ಧರ್ಮಶಾಲಾದಲ್ಲಿ ನಾಳೆ ಭಾರತ- ದಕ್ಷಿಣ ಆಫ್ರಿಕಾ ಮೊದಲ ಏಕದಿನ ಕದನ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿ ಗುಡ್ಡಗಳ ನಾಡು ಧರ್ಮಶಾಲಾದಲ್ಲಿ ನಡೆಯಲಿದೆ.
ಧರ್ಮಶಾಲಾದಲ್ಲಿ ಅಭ್ಯಾಸ ನಿರತ ಭಾರತ ತಂಡ
ಧರ್ಮಶಾಲಾದಲ್ಲಿ ಅಭ್ಯಾಸ ನಿರತ ಭಾರತ ತಂಡ

ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಹಣಾಹಣಿ ಗುಡ್ಡಗಳ ನಾಡು ಧರ್ಮಶಾಲಾದಲ್ಲಿ ನಡೆಯಲಿದೆ.

ಕೋವಿಡ್-19 ಆತಂಕದಿಂದ ಭಾರತ ಸೇರಿದಂತೆ ವಿಶ್ವಾದ್ಯಂತ ಬಹುತೇಕ ಕ್ರೀಡಾ ಟೂರ್ನಿಗಳನ್ನು ಮುಂದೂಡಲಾಗಿದೆ ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ನಡುವೆಯೂ ಭಾರತ -ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಟೂರ್ನಿ ಆಯೋಜನೆಗೊಂಡಿರುವುದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಭಾರತದಲ್ಲಿ ಈಗಾಗಲೇ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ 50ಕ್ಕೇರಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 

ಉಭಯ ತಂಡಗಳ ಬಹುತೇಕ ಆಟಗಾರರು ಮಾಸ್ಕ್ ಧರಿಸಿಯೇ ಅಭ್ಯಾಸ ನಡೆಸಿದ್ದಾರೆ. ಆದರೆ ಪಂದ್ಯದ ವೇಳೆ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದರ ನಡುವೆಯೂ ಪತ್ರಿಕಾಗೋಷ್ಠಿ, ಅಭಿಮಾನಿಗಳಿಂದ ಅಂತರ ಕಾಯ್ದುಕೊಳ್ಳಲು ಇತ್ತಂಡಗಳು ನಿರ್ಧರಿಸಿವೆ.

ಇನ್ನು ಕೊರೊನಾ ಭೀತಿಯಿಂದ ಪ್ರೇಕ್ಷಕರು ಪಂದ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆಯಾದರೂ ಕ್ರಿಕೆಟ್ ಆರಾಧಿಸುವ ಈ ದೇಶದಲ್ಲಿ ಅಭಿಮಾನಿಗಳು ಮೈದಾನಕ್ಕಾಗಿಮಿಸುವ ನಿರೀಕ್ಷೆಯಲ್ಲಿ ಬಿಸಿಸಿಐ ಎದುರು ನೋಡುತ್ತಿದೆ.

ಸ್ಥಳೀಯ ಕ್ರಿಕೆಟ್ ಸಂಸ್ಥೆ, ಮೈದಾನದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಈ ಮಧ್ಯೆ, ಗುರುವಾರ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಭಾರತ ಮತ್ಈತು ದಕ್ಷಿಣ ಆಫ್ರಿಕಾ ನಡುವಿನ ಸರಣಿ ಮಾ.29ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ನೇರ ಪರಿಣಾಮ ಬೀರಲಿದೆ. ಒಂದು ವೇಳೆ ಕೊರಾನಾ ಭೀತಿಯಿಂದ ಪ್ರೇಕ್ಷಕರು ಮೈದಾನಕ್ಕೆ ಬಾರದಿದ್ದರೆ, ಐಪಿಎಲ್ ಆಯೋಜನೆ ಬಗ್ಗೆ ಅನುಮಾನ ಮೂಡಲಿದೆ.

