ಕೊರೋನಾ ವೈರಸ್ ಎಫೆಕ್ಟ್: ಇಂಗ್ಲೆಂಡ್ ಕ್ರಿಕೆಟಿಗರಿಗೆ ಪ್ರತ್ಯೇಕ ಚೆಂಡುಗಳು, ಗುರುತಿಸಲಾದ ನೀರಿನ ಬಾಟಲ್ ಗಳು

ಮುಂಬರುವ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಇಂಗ್ಲೆಂಡ್ ತಂಡದ ಆಟಗಾರರಿಗೆ ಪ್ರತ್ಯೇಕ ಚೆಂಡುಗಳು, ಗುರುತಿಸಲಾದ ನೀರಿನ ಬಾಟಲ್ ಗಳು ನೀಡಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಮುಂಬರುವ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಇಂಗ್ಲೆಂಡ್ ತಂಡದ ಆಟಗಾರರಿಗೆ ಪ್ರತ್ಯೇಕ ಚೆಂಡುಗಳು, ಗುರುತಿಸಲಾದ ನೀರಿನ ಬಾಟಲ್ ಗಳು ನೀಡಲಾಗುತ್ತಿದೆ.

ಹೌದು.. ಮಾರಕ ಕೊರೋನಾ ವೈರಸ್ ಭೀತಿಯಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಚಾಲನೆ ದೊರೆಯುತ್ತಿದ್ದು, ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಮುಂದಿನವಾರದಿಂದಲೇ ಇಂಗ್ಲೆಂಡ್ ತಂಡ ತನ್ನ ಅಭ್ಯಾಸ ಆರಂಭಿಸುತ್ತಿದ್ದು,  ಇದಕ್ಕಾಗಿ ಪ್ರತಿಯೊಬ್ಬ ಆಟಗಾರರಿಗೂ ಪ್ರತ್ಯೇಕ ಚೆಂಡುಗಳು ಮತ್ತು ಗುರುತಿಸಲಾದ ಪ್ರತ್ಯೇಕ ನೀರಿನ ಬಾಟಲಿಗಳನ್ನು ನೀಡಲಾಗುತ್ತಿದೆ. 

ಈ ಬಗ್ಗೆ ಗಾರ್ಡಿಯನ್ ಪತ್ರಿಕೆಗೆ ಮಾಹಿತಿ ನೀಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಆಶ್ಲೆ ಜೈಲ್ಸ್ ಅವರು, ಕೊರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಐಸಿಸಿ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಒಬ್ಬರಿಗೆ ಒಂದು ಚೆಂಡಿನಂತೆ, ಅಭ್ಯಾಸದಲ್ಲಿ  ಪಾಲ್ಗೊಳ್ಳುವ ಪ್ರತೀಯೊಬ್ಬ ಆಟಗಾರನಿಗೂ ಒದೊಂದು ಚೆಂಡು ನೀಡಲಾಗುತ್ತದೆ. ಅಭ್ಯಾಸದ ವೇಳೆ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಬಾಯಿಯ ಜೊಲ್ಲು ಬಳಸುವಂತಿಲ್ಲ. ಅಲ್ಲದೆ ಅಭ್ಯಾಸದ ವೇಳೆ ಆಟಗಾರರು ಕನಿಷ್ಠ 2 ಮೀಟರ್ ಅಂತರ ಪಾಲಿಸಬೇಕು. ಪೆವಿಲಿಯನ್  ನಲ್ಲಾಗಲಿ ಅಥವಾ ಡ್ರೆಸಿಂಗ್ ರೂಮ್ ನಲ್ಲಾಗಲಿ ಸಾಮಾಜಿಕ ಅಂತರ ಕಡ್ಡಾಯ ಎಂದು ಹೇಳಿದ್ದಾರೆ.

