ಸಾರ್ವಜನಿಕವಾಗಿ ಅತ್ತು ಕೈಲಾಗದವರೆನಿಸಿಕೊಳ್ಳಬೇಡಿ: ಟೀಂ ಇಂಡಿಯಾ ಆಟಗಾರ್ತಿಯರಿಗೆ ನೆಟಿಗರು ತರಾಟೆ!

ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಅನುಭವಿಸಿದ್ದು ಮೈದಾನದಲ್ಲಿ ಆಟಗಾರ್ತಿಯರು ಕಣ್ಣೀರು ಹಾಕಿದ್ದರು. ಇದಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. 
ಟೀಂ ಇಂಡಿಯಾ
ಟೀಂ ಇಂಡಿಯಾ

ನವದೆಹಲಿ: ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಅನುಭವಿಸಿದ್ದು ಮೈದಾನದಲ್ಲಿ ಆಟಗಾರ್ತಿಯರು ಕಣ್ಣೀರು ಹಾಕಿದ್ದರು. ಇದಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. 

ಮೆಲ್ಬೋರ್ನ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತ್ತು. ಈ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ 99 ರನ್ ಗಳಿಗೆ ಆಲೌಟ್ ಆಗಿ 85 ರನ್ ಗಳಿಂದ ಸೋಲು ಕಂಡಿತ್ತು. 

ನಂತರ ಮೈದಾನದಲ್ಲಿ ಮಹಿಳಾ ತಂಡ ಕಣ್ಣೀರು ಹಾಕಿದ್ದಕ್ಕೆ ನೆಟಿಗರು ಗರಂ ಆಗಿದ್ದಾರೆ. ಸಾರ್ವಜನಿಕವಾಗಿ ಅತ್ತು ಕೈಲಾಗದವರೆನಿಸಿಕೊಳ್ಳಬೇಡಿ ಎಂದು ಟ್ವೀಟಿಸುತ್ತಿದ್ದಾರೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ವನಿತೆಯರು ಮಹತ್ವದ ಪಂದ್ಯದಲ್ಲಿ ಸೋತಿದ್ದೇಲಿ ಅಥವಾ ಸೋತಿದ್ದೇಗೆ ಎಂಬುದರ ಬಗ್ಗೆ ವಿಶ್ಲೇಷಿಸೋಣ: 

ಮೊದಲಿಗೆ ಅನನುಭವಿ ಭಾರತೀಯ ಆಟಗಾರರರು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಗಳ ಅಬ್ಬರಕ್ಕೆ ಆತ್ಮವಿಶ್ವಾಸವನ್ನೇ   ಕಳೆದುಕೊಂಡರು. ಅಲಿಸಾ ಹೀಲಿ ಮತ್ತು ಬೆತ್ ಮೂನಿ ಜೋಡಿ  ದೀಪ್ತಿ ಶರ್ಮಾ ಸೇರಿದಂತೆ ಭಾರತದ ಎಲ್ಲ ಬೌಲರ್ ಗಳನ್ನು ಇನ್ನಿಲ್ಲದಂತೆ ದಂಡಿಸಿದರು. ಇದು 86 ಸಾವಿರದ 174 ದಾಖಲೆಯ ಪ್ರೇಕ್ಷಕರ ಎದುರು ಭಾರತೀಯ ಬೌಲರ್ ಗಳ ಆತ್ಮವಿಶ್ವಾಸವನ್ನು ಕುಂದುವಂತೆ ಮಾಡಿತು.

ವೇಗಿ ಶಿಖಾ ಪಾಂಡೆ 11ನೇ ಓವರ್ ನಲ್ಲಿ 23 ರನ್ ಬಿಟ್ಟುಕೊಟ್ಟಿದ್ದು, ಇದಕ್ಕೆ ಸಾಕ್ಷಿಯಾಗಿತ್ತು. ಈ ಓವರ್ ನಲ್ಲಿ ಹೀಲಿ ಮೂರು ಸಿಕ್ಸರ್ ಸಿಡಿಸಿ ಗಮನ ಸೆೆಳೆದರು. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ ಉರುಳಿಸಿದ್ದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಫೈನಲ್ ನಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.

ಎರಡನೇಯದಾಗಿ ಭಾರತೀಯ ವನಿತಯೆರು ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕವೇ ಫೈನಲ್ ಪ್ರವೇಶಿಸಿದ್ದರು. ಆದರೆ ಭಾನುವಾರ ಕಳೆಪೆ ಬೌಲಿಂಗ್ ಜತೆಗೆ ಹಲವು ಕ್ಯಾಚ್ ಗಳನ್ನು ಕೈಚೆಲ್ಲುವ ಮೂಲಕ ಒತ್ತಡಕ್ಕೆ ಸಿಲುಕಿದರು.
ಇನಿಂಗ್ಸ್ ನ ಐದನೇ ಎಸೆತದಲ್ಲಿ ಹೀಲಿ ನೀಡಿದ ಕ್ಯಾಚನ್ನು ಹಿಡಿಯುವಲ್ಲಿ ಶಾರ್ಟ್ ಕವರ್ ನಲ್ಲಿದ್ದ ಶಫಾಲಿ ವರ್ಮಾ ವಿಫಲಗೊಂಡರು. ಇದರ ಲಾಭ ಪಡೆದ ಹೀಲಿ ಅಂತಿಮವಾಗಿ 75 ರನ್ ಗಳಿಸಿ ಆಸೀಸ್ ಬೃಹತ್ ಮೊತ್ತಕ್ಕೆ ನೆರವಾದರು.
4ನೇ ಓವರ್ ನಲ್ಲಿ 8 ರನ್ ಗಳಿಸಿದ್ದಾಗ ರಾಜೇಶ್ವರಿ ಗಾಯಕ್ವಾಡ್ ಅವರಿಂದ ಜೀವದಾನ ಪಡೆದ ಮೂನಿ ಸಹ ಭಾರತೀಯರಿಗೆ ದುಬಾರಿಯಾದರು. ಏಕೆಂದರೆ ಈ ಜೋಡಿ ಮೊದಲ ವಿಕೆಟ್ ಗೆ 115 ರನ್ ಜತೆಯಾಟ ನಿರ್ವಹಿಸಿತು. ಇದು ಭಾರತೀಯರಿಗೆ ನುಂಗಲಾರದ ತುತ್ತಾಯಿತು.

