ಯುಜುವೇಂದ್ರ ಚಹಾಲ್ ವಿಡಿಯೋ ನೋಡಿ ಕಾಲೆಳೆದ ಡೇಲ್ ಸ್ಟೇನ್, ವಿಡಿಯೋ!

ಟೀಂ ಇಂಡಿಯಾದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಹಾಗೂ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೇನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಸ್ಯಭರಿತ ವಿನೋದವನ್ನು ಹಂಚಿಕೊಂಡಿದ್ದಾರೆ.
ಡೇಲ್ ಸ್ಟೇನ್-ಚಹಾಲ್
ಡೇಲ್ ಸ್ಟೇನ್-ಚಹಾಲ್

ನವದೆಹಲಿ: ಟೀಂ ಇಂಡಿಯಾದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಹಾಗೂ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೇನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಸ್ಯಭರಿತ ವಿನೋದವನ್ನು ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ನಿಮಿತ್ತ ಯುಜ್ವೇಂದ್ರ ಚಹಲ್‌ ಗುರುವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದರು. ಬಳಿಕ ಬ್ಯಾಟಿಂಗ್‌ ಅಭ್ಯಾಸದ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಆರ್‌ಸಿಬಿ ವೇಗಿ ಡೇಲ್‌ ಸ್ಟೇನ್‌‌ ಹಾಸ್ಯ ಭರಿತ ಕಾಮೆಂಟ್‌ ಹಾಕಿದರು.

ಚಹಲ್‌ ತಾವು ಪೋಸ್ಟ್‌ ಮಾಡಿದ್ದ ವಿಡಿಯೋಗೆ "ಈ ಬಾರಿ ರನ್‌ಗಳನ್ನು ಸೇರಿಸುವುದು" ಎಂಬ ಶೀರ್ಷಿಕೆಯನ್ನು ನೀಡಿದ್ದರು. ಕೆಲ ಅಭಿಮಾನಿಗಳು ಮುಂದಿನ ಪಂದ್ಯಗಳಲ್ಲಿ ಭಾರತ ತಂಡದ ಪರ ಓಪನಿಂಗ್‌ ಬ್ಯಾಟಿಂಗ್‌ ಮಾಡುತ್ತೀರಾ? ಎಂದು 29ರ ಪ್ರಾಯದ ಲೆಗ್‌ ಸ್ಪಿನ್ನರ್‌ಗೆ ಕಿಚಾಯಿಸಿದ್ದರು. ಅದರಂತೆ ದಕ್ಷಿಣ ಆಫ್ರಿಕಾ ವೇಗಿ ಸ್ಟೇನ್‌, "ನೀವು ಎದುರಿಸುತ್ತಿರುವುದು ಸ್ಪಿನ್‌ ಅಥವಾ ಪಾಸ್ಟ್ ಬೌಲಿಂಗ್‌?" ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಹಲ್‌, "ಇದು ಗುಟ್ಟು ಸರ್‌," ಎಂದರು.

ಸದ್ಯ ಯುಜ್ವೇಂದ್ರ ಚಹಲ್‌ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು,ಭಾರತದ ಪರ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ 2020ರ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಚಹಲ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಬೌಲಿಂಗ್‌ ಪ್ರದರ್ಶನ ತೋರಿದ್ದರು.

ಹದಿಮೂರನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 15 ಪಂದ್ಯಗಳಾಡಿದ್ದ ಚಹಲ್, 7.08 ಎಕಾನಮಿ ಹಾಗೂ 19.29ರ ಸರಾಸರಿಯಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಅದೇ ಲಯವನ್ನು ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದಾರೆ.

ಮತ್ತೊಂದೆಡೆ ಯುಜ್ವೇಂದ್ರ ಚಹಲ್‌ ಜತೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕೆ ಇಳಿದಿದ್ದ ಡೇಲ್‌ ಸ್ಟೇನ್‌, ಕಳಪೆ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಹದಿಮೂರನೇ ಆವೃತ್ತಿಯ ಐಪಿಎಲ್‌ನಲ್ಲಿ ಮೂರು ಪಂದ್ಯಗಳಾಡಿದ್ದ ಅವರು 11.40 ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ನಿಡಿದ್ದರು ಹಾಗೂ ಕೇವಲ ಒಂದೇ ಒಂದು ವಿಕೆಟ್‌ ಪಡೆದಿದ್ದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲನೇ ಏಕದಿನ ಪಂದ್ಯ ನ. 27 ರಂದು ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಜರುಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಮುಗಿದ ಬಳಿಕ, ಉಭಯ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com