ಚಾಪೆಲ್‌ ತಮ್ಮ ಹೆಸರನ್ನು ತಾವೇ ಹಾಳುಮಾಡಿಕೊಂಡರು:‌ ಮೊಹಮ್ಮದ್ ಕೈಫ್

ಟೀಂ ಇಂಡಿಯಾದ ಮಾಜಿ ವಿದೇಶಿ ಕೋಚ್‌ಗಳಾದ ಜಾನ್‌ ವ್ರೈಟ್‌ ಮತ್ತು ಗ್ರೇಗ್‌ ಚಾಪೆಲ್‌ ಅವರ ತರಬೇತಿ ಶೈಲಿಯಲ್ಲಿದ್ದ ವಿಭಿನ್ನತೆ ಕುರಿತಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌ ಮಾತನಾಡಿದ್ದಾರೆ.
ಮೊಹಮ್ಮದ್ ಕೈಫ್-ಗ್ರೇಗ್ ಚಾಪೆಲ್
ಮೊಹಮ್ಮದ್ ಕೈಫ್-ಗ್ರೇಗ್ ಚಾಪೆಲ್

ನವದೆಹಲಿ: ಟೀಂ ಇಂಡಿಯಾದ ಮಾಜಿ ವಿದೇಶಿ ಕೋಚ್‌ಗಳಾದ ಜಾನ್‌ ವ್ರೈಟ್‌ ಮತ್ತು ಗ್ರೇಗ್‌ ಚಾಪೆಲ್‌ ಅವರ ತರಬೇತಿ ಶೈಲಿಯಲ್ಲಿದ್ದ ವಿಭಿನ್ನತೆ ಕುರಿತಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌ ಮಾತನಾಡಿದ್ದಾರೆ.

ಈ ಇಬ್ಬರೂ ಕೋಚ್‌ಗಳ ಅಡಿಯಲ್ಲಿ ಆಡಿದ ಅನುಭವ ಹೊಂದಿರುವ ಕೈಫ್, ಚಾಪೆಲ್‌ ಟೀಂ ಇಂಡಿಯಾದ ಪ್ರಧಾನ ಕೋಚ್‌ ಆಗುವ ಬದಲು ಕೇವಲ ಬ್ಯಾಟಿಂಗ್‌ ಕೋಚ್‌ ಆಗಿದ್ದರೆ ಒಳಿತಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಟೀಂ ಇಂಡಿಯಾ ಸಂಸ್ಕೃತಿ ಅರ್ಥ ಮಾಡಿಕೊಳ್ಳುವಲ್ಲಿ ಚಾಪೆಲ್‌ ಸಂಪೂರ್ಣ ವಿಫಲರಾಗಿದ್ದರು ಎಂದಿದ್ದಾರೆ.

2000ದ ಇಸವಿಯಿಂದ 2005ರವರೆಗೆ ಜಾನ್‌ ರೈಟ್‌ ಭಾರತ ತಂಡದ ಮುಖ್ಯ ಕೋಚ್‌ ಆಗಿದ್ದರು. ಈ ಸಂದರ್ಭದಲ್ಲಿ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಜಂಟಿ ಚಾಂಪಿಯನ್ಸ್‌ ಪಟ್ಟ ಪಡೆದು, ನಂತರ 2003ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್ಸ್‌ಅಪ್‌ ಸ್ಥಾನ ಪಡೆದಿತ್ತು. ಅಷ್ಟೇ ಅಲ್ಲದೆ 2002ರಲ್ಲಿ ಇಂಗ್ಲೆಂಡ್‌ನಲ್ಲಿ ನ್ಯಾಟ್‌ವೆಸ್ಟ್‌ ಸರಣಿಯಲ್ಲೂ ಭಾರತ ಜಯ ದಾಖಲಿಸಿತ್ತು.