ಮೂರನೇಯ ಕಾರಣ ಕೈಕೊಟ್ಟ ಬ್ಯಾಟಿಂಗ್. ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಬ್ಯಾಟಿಂಗ್ ವೈಫಲ್ಯ ಫೈನಲ್ ನಲ್ಲಿಯೂ ಮುಂದುವರಿಯಿತು. ಫೈನಲ್ ಗೂ ಮುನ್ನ ದೊರೆತ 8 ದಿನಗಳ ವಿಶ್ರಾಂತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಭಾರತೀಯ ವನಿತೆಯರು ವಿಫಲರಾದರು. ಶಫಾಲಿ ವರ್ಮ(2). ಜೇಮಿಮಾ ರೋಡ್ರಿಗಸ್ (0) , ಮಂಧಾನ(11) ಮತ್ತು ಹರ್ಮನ್ ಪ್ರೀತ್ ಕೌರ್ (4) ಅವರನ್ನು ಪವರ್ ಪ್ಲೇ ಅವಧಿಗೂ ಮುನ್ನವೇ ಕಳೆದುಕೊಂಡ ಭಾರತ ಕೇವಲ 30 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಹೀಗಾಗಿ ನಂತರ ಬಂದವರು ಒತ್ತಡ ಮೆಟ್ಟಿನಿಲ್ಲಲು ಸಾಧ್ಯವಾಗಲಿಲ್ಲ.ದೀಪ್ತಿ (33) ಮತ್ತು ರಿಚಾ ಘೋಷ್ (18) ಅಲ್ಪ ಹೋರಾಟ ನಡೆಸಿದರೂ ಅನುಭವಿ ವೇದಾ ಕೃಷ್ಣಮೂರ್ತಿ (19) ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ.

ಟಾಸ್  ಸೋತಿದ್ದು, ಸೋಲಿಗೆ ಮತ್ತೊಂದು ಕಾರಣ. ಮಹತ್ವ ಅಥವಾ ನಿರ್ಣಾಯಕ ಪಂದ್ಯಗಳಲ್ಲಿ ಬಹುತೇಕ ನಾಯಕರು ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತಾರೆ.ವಿಶೇಷವಾಗಿ ಫೈನಲ್ ನಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವುದು ಇದರ ಉದ್ದೇಶ. ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆಲ್ಲುವ ಮೂಲಕ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು ಆತಿಥೇಯರಿಗೆ ವರವಾದರೆ, ಪ್ರವಾಸಿಗರಿಗೆ ಶಾಪವಾಗುತ್ತದೆ. ಅಂತೆಯೇ 4 ವಿಕೆಟ್ ಗೆ ಆಸೀಸ್ 184 ರನ್  ಪೇರಿಸುತ್ತದೆ.
ಟೂರ್ನಿಯಲ್ಲಿ ಎರಡನೇ ಬಾರಿ ಚೇಸಿಂಗ್ ಗೆ ಇಳಿದ ಹರ್ಮನ್ ಪ್ರೀತ್ ಕೌರ್ ಬಳಗ ಕೇವಲ 99 ರನ್ ಗಳಿಗೆ ಗಂಟು ಮೂಟೆ ಕಟ್ಟುವುದರೊಂದಿಗೆ 85 ರನ್ ಗಳ ಭಾರಿ ಅಂತರ ಸೋಲಿಗೆ ಒಳಗಾಯಿತು.

ಲೀಗ್ ಹಂತದಲ್ಲಿ ನಾಲ್ಕು ಇನಿಂಗ್ಸ್ ಗಳಿಂದ 161 ರನ್ ಗಳಿಸಿ ಭಾರತಕ್ಕೆ ಬ್ಯಾಟಿಂಗ್ ಆಧಾರ ಸ್ತಂಭವಾಗಿದ್ದ ಯುವ ಹಾಗೂ ಅನನುಭವಿ ಶಫಾಲಿ ವರ್ಮಾ, ಫೈನಲ್ ನಲ್ಲಿ ಸ್ಕಟ್ ಬೌಲಿಂಗ್ ನಲ್ಲಿ ನಿರುತ್ತರಗೊಂಡರು. ಇದು ಭಾರತದ ಗೆಲುವಿಗೆ ಮುಳುವಾಗುತ್ತದೆ. ವಿಶ್ವಕಪ್ ಆಡಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ ಶಫಾಲಿ (16 ವರ್ಷ) ಭಾನುವಾರ ಹಿಂದಿನ ಪ್ರದರ್ಶನ ಪುನರಾವರ್ತಿಸುವಲ್ಲಿ ವಿಫಲಗೊಂಡಿದ್ದು ಸಹ ಭಾರತದ ಹಾದಿ ಕಠಿಣಗೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com