದ ಕಪಿಲ್‌ ದೇವ್‌

ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ 1983ರ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ ಅತ್ಯಂತ ಶ್ರೇಷ್ಠ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌,...

Published: 30th July 2020 09:02 PM  |   Last Updated: 30th July 2020 09:02 PM   |  A+A-


kapil dev

ಕಪಿಲ್ ದೇವ್

Posted By : Lingaraj Badiger
Source : UNI

ನವದೆಹಲಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ 1983ರ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ ಅತ್ಯಂತ ಶ್ರೇಷ್ಠ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌ ಸೇರಿದಂತೆ ಹಲವರಿಗೆ ತಮ್ಮ ಆಟವನ್ನು ಸುಧಾರಿಸಿಕೊಳ್ಳಲು ಕಪಿಲ್‌ ದೇವ್‌ ಸಲಹೆ ನೀಡಿದ್ದಾರೆ.

ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಎತ್ತರ ಕಡಿಮೆಯಿದ್ದರೂ ಎತ್ತರದ ಬೌಲರ್‌ಗಳಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದರು. ಅದು ಸಚಿನ್‌ ತೆಂಡೂಲ್ಕರ್‌ ಯುಗವಾಗಿತ್ತು ಹಾಗೂ ಹಲವು ಬೌಲರ್‌ಗಳಿಗೆ ಭಾರತೀಯ ಆಟಗಾರ ದುಸ್ವಪ್ನವಾಗಿ ಕಾಡಿದ್ದರು. ಏನೇ ಆದರೂ, ಮಾಸ್ಟರ್‌ ಬ್ಲಾಸ್ಟರ್‌ 90ರ ದಶಕದಲ್ಲಿ ತುಂಬಾ ಹೆಣಗಾಡಿದ್ದರು. 90 ರನ್‌ಗಳನ್ನು 100 ರನ್‌ಗಳಾಗಿ ಪರಿವರ್ತಿಸುವಲ್ಲಿ ಅವರು ತುಂಬಾ ಎಡವುತ್ತಿದ್ದರು. 

ಸಚಿನ್‌ಗೆ ಶತಕ ಗಳಿಸುವುದು ಹೇಗೆಂದು ತಿಳಿದಿದ್ದರೂ ಅದನ್ನು ಡಬಲ್ ಮತ್ತು ಟ್ರಿಪಲ್ ಶತಕಗಳಾಗಿ ಪರಿವರ್ತಿಸುವುದು ಹೇಗೆ ಎಂದು ತಿಳಿದಿಲ್ಲ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು. ಸಚಿನ್‌ ತೆಂಡೂಲ್ಕರ್‌ ಮುಂಬೈಕರ್‌ ಮನಸ್ಥಿತಿಯನ್ನು ಅಳವಡಿಸಿಕೊಂಡಿರುವುದರಿಂದ ಶತಕ ಗಳಿಸಿದಾಗ ಮತ್ತೆ ಸೊನ್ನೆಯಿಂದ ಬ್ಯಾಟಿಂಗ್‌ ಆರಂಭಿಸುತ್ತಾರೆ ಎಂಬುದು ಕಪಿಲ್‌ ದೇವ್‌ ಅಭಿಪ್ರಾಯ. ಆದರೆ, ವಿರೇಂದ್ರ ಸೆಹ್ವಾಗ್‌ ರೀತಿ ನಿರ್ದಯ ವಿಧಾನವನ್ನು ಹೊಂದುವಂತೆ ಸಚಿನ್‌ಗೆ ಮಾಜಿ ನಾಯಕ ಸಲಹೆ ನೀಡಿದ್ದರು.

"ಸಚಿನ್‌ ತೆಂಡೂಲ್ಕರ್‌ಗೆ ತುಂಬಾ ಪ್ರತಿಭೆ ಇತ್ತು, ನಾವು ಇದನ್ನು ಯಾರೊಬ್ಬರಲ್ಲೂ ನೋಡಿರಲಿಲ್ಲ. ಅವರು ಶತಕಗಳನ್ನು ಸಿಡಿಸುವುದು ಹೇಗೆಂದು ತಿಳಿದಿರುವ ಯುಗದಲ್ಲಿ ಜನಿಸಿದರು. ಆದರೆ ಅವರು ಎಂದಿಗೂ ನಿರ್ದಯ ಬ್ಯಾಟ್ಸ್‌ಮನ್ ಆಗಲಿಲ್ಲ. ಸಚಿನ್ ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಹೊಂದಿದ್ದರು. ಅವರು 100 ರನ್‌ಗಳನ್ನು ಗಳಿಸುವುದನ್ನು ತಿಳಿದಿದ್ದರು. ಆದರೆ ಆ ಶತಕಗಳನ್ನು ದ್ವಿಶತಕ ಮತ್ತು ಟ್ರಿಪಲ್-ಶತಕಗಳಾಗಿ ಪರಿವರ್ತಿಸುವುದು ಹೇಗೆಂದು ತಿಳಿದಿರಲಿಲ್ಲ," ಎಂದು ಕಪಿಲ್ ದೇವ್ ಸಚಿನ್‌ ಬಗ್ಗೆ ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ.

"ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳ ಪ್ರತಿ ಓವರ್‌ಗೆ ಸಿಕ್ಸರ್‌ ಅಥವಾ ಬೌಂಡರಿ ಗಳಿಸಬಲ್ಲ ಕಾರಣ ಸಚಿನ್‌ಗೆ ಕನಿಷ್ಠ ಐದು ಟ್ರಿಪಲ್ ಶತಕಗಳನ್ನು ಮತ್ತು ಇನ್ನೊಂದು 10 ಡಬಲ್-ಶತಕಗಳನ್ನು ಗಳಿಸುವ ಪ್ರತಿಭೆ ಇತ್ತು. ಆದಾಗ್ಯೂ, ಅವರು ಮುಂಬೈ ಕ್ರಿಕೆಟ್‌ನಲ್ಲಿ ಸಿಕ್ಕಿಹಾಕಿಕೊಂಡರು [ಮನಸ್ಥಿತಿ]: ನೀವು ಶತಕ ಗಳಿಸಿ, ನಂತರ ಮತ್ತೆ ಶೂನ್ಯದಿಂದ ಪ್ರಾರಂಭಿಸುವುದು ಅಲ್ಲಿನ ವಾಡಿಕೆ. ಈ ಕಾರಣದಿಂದಲೇ ವಿರೇಂದ್ರ ಸೆಹ್ವಾಗ್‌ ರೀತಿ ಸಚಿನ್‌ ನಿರ್ದಯ ಕ್ರಿಕೆಟಿಗರಲ್ಲ," ಎಂದು ಹೇಳಿದರು. 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಅಗ್ರ ಸ್ಥಾನದಲ್ಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 15,921 ಹಾಗೂ ಓಡಿಐನಲ್ಲಿ 18,426 ರನ್‌ಗಳನ್ನು ಗಳಿಸಿದ್ದಾರೆ. ಒಟ್ಟಾರೆ 34,357 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp