ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ, ಆದರೆ ನನ್ನೊಳಗಿನ ಧ್ವನಿ ಎಚ್ಚರಿಸಿತು:ರಾಬಿನ್ ಉತ್ತಪ್ಪ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಖಿನ್ನತೆ, ಆತ್ಮಹತ್ಯೆ ವಿಷಯಗಳು ಬಹಳವಾಗಿ ಚರ್ಚೆಗೆ ಬರುತ್ತಿದೆ. ಹಲವರು ತಮ್ಮ ಜೀವನದಲ್ಲಿ ಕೂಡ ಖಿನ್ನತೆ ಅನುಭವಿಸಿದ್ದೆವು ಎಂದು ಹೇಳಿಕೊಳ್ಳುತ್ತಿದ್ದಾರೆ, ಅವರಲ್ಲಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಹ ಒಬ್ಬರು.
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ

ಕೊಚ್ಚಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಖಿನ್ನತೆ, ಆತ್ಮಹತ್ಯೆ ವಿಷಯಗಳು ಬಹಳವಾಗಿ ಚರ್ಚೆಗೆ ಬರುತ್ತಿದೆ. ಹಲವರು ತಮ್ಮ ಜೀವನದಲ್ಲಿ ಕೂಡ ಖಿನ್ನತೆ ಅನುಭವಿಸಿದ್ದೆವು ಎಂದು ಹೇಳಿಕೊಳ್ಳುತ್ತಿದ್ದಾರೆ, ಅವರಲ್ಲಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಹ ಒಬ್ಬರು.

ನನಗೆ ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿತ್ತು, ನನಗೆ ಆಗ ಆತ್ಮಹತ್ಯೆಯೊಂದೇ ಉಳಿದಿದ್ದ ಅವಕಾಶ ಎಂದು ಯೋಚಿಸಿದ್ದೆ. ಇಡೀ ವರ್ಷ ಆತ್ಮಹತ್ಯೆ ಯೋಚನೆ ನನಗೆ ಅಗಾಧವಾಗಿ ಕಾಡಿತ್ತು. ನಮ್ಮ ಮನೆಯ ಬಾಲ್ಕನಿಯಿಂದ ಹಾರುವ ಯೋಚನೆ ಮಾಡುತ್ತಿದ್ದೆ ಎಂಬ ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.

34 ವರ್ಷದ ರಾಬಿನ್ ಉತ್ತಪ್ಪ ಅವರಿಗೆ 2009ರಿಂದ 2012ರವರೆಗೆ ಮಾನಸಿಕವಾಗಿ ತೀವ್ರ ತೊಳಲಾಟ ಅನುಭವಿಸುತ್ತಿದ್ದರಂತೆ. ಮಾನಸಿಕ ಕಾಯಿಲೆ ಎಂಬುದು ಬಡವ ಶ್ರೀಮಂತ, ಆ ಜಾತಿ, ಈ ಜಾತಿ ಎಂದು ನೋಡದೆ ಯಾರಿಗೆ ಬೇಕಾದರೂ ಬರಬಹುದು ಎನ್ನುತ್ತಾರೆ.

ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸುತ್ತಿದ್ದ ಸಮಯದಲ್ಲಿ ರಾಬಿನ್ ಉತ್ತಪ್ಪ ಕ್ರಿಕೆಟ್ ವೃತ್ತಿಯಲ್ಲಿ ಉತ್ತುಂಗದಲ್ಲಿದ್ದರಂತೆ, ಚೆನ್ನಾಗಿ ಸಂಪಾದನೆ ಕೂಡ ಮಾಡುತ್ತಿದ್ದರಂತೆ. ಕರ್ನಾಟಕ ರಣಜಿ ಟ್ರೋಫಿ ತಂಡದ ಕ್ಯಾಪ್ಟನ್ ಕೂಡ ಆಗಿದ್ದರು. ಆರ್ ಸಿಬಿಗೆ ಆಟವಾಡುತ್ತಿದ್ದರು. ಆದರೆ ಮನಸ್ಸಿನೊಳಗೆ ಸಂಕಟ, ಬೇಸರ, ಖಿನ್ನತೆ ಇತ್ತು ಎಂಬ ವಿಚಾರವನ್ನು ಹೇಳಿಕೊಂಡರು.

