ಕಪಿಲ್ ದೇವ್ ಆಸ್ಪತ್ರೆಯಿಂದ ಡಿಸ್ಚಾರ್ಜ್

 ಎದೆನೋವಿನಿಂದ  ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾಗಿದ್ದ ದೇಶದ ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಪಿಲ್ ದೇವ್
ಕಪಿಲ್ ದೇವ್

ನವದೆಹಲಿ: ಎದೆನೋವಿನಿಂದ  ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾಗಿದ್ದ ದೇಶದ ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಗುರುವಾರ ಎದೆನೋವು ಕಾಣಿಸಿಕೊಂಡಿದ್ದರಿಂದ 61 ವರ್ಷದ ಕಪಿಲ್ ದೇವ್ ಪೋರ್ಟಿಸ್ ಎಸ್ಕಾರ್ಟ್ಸ್ ಹೃದ್ರೋಗ ಸಂಸ್ಥೆಗೆ ದಾಖಲಾಗಿದ್ದರು. ಸದ್ಯ ಅವರು ಆರೋಗ್ಯದಿಂದ ಇದ್ದು, ಇಂದು ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ. 

ಕಪಿಲ್ ದೇವ್ ಆರೋಗ್ಯದಿಂದ ಇದ್ದು, ಶೀಘ್ರದಲ್ಲಿಯೇ ತನ್ನ ನಿಯಮಿತ ದೈನಂದಿನ ಚಟುವಟಿಕೆಯನ್ನು ಪುನರಾರಂಭಿಸಬಹುದು. ಡಾ.ಅತುಲ್ ಮಾಥುರ್ ಅವರೊಂದಿಗೆ ನಿಯಮಿತವಾಗಿ ಕಪಿಲ್ ದೇವ್ ಆರೋಗ್ಯ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

ಲೆಜೆಂಡರಿ ಆಲ್ ರೌಂಡರ್ ಕಪಿಲ್ ದೇವ್ ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಾರ್ಥಿಸಿದ್ದರು.  

ದೇಶದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿರುವ ಕಪಿಲ್ ದೇವ್ 131 ಟೆಸ್ಟ್ ಹಾಗೂ 225 ಏಕದಿನ ಪಂದ್ಯಗಳನ್ನಾಡಿದ್ದು, ಟೆಸ್ಟ್ ನಲ್ಲಿ 434 ವಿಕೆಟ್ ಪಡೆದಿದ್ದು, 5 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 1999 ಮತ್ತು 2000 ನಡುವಣ ರಾಷ್ಟ್ರೀಯ ತರಬೇತುದಾರರಾಗಿ ಸೇವೆ ಸಲ್ಲಿಸಿರುವ ಕಪಿಲ್ ದೇವ್, 2010ರಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com