ಐಸಿಸಿ ಮಾರ್ಗದರ್ಶಿ ಸೂತ್ರದಲ್ಲೇನಿದೆ
ಇನ್ನು ಗಾರ್ಡಿಯನ್ ಪತ್ರಿಕೆ ವರದಿ ಮಾಡಿರುವಂತೆ ಐಸಿಸಿ ನೀಡಿರುವ ಮಾರ್ಗದರ್ಶಿ ಸೂತ್ರದಲ್ಲಿ ಆಟಗಾರರ ಸುರಕ್ಷತೆ ಕುರಿತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಸಾಮಾಜಿಕ ಅಂತರದ ಬಗ್ಗೆ ಹೇಳಲಾಗಿದ್ದು, ಪೆವಿಲಿಯನ್ ನಲ್ಲಾಗಲಿ ಅಥವಾ ಡ್ರೆಸಿಂಗ್ ರೂಮ್  ನಲ್ಲಾಗಲಿ ಆಟಗಾರರು ಕನಿಷ್ಠ 2 ಮೀಟರ್ ಅಂತರ ಪಾಲಿಸಬೇಕು. ಆಟಗಾರರಿಗೆ ನೀಡಲಾಗುವ ಚೆಂಡುಗಳನ್ನು ಅಭ್ಯಾಸದ ಬಳಿಕ ಅವರ ಕಿಟ್ ಬ್ಯಾಗ್ ಗಳಲ್ಲಿಯೇ ಕೊಂಡೊಯ್ಯಬೇಕು. ಡ್ರೆಸಿಂಗ್ ರೂಂ ನಲ್ಲಿ ಸ್ಯಾನಿಟೈಸರ್ ಗಳ ಬಳಕೆ ಕಡ್ಡಾಯ. ಕೋಚ್ ಜೊತೆ ಚರ್ಚೆ ನಡೆಸುವಾಗ ಒಬ್ಬ  ಆಟಗಾರ ಮಾತ್ರ ಮುಖಾಮುಖಿ ಮಾತನಾಡಬಹುದು.

ಅದೂ ಕೂಡ ಸಾಮಾಜಿಕ ಅಂತರ ಪಾಲಿಸಿಕೊಂಡು. ಅಟಗಾರರು ಅಭ್ಯಾಸಕ್ಕೆ ಬರುವಾಗ ಬಸ್ ನಲ್ಲಿ ಸಾಮೂಹಿಕವಾಗಿ ಅಲ್ಲದೇ ಕಾರಿನಲ್ಲಿ ಬರಬೇಕು. ಆಟಗಾರರು ತಮಗೆ ನೀಡುವ ನೀರಿನ ಬಾಟಲಿಗಳನ್ನು ಮಾತ್ರ ಬಳಕೆ  ಮಾಡಬೇಕು. ಅಭ್ಯಾಸದ ಪೂರ್ವ ಮತ್ತು ಬಳಿಕ ಕಡ್ಡಾಯ ಸ್ನಾನ ಮಾಡಬೇಕು. ಅಭ್ಯಾಸಕ್ಕೆ ಬರುವ ಮುನ್ನ ಮತ್ತು ಹೊಟೆಲ್ ಗೆ ಬರುವ ಮುನ್ನ ಆಟಗಾರರು ಕಡ್ಡಾಯ ದೇಹದ ಉಷ್ಣಾಂಶ ಪರೀಕ್ಷೆಗೆ ಒಳಪಡಬೇಕು. ಈ ದೇಹದ ಉಷ್ಣಾಂಶ ಪರೀಕ್ಷೆ ವೇಳೆ ತಂಡದ ಫಿಸಿಯೋ, ಕೋಚ್ ಮತ್ತು  ವೈದ್ಯರು ಕಡ್ಡಾಯವಾಗಿ ಹಾಜರಿರಬೇಕು. ಫಿಸಿಯೋ, ವೈದ್ಯರು ರಲ್ಲಿ ಒಬ್ಬರು ಪಿಪಿಇ ಕಿಟ್ ಧರಿಸಿರಬೇಕು. ಇನ್ನು ಅಭ್ಯಾಸದ ವೇಳೆ ಬ್ಯಾಟ್ಸ್ ಮನ್ ಗಳು ಬಾಲ್ ಅನ್ನು ಮುಟ್ಟದೇ ಬ್ಯಾಟ್ ನಿಂದ ಅಥವಾ ಕಾಲಿನಿಂದ ತಳ್ಳಿ ಬೌಲರ್ ಗೆ ಚೆಂಡು ರವಾನೆ ಮಾಡಬಹುದು ಎಂದು ಹೇಳಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com