ಉತ್ತಪ್ಪ ಅವರು ಈ ವಿಷಯವನ್ನು ಹೊರಗೆ ತಮ್ಮ ಸ್ನೇಹಿತರು, ಟೀಂನ ಜೊತೆಗಾರರ ಬಳಿ ಹೇಳಿಕೊಂಡಿರಲಿಲ್ಲವಂತೆ. ಕೇವಲ ಆತ್ಮೀಯ ಸಂಬಂಧಿಕರಲ್ಲಿ ಮಾತ್ರ ಹೇಳಿಕೊಂಡಿದ್ದರಂತೆ. ಕ್ರಿಕೆಟ್ ನಲ್ಲಿ ನಿಜವಾಗಿಯೂ ಮಾನಸಿಕವಾಗಿ ಬಳಲುತ್ತೇವೆ, ವರ್ಷದಲ್ಲಿ 250ರಿಂದ 300 ದಿನ ಹೊರಗೆಯೇ ಇರುತ್ತೇವೆ, ಹೀಗಾಗಿ ಅಲ್ಲಿ ಮನಸ್ಸಿಗೆ ಸಮಾಧಾನ, ಸಂತೋಷ ಸಿಗಲು ಸಾಧ್ಯವಿಲ್ಲ. ಮನೆಯವರು, ಸಂಬಂಧಿಕರಿಂದಲೇ ನನಗೆ ನೆಮ್ಮದಿ ಸಿಕ್ಕಿತು ಎನ್ನುವ ಉತ್ತಪ್ಪ ಖಿನ್ನತೆಯ ಪ್ರಮಾಣವನ್ನು ಆದಷ್ಟು ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎನ್ನುತ್ತಾರೆ.

ಕೆಲ ಸಮಯದ ಹಿಂದೆ ಮತ್ತೊಬ್ಬ ಕ್ರಿಕೆಟಿಗ ಮೊಹಮ್ಮದ್ ಶಮಿ, ಆಸ್ಟ್ರೇಲಿಯಾ ಕ್ರಿಕೆಟರ್ ಗ್ಲೆನ್ ಮ್ಯಾಕ್ಸ್ ವೆಲ್ ಸಹ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಹೇಳಿಕೊಂಡಿದ್ದರು.

ಆಟಗಾರರಿಗೆ ಕ್ರೀಡಾ ಮನಃಶಾಸ್ತ್ರಜ್ಞರು, ಮಾನಸಿಕ ಸ್ಥಿತಿಗತಿ ತರಬೇತುದಾರರಿದ್ದರೆ ಅವರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವೆನ್ನುತ್ತಾರೆ ಉತ್ತಪ್ಪ.  

ತಮ್ಮ ಖಿನ್ನತೆ, ಆತ್ಮಹತ್ಯೆಯ ಯೋಚನೆ ವಿಷಯ ಹೇಳಿಕೊಂಡಿರುವುದರಿಂದ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚನೆ ಮಾಡುವವರು ಸ್ವಲ್ಪ ಯೋಚಿಸಬಹುದು, ನಿರ್ಧಾರವನ್ನು ಹಿಂತೆಗೆದುಕೊಳ್ಳಬಹುದು ಎಂಬ ವಿಶ್ವಾಸ ಉತ್ತಪ್ಪ ಅವರದ್ದು, ಅವರಿಗೆ ಬಾಲ್ಕನಿಯಿಂದ ಹಾರಿ ಸಾಯಬೇಕು ಎಂದು ಮನಸ್ಸಿಗೆ ಯೋಚನೆ ಬಂದಾಗಲೆಲ್ಲ ತಡಿ ಸ್ವಲ್ಪ ಕಾಯಿ, ಯೋಚನೆ ಮಾಡು ಎಂದು ಧ್ವನಿ ಹೇಳುತ್ತಿತ್ತಂತೆ. ಧ್ವನಿಯ ಮಾತನ್ನು ನಾನು ಕೇಳಿದೆ ಎನ್ನುತ್ತಾರೆ.

ಕಷ್ಟದ ದಿನಗಳಿಂದ ಖಂಡಿತವಾಗಿಯೂ ಹೊರಬಂದು ಸಂತೋಷ ಜೀವನ ನಡೆಸಲು ಮನುಷ್ಯನಿಂದ ಸಾಧ್ಯ. ಮಾನಸಿಕ ರೋಗದ ಬಗ್ಗೆ ಇರುವ ಹಿಂಜರಿಕೆ, ಭಯವನ್ನು ದೂರಮಾಡಿ ಸೂಕ್ತ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎನ್ನುತ್ತಾರೆ ರಾಬಿನ್ ಉತ್ತಪ್ಪ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com