ಐಪಿಎಲ್ 2020: ಫ್ರಾಂಚೈಸಿ, ಆಟಗಾರರಿಗೆ ಬಿಸಿಸಿಐ ಶಾಕ್, ಪ್ರಶಸ್ತಿ ಮೊತ್ತದಲ್ಲಿ ಶೇ.50ರಷ್ಟು ಕಡಿತ!

ಮಹತ್ವದ ಬೆಳವಣಿಗೆಯಲ್ಲಿ ಮುಂಬರುವ ಐಪಿಎಲ್ ಸರಣಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಕ್ರಿಕೆಟಿಗರಿಗೆ ಮತ್ತು ಫ್ರಾಂಚೈಸಿ, ತಂಡದ ಮಾಲೀಕರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದ್ದು, ಪ್ರಶಸ್ತಿ ಮೊತ್ತದಲ್ಲಿ ಶೇ.50ರಷ್ಟು ಹಣವನ್ನು ಕಡಿತ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಮುಂಬರುವ ಐಪಿಎಲ್ ಸರಣಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಕ್ರಿಕೆಟಿಗರಿಗೆ ಮತ್ತು ಫ್ರಾಂಚೈಸಿ, ತಂಡದ ಮಾಲೀಕರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದ್ದು, ಪ್ರಶಸ್ತಿ ಮೊತ್ತದಲ್ಲಿ ಶೇ.50ರಷ್ಟು ಹಣವನ್ನು ಕಡಿತ ಮಾಡಿದೆ.

ಹೌದು.. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು. ಇದರ ಪರಿಣಾಮವಾಗಿ ವೆಚ್ಚ ಕಡಿತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದರಂತೆ ಬಿಸಿಸಿಐನ ಯಾವೆಲ್ಲಾ ಯೋಜನೆಗಳಲ್ಲಿ ಗರಿಷ್ಟ ಎಷ್ಟೆಷ್ಟು ಹಣ ಉಳಿತಾಯ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇದೇ ಕಾರಣಕ್ಕೆ ಬಿಸಿಸಿಐನ ಮಿಲಿಯನ್ ಡಾಲರ್ ಬೇಬಿ ಐಪಿಎಲ್ ನ ಪ್ರಶಸ್ತಿ ಮೊತ್ತದಲ್ಲಿ ಭಾರಿ ಪ್ರಮಾಣದ ಕಡಿತ ಮಾಡಲಾಗಿದೆ.

ಮೂಲಗಳ ಪ್ರಕಾರ ಬಿಸಿಸಿಐ ಐಪಿಎಲ್ ಪ್ರಶಸ್ತಿ ಮೊತ್ತದಲ್ಲಿ ಬರೊಬ್ಬರಿ ಶೇ.50ರಷ್ಟು ಕಡಿತ ಮಾಡಿದ್ದು, ಅದರಂತೆ ಚಾಂಪಿಯನ್ ತಂಡಕ್ಕೆ ಈ ಹಿಂದೆ ನೀಡಲಾಗುತ್ತಿದ್ದ 20 ಕೋಟಿ ರೂ ಬದಲಿಗೆ ಕೇವಲ 10 ಕೋಟಿ ರೂ ನೀಡಲು ನಿರ್ಧರಿಸಲಾಗಿದೆ. ಅಂತೆಯೇ ಈ ಹಿಂದೆ ರನ್ನರ್ ಅಪ್ ತಂಡಕ್ಕೆ ನೀಡಲಾಗುತ್ತಿದ್ದ 12.5 ಕೋಟಿ ರೂಗಳನ್ನು 6.25 ಕೋಟಿ ರೂಗಳಿಗೆ ಇಳಿಸಲಾಗಿದೆ. ಅಂತೆಯೇ ಸೆಮಿ ಫೈನಲ್ ನಲ್ಲಿ ಸೋಲುಕಂಡ ಕ್ವಾಲಿಫೈಯರ್ ತಂಡಗಳಿಗೆ ತಲಾ 4.3 ಕೋಟಿ ರೂ ನೀಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಬಿಸಿಸಿಐ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿದೆ.

ತಂಡದ ಮಾಲೀಕರು ಮತ್ತು ಫ್ರಾಂಚೈಸಿ ವೆಚ್ಚದಲ್ಲಿಯೂ ಕಡಿತ
ಇನ್ನು ಇದೇ ವೇಳೆ ತಂಡದ ಮಾಲೀಕರು ಮತ್ತು ಫ್ರಾಂಚೈಸಿ ವೆಚ್ಚದಲ್ಲಿಯೂ ಕಡಿತ ಮಾಡಲಾಗಿದ್ದು, ಪ್ರಸ್ತುತ ಎಲ್ಲ ಫ್ರಾಂಚೈಸಿಗಳೂ ಉತ್ತಮ ಆದಾಯದಲ್ಲಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿದ್ದು, ಈ ಹಿನ್ನಲೆಯಲ್ಲಿ ಫ್ರಾಂಚೈಸಿಗಳ ವೆಚ್ಚವನ್ನು 1 ಕೋಟಿಯಿಂದ 50 ಲಕ್ಷ ರೂಗೆ ಇಳಿಕೆ ಮಾಡಲಾಗಿದೆ. ಅಲ್ಲದೆ ಐಪಿಎಲ್ ಪಂದ್ಯಗಳ ಆಯೋಜನೆ ಮಾಡುವ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 1 ಕೋಟಿ ರೂ ನೀಡಲಾಗುತ್ತಿದ್ದು, ಈ ಪೈಕಿ ಬಿಸಿಸಿಐ 50 ಲಕ್ಷ ರೂ ಮತ್ತು ಫ್ರಾಂಚೈಸಿಗಳು ತಲಾ 50 ಲಕ್ಷ ರೂ ನೀಡಲಿದ್ದಾರೆ ಎನ್ನಲಾಗಿದೆ.

ಬಿಸಿಸಿಐ ಅಧಿಕಾರಿಗಳಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ ಇಲ್ಲ
ಇನ್ನು ಈ ಹಿಂದೆ ಐಪಿಎಲ್ ಪಂದ್ಯ ಆಯೋಜನೆ ಮತ್ತು ವೀಕ್ಷಣೆ ಸಂಬಂಧ ಮಧ್ಯಮ ಶ್ರೇಣಿ ಅಥವಾ ವರ್ಗದ ಬಿಸಿಸಿಐ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಮಾನದ ದುಬಾರಿ ಬಿಸಿನೆಸ್ ಕ್ಲಾಸ್ ಟಿಕೆಟ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಈ  ವ್ಯವಸ್ಥೆಯನ್ನು ಇದೀಗ ರದ್ದು ಮಾಡಲಾಗಿದ್ದು 8 ಗಂಟೆಗಳಿಗಿಂತ ಕಡಿಮೆ ಅವಧಿಯ ಪ್ರಯಾಣ ಮಾಡುವುದಕ್ಕೆ ಬಿಸಿನೆಸ್ ಕ್ಲಾಸ್ ಟಿಕೆಟ್ ರದ್ದು ಮಾಡಲಾಗಿದೆ. 

ಒಟ್ಟಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರ ವಹಿಸಿಕೊಂಡ ಬಳಿಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುತ್ತಿದ್ದು, ಐಪಿಎಲ್ ನ ವೆಚ್ಚಗಳಲ್ಲಿ ಭಾರಿ ಕಡಿತ ಮಾಡಿದ್ದಾರೆ. ಇದೇ ಮಾರ್ಚ್ 29ರಿಂದ ಐಪಿಎಲ್ ಸರಣಿ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com