ಜಾನ್‌ ರೈಟ್‌ ಟೀಮ್‌ ಇಂಡಿಯಾ ತೊರೆದ ಬಳಿಕ 2005ರಿಂದ 2007ರವರೆಗೆ ಗ್ರೇಗ್‌ ಚಾಪೆಲ್ ಕೋಚ್‌ ಕೆಲಸ ನಿರ್ವಹಿಸಿದ್ದರು. ಚಾಪೆಲ್‌ ತರಬೇತಿ ಆರಂಭಿಸಿದ ಬಳಿಕ ಅಂದಿನ ನಾಯಕ ಸೌರವ್‌ ಗಂಗೂಲಿ ಜೊತೆಗಿನ ತಿಕ್ಕಾಟ ಭಾರಿ ವಿವಾದವನ್ನೇ ಸೃಷ್ಟಿಸಿತ್ತು. ಇದರಿಂದ ಸೌರವ್‌ ಬರೋಬ್ಬರು 1 ವರ್ಷ ಕಾಲ ತಂಡದಿಂದ ಹೊರಗುಳಿಯುವಂತಾಗಿತ್ತು. ನಂತರ 2007ರ ವಿಶ್ವಕಪ್‌ನಲ್ಲಿ ಭಾರತ ಲೀಗ್‌ ಹಂತದಲ್ಲೇ ಹೊರಬಿದ್ದ ಪರಿಣಾಮ ಚಾಪೆಲ್‌ ತಲೆದಂಡವೂ ಆಯಿತು.

"ಚಾಪೆಲ್‌ ಒಳ್ಳೆಯ ಬ್ಯಾಟಿಂಗ್‌ ಕೋಚ್‌ ಆಗಬಹುದಿತ್ತು. ಆದರೆ ಅವರ ಹೆಸರನ್ನು ಅವೇ ಹಾಳು ಮಾಡಿಕೊಂಡರು. ತಂಡವನ್ನು ಮುನ್ನಡೆಸುವುದು ಹೇಗೆ ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಟೀಮ್‌ ಇಂಡಿಯಾದ ಸಂಸ್ಕೃತಿ ಅವರಿಗೆ ಅರ್ಥವಾಗಿರಲಿಲ್ಲ. ವ್ಯಕ್ತಿಗಳನ್ನು ನಿರ್ವಹಿಸುವ ಕಲೆ ಅವರಲ್ಲಿ ಇರಲಿಲ್ಲ. ಹೀಗಾಗಿ ಉತ್ತಮ ಕೋಚ್‌ ಆಗುವ ಯಾವುದೇ ಲಕ್ಷಣ ಅವರಲ್ಲಿ ಇರಲಿಲ್ಲ. ಆದರೆ ಜಾನ್‌ ರೈಟ್‌ಗೆ ಅಪಾರ ಗೌರವ ಸಿಕ್ಕಿತ್ತು. ಏಕೆಂದರೆ ಆಟಗಾರರ ಜೊತೆಗೆ ಅವರು ಉತ್ತಮ ರೀತಿಯಲ್ಲಿ ವ್ಯವಹರಿಸುತ್ತಿದ್ದರು. ತಂಡವನ್ನು ಮುನ್ನಡೆಸಲು ಗಂಗೂಲಿಗೆ ಸಂಪೂರ್ಣ ಅಧಿಕಾರ ನೀಡಿ ಯಶಸ್ಸು ಕಂಡಿದ್ದರು" ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ಕೈಫ್‌ ಹೇಳಿದ್ದಾರೆ.

ಇದಕ್ಕೂ ಮೊದಲು ಗ್ರೇಗ್‌ ಚಾಪೆಲ್, ಭಾರತ ತಂಡದ ಕೋಚ್‌ ಆಗಿದ್ದ ವೇಳೆ ಎಂಎಸ್‌ ಧೋನಿಯನ್ನು ತಂಡದ ಫೀನಿಷರ್‌ ಆಗುವಂತೆ ಮಾಡಿದ್ದು ತಾವೆ ಹೇಳಿಕೊಂಡಿದ್ದರು. ಇದಕ್ಕೆ ಟೀಮ್‌ ಇಂಡಿಯಾದ ಮಾಜಿ ಆಟಗಾರರು ಟೀಕಾಸ್ತ್ರ ಪ್ರಯೋಗ ಮಾಡಿ ಚಾಪೆಲ್‌ಗೆ ಮಂಗಳಾರತಿ ಮಾಡಿದ್ದರು. ಅದಲ್ಲೂ ಚಾಪೆಲ್‌ ಕೋಚ್‌ ಆಗಿದ್ದ ಅವಧಿ ಭಾರತೀಕ ಕ್ರಿಕೆಟ್‌ ಇತಿಹಾಸದ ಕರಾಳ ದಿನಗಳು ಎಂದು ಹರ್ಭಜನ್‌ ಸಿಂಗ್‌ ಕರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com