ಇತ್ತೀಚೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ವೈಟ್ ವಾಷ್ ಗೆ ತುತ್ತಾಗಿ ಹಿರಿಯ ಆಟಗಾರರಿಂದ ಭಾರಿ ಟೀಕೆಗೆ ಗುರಿಯಾಗಿದೆ. ಆದರೀಗ ಆ ಟೀಕೆಗಳಿಗೆ ಉತ್ತರಿಸುವ ಸಮಯ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಮೇಲಿದೆ.

ಗಾಯದಿಂದ ಚೇತರಿಸಿಕೊಳ್ಳದಿರುವ ರೋಹಿತ್ ಶರ್ಮಾ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಆದರೆ ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜತೆಗೆ ವೇಗಿ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿದ್ದಾರೆ.

ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಮಿಂಚದಿದ್ದರೂ ಆಯ್ಕೆಗಾರರ ನಂಬಿಕೆ ಉಳಿಸಿಕೊಂಡಿದ್ದ ಯುವ ಆಟಗಾರ ಪೃಥ್ವಿ ಶಾ, ಶಿಖರ್ ಧವನ್ ಅಥವಾ ಕೆ.ಎಲ್. ರಾಹುಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.

ಕೀವಿಸ್ ಪ್ರವಾಸದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗೆ ಒಳಗಾಗಿದ್ದ ನಾಯಕ ಕೊಹ್ಲಿ ತಮ್ಮ ಎಂದಿನ ಆಟಕ್ಕೆ ಮರಳಬೇಕಿದೆ. ಹಲವು ತಿಂಗಳ ವಿಶ್ರಾಂತಿ ಬಳಿಕ ಹಾರ್ದಿಕ್ ಪಾಂಡ್ಯ ತಂಡ ಸೇರಿರುವುದು ಆಲ್ ರೌಂಡ್ ವಿಭಾಗವನ್ನು ಬಲಪಡಿಸಿದೆ. ಇತ್ತೀಚೆಗಷ್ಟೇ ನಡೆದ ಸ್ಥಳೀಯ ಟಿ20 ಟೂರ್ನಿಯಲ್ಲಿ ಸತತ ಎರಡು ಅಬ್ಬರದ ಶತಕ ಸಿಡಿಸಿದ್ದ ಹಾರ್ದಿಕ್, ತಮ್ಮ ಫಿಟ್ನೆಸನ್ನು ಸಾಬೀತುಪಡಿಸಿದ್ದಾರೆ.

ವೇಗಿ ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ ಮತ್ತು ನವ್ ದೀಪ್ ಸೈನಿ ಭಾರತದ ಬೌಲಿಂಗ್ ಅಸ್ತ್ರಗಳೆನಿಸಿದ್ದಾರೆ. ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ವಿಭಾಗವನ್ನು ನಿರ್ವಹಿಸಲಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಪೃಥ್ವಿ ಶಾ, ಯಜ್ವೇಂದ್ರ ಚಹಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ, ಮನೀಶ್ ಪಾಂಡೆ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ನವ್ ದೀಪ್ ಸೈನಿ, ಶುಬ್ ಮನ್ ಗಿಲ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ನಾಯಕ), ತೆಂಬ ಬವುಮಾ, ಫಾಫ್ ಡು ಪ್ಲೆಸಿಸ್, ಬ್ಯೂರಾನ್ ಹೆಂಡ್ರಿಕ್ಸ್, ಹೇನ್ರಿಚ್ ಕ್ಲಾಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್ , ಜನ್ನೆಮಾನ್ ಮಲಾನ್, ಲುಂಗಿ ಎನ್ ಗಿಡಿ, ಆ್ಯನ್ರಿಚ್ ನೋರ್ತ್ಜೆ, ಆ್ಯಂಡಿಲ್ ಫೆಹ್ಲುಕ್ವಾಯೊ, ಲುಥೊ ಸಿಪಮ್ಲಾ, ಜೆಜೆ ಸ್ಮಟ್ಸ್, ರಾಸಿ ವ್ಯಾನ್ ದುಸೆನ್, ಕೈಲ್ ವೆರೆಯ್ನೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಸ್ಥಳ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ, ಧರ್ಮಶಾಲಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com