ಐಪಿಎಲ್ ನಲ್ಲಿ ಕೊರೋನಾ ಸೋಂಕು ಹತ್ತಿಕ್ಕಲು ಸ್ಮಾರ್ಟ್ ರಿಂಗ್ ಮೊರೆ ಹೋದ ಮುಂಬೈ ಇಂಡಿಯನ್ಸ್

ಮಾರಕ ಕೊರೋನಾ ವೈರಸ್ ಸೋಂಕು ಭೀತಿ ಹಾಲಿ ಐಪಿಎಲ್ ಟೂರ್ನಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಇದೇ ಹೊತ್ತಿನಲ್ಲಿ ಸೋಂಕು ಪ್ರಸರಣವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ತಮ್ಮ ತಂಡದ ಪ್ರತೀ ಆಟಗಾರರು ಮತ್ತು ಸಿಬ್ಬಂದಿಗೆ ಎನ್ ಬಿಎ ಶೈಲಿಯ  ಸ್ಮಾರ್ಟ್ ರಿಂಗ್ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕು ಭೀತಿ ಹಾಲಿ ಐಪಿಎಲ್ ಟೂರ್ನಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಇದೇ ಹೊತ್ತಿನಲ್ಲಿ ಸೋಂಕು ಪ್ರಸರಣವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ತಮ್ಮ ತಂಡದ ಪ್ರತೀ ಆಟಗಾರರು ಮತ್ತು ಸಿಬ್ಬಂದಿಗೆ ಎನ್ ಬಿಎ ಶೈಲಿಯ  ಸ್ಮಾರ್ಟ್ ರಿಂಗ್ ನೀಡಿದೆ.

ಹೌದು.. ಅಬುದಾಬಿಯಲ್ಲಿ ಆಯೋಜನೆಯಾಗಿರುವ 13ನೇ ಐಪಿಎಲ್ ಟೂರ್ನಿಯಲ್ಲಿ ಆಟಗಾರರು ಸಿಬ್ಬಂದಿಗಳು ಕೊರೋನಾ ಸೋಂಕಿಗೆ ತುತ್ತಾಗದಂತೆ ತಡೆಯಲು ಬಿಸಿಸಿಐ ಹರಸಾಹಪಡುತ್ತಿದ್ದು, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.ಈಗಾಗಲೇ ಎಲ್ಲ ಸಿಬ್ಬಂದಿಗಳಿಗೆ ಮತ್ತು ಆಟಗಾರರಿಗೆ  ಬ್ಲೂಟೂತ್ ಆಧಾರಿತ ಡಿವೈಸ್ ನೀಡಲಾಗಿದ್ದು, ಈ ಡಿವೈಸ್ ನಲ್ಲಿ ಹೆಲ್ತ್ ಅ್ಯಪ್ ಅನ್ನು ಇನ್ ಸ್ಟಾಲ್ ಮಾಡಲಾಗಿದೆ. ಅದರ ಮೂಲಕ ಪ್ರತೀಯೊಬ್ಬರ ಫಿಟ್ನೆಸ್ ಮತ್ತು ಆರೋಗ್ಯ ಪರಿಸ್ಥಿತಿಯನ್ನು ಟ್ರಾಕ್ ಮಾಡಲಾಗುತ್ತಿದೆ. ಇದರ ಜೊತೆಗೆ ಐಪಿಎಲ್ ತಂಡಗಳ ಫ್ರಾಂಚೈಸಿಗಳೂ ಕೂಡ ತಮ್ಮ ತಮ್ಮ ತಂಡದ  ಸಿಬ್ಬಂದಿಗಳು ಮತ್ತು ಆಟಗಾರರ ಸುರಕ್ಷತೆಗೆ ಸಾಕಷ್ಟು ಒತ್ತು ನೀಡುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಮುಂಬೈ ಇಂಡಿಯನ್ಸ್ ತಂಡ ತಮ್ಮ ತಂಡದ ಸಿಬ್ಬಂದಿ ಮತ್ತು ಆಟಗಾರರಿಗೆ ಸ್ಮಾರ್ಟ್ ರಿಂಗ್ ನೀಡಿದ್ದು, ಈ ಸ್ಮಾರ್ಟ್ ರಿಂಗ್ ಅದನ್ನು ಧರಿಸಿದ ಆಟಗಾರ ಮತ್ತು ಸಿಬ್ಬಂದಿಯ ಆರೋಗ್ಯ ಪರಿಸ್ಥಿತಿಯನ್ನು  ದಾಖಲಿಸಿಕೊಂಡು ಮಾಹಿತಿ ರವಾನಿಸುತ್ತದೆ. 

