ಇಶಾನ್‌ ಕಿಶಾನ್‌ ದಣಿದಿದ್ದರು, ಹೀಗಾಗಿ ಸೂಪರ್‌ ಓವರ್‌ ನಲ್ಲಿ ಕಣಕ್ಕಿಳಿಸಲಿಲ್ಲ: ರೋಹಿತ್‌ ಶರ್ಮಾ

ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಟೂರ್ನಿಯ ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸೂಪರ್ ಓವರ್ ಕುರಿತ ವಿವಾದಕ್ಕೆ ತಂಡದ ನಾಯಕ ರೋಹಿತ್ ಶರ್ಮಾ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್
ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್

ನವದೆಹಲಿ:  ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಟೂರ್ನಿಯ ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸೂಪರ್ ಓವರ್ ಕುರಿತ ವಿವಾದಕ್ಕೆ ತಂಡದ ನಾಯಕ ರೋಹಿತ್ ಶರ್ಮಾ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ರಾಯಲ್‌ ಚಾಲೆಂಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯ ಕೊನೆಯ ಹಂತದ ಒಂದೊಂದು ಎಸೆತದಲ್ಲೂ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ಅಂತಿಮವಾಗಿ ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ಜಯ ದಾಖಲಿಸಿತು. ಆದರೆ, ನಿಯಮಿತ ಓವರ್‌ಗಳಲ್ಲಿ ಇಶಾನ್‌ ಕಿಶಾನ್‌ ಅತ್ಯದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ನಿಯಮಿತ ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ಗೆ ಕೊನೆಯ 4 ಎಸೆತಗಳಲ್ಲಿ 17 ರನ್‌ಗಳ ಅಗತ್ಯವಿತ್ತು. 

ಈ ವೇಳೆ ಇಶಾನ್‌ ಕಿಶಾನ್‌ ಸತತ ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಕೊನೆಯ ಎರಡು ಎಸೆತಗಳಲ್ಲಿ 5 ರನ್‌ಗಳಿಗೆ ತಂದಿಟ್ಟರು. ನಂತರ ಅವರು ವಿಕೆಟ್‌ ಒಪ್ಪಿಸಿದರು. ಕೊನೆಯ ಎಸೆತದಲ್ಲಿ ಕೀರನ್‌ ಪೊಲಾರ್ಡ್ ಬೌಂಡರಿ ಸಿಡಿಸುವ ಮೂಲಕ ಪಂದ್ಯ ಟೈ ಆಯಿತು. ಆ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಲು ಸೂಪರ್‌ ಓವರ್‌ ಮೊರೆ ಹೋಗಲಾಯಿತು. ಸೂಪರ್‌ ಓವರ್‌ನಲ್ಲಿ ಕೀರನ್‌ ಪೊಲಾರ್ಡ್ ಜತೆಗೆ ಇಶಾನ್‌ ಕಿಶಾನ್‌ ಕ್ರೀಸ್‌ಗೆ ಬರಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ನಾಯಕ ರೋಹಿತ್‌ ಶರ್ಮಾ ಹಾರ್ದಿಕ್‌ ಪಾಂಡ್ಯ ಅವರನ್ನು ಕಳುಹಿಸಿ ಅಚ್ಚರಿ ಮೂಡಿಸಿದರು. ನವದೀಪ್‌ ಸೈನಿ ಅದ್ಭುತವಾಗಿ ಬೌಲಿಂಗ್‌ ಮಾಡಿ ಕೇವಲ 7 ರನ್‌ ನೀಡಿದರು. ಪೊಲಾರ್ಡ್ ಔಟ್‌ ಆದ ಬಳಿಕ ಹಾರ್ದಿಕ್‌ ಪಾಂಡ್ಯ ದೊಡ್ಡ ಹೊಡೆತಗಳನ್ನು ಹೊಡೆಯುವಲ್ಲಿ ವಿಫಲರಾದರು.

ನಿಯಮಿತ ಓವರ್ ಆದ್ಭುತ ಬ್ಯಾಟಿಗ್ ಮಾಡಿದ್ದ ಇಶಾನ್‌ ಕಿಶಾನ್‌ ಅವರನ್ನು ಸೂಪರ್ ಓವರ್ ನಲ್ಲಿ ಏಕೆ ಕಣಕ್ಕಿಳಿಸಲಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಚರ್ಚೆಗೆ ಗ್ರಾಸವಾಗುತ್ತಿರುವ ಹೊತ್ತಿನಲ್ಲೇ ಈ ಬಗ್ಗೆ ತಂಡದ ನಾಯಕ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದು, ತಾವೇಕೆ ಇಶಾನ್ ಕಿಷನ್ ರನ್ನು ಸೂಪರ್ ಓವರ್ ನಲ್ಲಿ ಆಡಿಸಲಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.  

'ಇಶಾನ್‌ ಕಿಶಾನ್‌ ಪಂದ್ಯ ಟೈ ಆದ ಬಳಿಕ ದಣಿದಿದ್ದರು ಹಾಗೂ ಅವರು ಆರಾಮದಾಯಕವಾಗಿ ಕಾಣಿಸಲಿಲ್ಲ. ನಾವು ಅವರನ್ನೇ ಕಳುಹಿಸಬೇಕೆಂದು ಅಂದು ಕೊಂಡಿದ್ದೆವು. ಆದರೆ, ಅವರು ಫ್ರೆಶ್‌ ಆಗಿ ಕಾಣಿಸಿಲಿಲ್ಲ. ಆದರೆ, ದೊಡ್ಡ ಹೊಡೆತಗಳನ್ನು ಹೊಡೆಯುವಲ್ಲಿ ಹಾರ್ದಿಕ್‌ ಪಾಂಡ್ಯಗೆ ಎತ್ತಿದ ಕೈ... ಹಾಗಾಗಿ, ಅವರನ್ನು ಸೂಪರ್ ಓವರ್‌ನಲ್ಲಿ ಕಳುಹಿಸಿದೆವು. ನಾವು 7 ರನ್‌ಗಳನ್ನು ಗಳಿಸಿದ್ದರೂ, ನಾವು ಒಂದು ಅನಿರೀಕ್ಷಿತ ಬೌಂಡರಿ ನೀಡಿದ್ದರಿಂದ ಪಂದ್ಯ ಸೋಲಬೇಕಾಯಿತು. ನಿಯಮಿತ ಓವರ್‌ಗಳಲ್ಲಿ ನಾವು ಮಾಡಿದ್ದ ಕಮ್‌ಬ್ಯಾಕ್‌ ಅದ್ಭುತವಾಗಿತ್ತು," ಎಂದು ರೋಹಿತ್‌ ಶರ್ಮಾ ತಿಳಿಸಿದರು.

ಆರ್‌ಸಿಬಿ ನೀಡಿದ್ದ 202 ರನ್‌ಗಳನ್ನು ಗುರಿ ಹಿಂಬಾಲಿಸುತ್ತೇವೆ ಎಂಬುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ ರೋಹಿತ್‌ ಶರ್ಮಾ, ಕೀರನ್ ಪೊಲಾರ್ಡ್ ಹಾಗೂ ಇಶಾನ್‌ ಕಿಶಾನ್‌ ಗುರಿ ಸಮೀಪ ತಲುಪಿಸಿದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com