ಬ್ರಿಯಾನ್ ಲಾರಾ ನನ್ನೆದುರು ಬ್ಯಾಟ್‌ ಮಾಡಲು ತಿಣುಕಾಡುತ್ತಿದ್ದರು: ಮೊಹಮ್ಮದ್‌ ಹಫೀಝ್

ವೆಸ್ಟ್‌ ಇಂಡೀಸ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಲಾರಾ ತಮ್ಮೆದುರು ಬ್ಯಾಟ್‌ ಮಾಡಲು ತಿಣುಕಾಡುತ್ತಿದ್ದರು ಎಂದು ಪಾಕಿಸ್ತಾನದ ಅನುಭವಿ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಝ್‌ ಹೇಳಿಕೊಂಡಿದ್ದಾರೆ.
ಬ್ರಿಯಾನ್ ಲಾರಾ
ಬ್ರಿಯಾನ್ ಲಾರಾ

ಲಾಹೋರ್‌: ವೆಸ್ಟ್‌ ಇಂಡೀಸ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಲಾರಾ ತಮ್ಮೆದುರು ಬ್ಯಾಟ್‌ ಮಾಡಲು ತಿಣುಕಾಡುತ್ತಿದ್ದರು ಎಂದು ಪಾಕಿಸ್ತಾನದ ಅನುಭವಿ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಝ್‌ ಹೇಳಿಕೊಂಡಿದ್ದಾರೆ.

ತಮ್ಮ ಆಫ್‌ ಸ್ಪಿನ್‌ ಬೌಲಿಂಗ್‌ ಮೂಲಕ ಪಾಕಿಸ್ತಾನ ಪರ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ 139 ವಿಕೆಟ್‌ ಮತ್ತು ಟೆಸ್ಟ್‌ ಕ್ರಿಕೆಟ್‌ ನಲ್ಲೂ 53 ವಿಕೆಟ್‌ಗಳನ್ನು ಪಡೆದಿರುವ 39 ವರ್ಷದ ಬ್ಯಾಟಿಂಗ್‌ ಆಲ್‌ರೌಂಡರ್ ಹಫೀಜ್‌, ತಮ್ಮ ವೃತ್ತಿ ಬದುಕಿನಲ್ಲಿ ಹಲವು ಬಾರಿ ಶಂಕಾಸ್ಪದ ಬೌಲಿಂಗ್‌ ಶೈಲಿಯ ಆರೋಪವನ್ನೂ ಎದುರಿಸಿದ್ದಾರೆ.

"ಎಡಗೈ ಬ್ಯಾಟ್ಸ್‌ಮನ್‌ಗಳು ನನ್ನೆದುರು ಬ್ಯಾಟ್‌ ಮಾಡಲು ಸದಾ ಕಷ್ಟಪಡುತ್ತಾರೆ. ಬಲಗೈ ಬ್ಯಾಟ್ಸ್‌ಮನ್‌ಗಳ ಎದುರು ಕೂಡ ಉತ್ತಮವಾಗೇ ಬೌಲಿಂಗ್‌ ಮಾಡಿದ್ದೇನೆ. ಆದ್ದರಿಂದಲೇ ಎಡ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎದುರು ನನ್ನ ಎಕಾನಮಿ ರೇಟ್‌ ಉತ್ತಮವಾಗಿದೆ. ಇನ್ನು ಬ್ರಿಯಾನ್‌ ಲಾರಾ ಸೇರಿದಂತೆ ಹಲವು ದಿಗ್ಗಜರ ವಿಕೆಟ್‌ಗಳನ್ನು ನಾನು ಪಡೆದಿದ್ದೇನೆ," ಎಂದು ಜಿಯೋ ನ್ಯೂಸ್‌ ಚಾನಲ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಹಫೀಝ್‌ ಹೇಳಿಕೊಂಡಿದ್ದಾರೆ.

ಲಾರಾ ಒಮ್ಮೆ ನನ್ನ ಬೌಲಿಂಗ್‌ ಎದುರಿಸಲು ಕಷ್ಟ ಪಡುತ್ತಿರುವುದಾಗಿ ಹೇಳಿಕೊಂಡಿದ್ದರು. ಅವರು ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌. ಸ್ಪಿನ್ನರ್‌ಗಳ ಎದುರು ಅದ್ಭುತವಾಗಿ ಬ್ಯಾಟ್‌ ಮಾಡಿದ್ದಾರೆ. ಆದರೂ ನನ್ನೆದುರು ಕಷ್ಟ ಪಟ್ಟಿದ್ದಾಗಿ ಖುದ್ದಾಗಿ ಹೇಳಿದ್ದರು ಎಂದು ಹಫೀಝ್ ಹೇಳಿದ್ದಾರೆ.

ಇನ್ನು ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಾದ ಮುತ್ತಯ್ಯ ಮುರಳೀಧರನ್‌ ಮತ್ತು ಶೇನ್‌ ವಾರ್ನ್‌ ವಿಂಡೀಸ್‌ ದಿಗ್ಗಜನ ಎದುರು ಬೌಲಿಂಗ್‌ ಮಾಡುವುದು ಬಹಳ ಕಷ್ಟ ಎಂದು ಒಪ್ಪಿಕೊಂಡಿರುವಾಗ ಹಫೀಝ್‌ ಮಾತ್ರ ಲಾರಾ ಎದುರು ಬೌಲಿಂಗ್‌ ಮಾಡಿ ಹೆಚ್ಚು ಯಶಸ್ಸು ಗಳಿಸಿರುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದಾರೆ.

ನನ್ನ ವೃತ್ತಿ ಬದುಕಿನಲ್ಲಿ ಬೌಲಿಂಗ್‌ ಸಾಕಷ್ಟು ಬೆಂಬಲ ನೀಡಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೇ ಇದ್ದರೂ, ಬೌಲಿಂಗ್‌ನಲ್ಲಿ ಪ್ರದರ್ಶನ ಮಟ್ಟವನ್ನು ಸರಿದೂಗಿಸಿಕೊಳ್ಳುತ್ತಿದ್ದೆ. ಕ್ರಿಕೆಟ್‌ ಆಡುವವರೆಗೂ ಎಡಗೈ ಬ್ಯಾಟ್ಸ್‌ಮನ್‌ಗಳ ಎದುರು ಸಿಕ್ಕಿರುವ ಯಶಸ್ಸನ್ನು ಮುಂದುವರಿಸಲು ಬಯಸುತ್ತೇನೆ. ಇದು ದೇವರು ಕೊಟ್ಟಿರುವ ವರ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com