ಈ ವಿಶಿಷ್ಠ ಸ್ಮಾರ್ಟ್ ರಿಂಗ್ ಸಿಬ್ಬಂದಿ ಮತ್ತು ಆಟಗಾರರ ದೇಹದ ಅಂಗಾಂಗಗಳ ಆರೋಗ್ಯ ಮತ್ತು ಚಲನವಲನಗಳ ಮೇಲೆ ನಿಗಾ ಇರಿಸುತ್ತದೆ. ಪ್ರಮುಖವಾಗಿ ಹೃದಯ ಬಡಿತ, ಹೃದಯ ಬಡಿತದಲ್ಲಿನ ವ್ಯತ್ಯಾಸ, ಉಸಿರಾಟದ ಪ್ರಮಾಣ ಮತ್ತು ದೇಹದ ಉಷ್ಣತೆಯ ಮೇಲೆ ಈ ಸ್ಮಾರ್ಟ್ ರಿಂಗ್ ನಿಗಾ ಇರಿಸುತ್ತದೆ.  ಅಲ್ಲದೆ ಈ ರಿಂಗ್ ವ್ಯಕ್ತಿಯ ನಾಡಿಮಿಡಿತ, ಚಲನೆ ಮತ್ತು ದೈಹಿಕ ತಾಪಮಾನದ ಸಂಪೂರ್ಣ ಚಿತ್ರಣವನ್ನು ದಾಖಲಿಸಿಕೊಂಡು ಮೇಲ್ವಿಚಾರಣೆ ಮಾಡುತ್ತದೆ. ಇದರಿಂದ ವ್ಯಕ್ತಿ ದೈನಂದಿನ ಆರೋಗ್ಯದ ವಿಶ್ಲೇಷಣೆಗೆ ನೆರವಾಗುತ್ತದೆ. ಒಂದು ವೇಳೆ ಈ ಯಾವುದೇ ಅಂಗದಲ್ಲಿನ ಕಾರ್ಯ ನಿರ್ವಹಣೆಯಲ್ಲಿ ಏರುಪೇರು  ಉಂಟಾದರೆ ಕೂಡಲೇ ಅದನ್ನು ದಾಖಲಿಸಿಕೊಂಡು ಸಿಗ್ನಲ್ ನೀಡುತ್ತದೆ. ಇದರಿಂದ ಪರಿಸ್ಥಿತಿ ಕೈಮೀರುವ ಮೊದಲೇ ಜಾಗರೂಕರಾಗಬಹುದು ಎಂದು ತಂಡದ ಮೂಲಗಳು ಮಾಹಿತಿ ನೀಡಿವೆ. 
 
ಐಪಿಎಲ್ ಗೂ ಮೊದಲು ಇದನ್ನು ಎನ್ ಬಿಎ (ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್) ಬಳಕೆ ಮಾಡಿತ್ತು. ಅಂತಹುದೇ ರಿಂಗ್ ಅನ್ನು ಇದೀಗ ಮುಂಬೈ ಇಂಡಿಯನ್ಸ್ ತಂಡ ಬಳಕೆ ಮಾಡುತ್ತಿದೆ. ಇಡೀ ಐಪಿಎಲ್ ಟೂರ್ನಿಯಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಮುಂದಿದ್ದು, ಸ್ಮಾರ್ಟ್  ರಿಂಗ್ ಬಳಕೆ ಮೂಲಕ ಕ್ಲಬ್ ಸ್ಪೋರ್ಟ್ಸ್ ಸಂಸ್ಕೃತಿಯಲ್ಲಿ ಇದೀಗ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.

ಇನ್ನು ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆ ಕೈಗೊಂಡಿರುವ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರು, ಬಿಸಿಸಿಐ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಿವೆ. ಪ್ರಮುಖವಾಗಿ ವಿದೇಶಿ ಸಿಬ್ಬಂದಿ ಮತ್ತು ಆಟಗಾರರನ್ನು 14 ದಿನಗಳ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತಿದ್ದು, ಈ 14 ದಿನಗಳ ಕಾಲ ಅವರನ್ನು ನಿರಂತರವಾಗಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ತಂಡದ ಅಧಿಕಾರಿಯೊಬ್ಬರು, ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಪಿಪಿಯಿ ಕಿಟ್ ಗಳು, ಮಾಸ್ಕ್ ಗಳು, ಫೇಸ್ ಶೀಲ್ಡ್ ಗಳು, 3 ಜೋಡಿ ಹೆಚ್ಚುವರಿ ಗ್ಲೌಸ್ ಗಳನ್ನು ನೀಡಲಾಗುತ್ತಿದೆ. ನಿಜಕ್ಕೂ ಸೋಂಕಿತ ವ್ಯಕ್ತಿಯನ್ನು ಗುರುತಿಸುವುದು ಕಷ್ಟಕರ. ಎದುರಿಗಿರುವ ವ್ಯಕ್ತಿ ಸೋಂಕಿಗೆ ತುತ್ತಾಗಿರಬಹುದೇ ಎಂದು ಶಂಕೆಯಿಂದ ನೋಡಲಾಗುತ್ತಿದೆ. ನಮಗೂ ಕೂಡ ಕುಟುಂಬವಿದ್ದು, ಅವರ ನಿರ್ವಹಣೆ ನಮ್ಮ ಮೇಲಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ನಾವು ಕಾರ್ಯ ನಿರ್ವಹಿಸಬೇಕಿದೆ. ಆದರೆ ತಂಡ ಆಡಳಿತ ಮಂಡಳಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಇತರೆ ತಂಡಗಳಿಗಿಂತ ನಮ್ಮ ತಂಡ ಸುರಕ್ಷಿತವಾಗಿದೆ ಎಂಬ ಭಾವನೆ ಮೂಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com