ಐಪಿಎಲ್ 2021: ಮುಂಬೈನಲ್ಲಿ ಪಂದ್ಯ ಆಯೋಜನೆಗೆ ಅನುಮತಿ ಕೊಡಲಾಗಿದೆ, ಆಟಗಾರರಿಗೆ ಲಸಿಕೆ ಕುರಿತು 'ಕೇಂದ್ರ' ನಿರ್ಧಾರ- 'ಮಹಾ' ಸಚಿವ

ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿರುವ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪಂದ್ಯ ಆಯೋಜನೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

Published: 05th April 2021 02:03 PM  |   Last Updated: 05th April 2021 02:22 PM   |  A+A-


IPL 2021

ಐಪಿಎಲ್ 2021

Posted By : Srinivasamurthy VN
Source : ANI

ಮುಂಬೈ: ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿರುವ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪಂದ್ಯ ಆಯೋಜನೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ಸಾಂಕ್ರಾಮಿಕ ತನ್ನ ಅಟ್ಟಹಾಸ ಮುಂದುವರೆಸಿದ್ದು, ದಾಖಲೆ ಪ್ರಮಾಣದಲ್ಲಿ ದೈನಂದಿನ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಮುಂಬೈನಲ್ಲಿ ಐಪಿಎಲ್ ಪಂದ್ಯ ಆಯೋಜನೆ ಕುರಿತು ಪ್ರಶ್ನೆಗಳು ಎದ್ದಿತ್ತು. ಇದೇ ವಿಚಾರವಾಗಿ ಈ ಹಿಂದೆ ಸ್ಪಷ್ಟನೆ ನೀಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮುಂಬೈನಲ್ಲಿ ಪಂದ್ಯ ಆಯೋಜನೆಗೆ ಪಟ್ಟು ಹಿಡಿದಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಪಂದ್ಯ ಆಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, 'ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳು ಮುಂಬೈನಲ್ಲಿ ಯೋಜಿಸಿದಂತೆ ಮುಂದುವರಿಯಲಿವೆ ಮತ್ತು ಯಾವುದೇ ಅಡೆತಡೆಗಳು ಇರುವುದಿಲ್ಲ.  ನಿರ್ಬಂಧಗಳೊಂದಿಗೆ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ. ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶವಿರುವುದಿಲ್ಲ. ಐಪಿಎಲ್‌ನಲ್ಲಿ ಯಾರು ಭಾಗವಹಿಸುತ್ತಾರೋ ಅವರು ಪ್ರತ್ಯೇಕವಾಗಿ ಒಂದೇ ಸ್ಥಳದಲ್ಲಿ ಇರಬೇಕಾಗುತ್ತದೆ. ಜನದಟ್ಟಣೆ ಇರಬಾರದು. ಈ ಬಗ್ಗೆ ಬಿಸಿಸಿಐನಿಂದ ಲಿಖಿತ ಒಪ್ಪಿಗೆ ಪಡೆದ ಬಳಿಕ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಆಟಗಾರರಿಗೆ ಲಸಿಕೆ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು
ಇದೇ ವೇಳೆ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಲಸಿಕೆ ನೀಡುವ ವಿಚಾರದ ಕುರಿತು ಮಾತನಾಡಿದ ಸಚಿವರು, ಆಟಗಾರರಿಗೆ ಲಸಿಕೆ ನೀಡುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಬಿಸಿಸಿಐ ಕೂಡ ಈ ಬಗ್ಗೆ ಒತ್ತಾಯಿಸುತ್ತಿದೆ. ಆದರೆ ಈ ನಿರ್ಧಾರ ನಮ್ಮ ಕೈಯಲ್ಲಿ ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಬೇಕು. ಮಹಾರಾಷ್ಟ್ರದಲ್ಲಿ ಆಟಗಾರರು ವೈರಸ್ ಗೆ ತುತ್ತಾಗುವ ಅಪಾಯವಿದೆ ಎಂದು ನಮಗೆ ತಿಳಿದಿದೆ. ಲಸಿಕೆ ನೀಡಿಕೆಗೆ ವಯೋಮಿತಿಯನ್ನು ಕಡಿಮೆ ಮಾಡಲು ನಾವು ಬಯಸುತ್ತೇವೆ. ನಾವು ಲಸಿಕೆ ಹಾಕಬಹುದು, ಆದರೆ ಕೇಂದ್ರ ಸರ್ಕಾರ ಅನುಮತಿ ನೀಡದ ಹೊರತು ನಾವು ಹಾಗೆ ಮಾಡಲು ಸಾಧ್ಯವಿಲ್ಲ. ಪ್ರಸ್ತುತ 45 ವರ್ಷದ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲು ನಮಗೆ ಅನುಮತಿ ಇದೆ ಎಂದು ಅವರು ಹೇಳಿದರು.

ವೇಳಾಪಟ್ಟಿಯಂತೆಯೇ ಐಪಿಎಲ್ ನಡೆಯುತ್ತದೆ: ಗಂಗೂಲಿ
ಇನ್ನು ನಿಗಧಿತ ವೇಳಾಪಟ್ಟಿಯಂತೆಯೇ ಐಪಿಎಲ್ ಟೂರ್ನಿ ನಡೆಯಲಿದ ಎಂದು ಶನಿವಾರ ಬಿಸಿಸಿಐ ಅದ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದರು. ಐಪಿಎಲ್ ಪಂದ್ಯಗಳು ಮುಂಬೈ ನಡೆಯಲಿವೆ. ಒಮ್ಮೆ ನೀವು ಬಯೋ ಬಬಲ್‌ಗೆ ಪ್ರವೇಶಿಸಿಬಿಟ್ಟರೆ ಮತ್ತೆ ಏನೂ ಆಗಲಾರದು. ಕಳೆದ ಸೀಸನ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೂ ಇಂಥದ್ದೇ ಸಂದರ್ಭಗಳು ಎದುರಾಗಿದ್ದವು. ಆದರೆ ಒಮ್ಮೆ ಟೂರ್ನಿ ಆರಂಭಗೊಂಡ ಬಳಿಕ ಎಲ್ಲವೂ ಚೆನ್ನಾಗಿ ನಡೆಯಲಾರಂಭಿಸಿತು,' ಎಂದು ಗಂಗೂಲಿ ಹೇಳಿದ್ದರು.

ಏಪ್ರಿಲ್ 10 ರಿಂದ 25 ರವರೆಗೆ ವಾಂಖೆಡೆ ಸ್ಟೇಡಿಯಂನಲ್ಲಿ 10 ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಿದೆ. ಮುಂಬೈ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯ ಏಪ್ರಿಲ್ 10 ರಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.

ದೆಹಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಮತ್ತು ರಾಜಸ್ಥಾನ್ ರಾಯಲ್ಸ್ ಎಂಬ ನಾಲ್ಕು ಫ್ರಾಂಚೈಸಿಗಳು ಮುಂಬೈನಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿವೆ. ಆಟಗಾರರ ವ್ಯಾಕ್ಸಿನೇಷನ್ಗಾಗಿ ಮಂಡಳಿಯು ಆರೋಗ್ಯ ಸಚಿವಾಲಯದೊಂದಿಗೆ ಸಂಪರ್ಕ ಸಾಧಿಸಲಿದೆ. ಐಪಿಎಲ್ ಗಿಂತ ಮುಂಚಿತವಾಗಿಯೇ ಐಪಿಎಲ್ ಆಟಗಾರರಿಗೆ ವ್ಯಾಕ್ಸಿನೇಷನ್ ಮಾಡಿಸಲು ಬಿಸಿಸಿಐ ಸತತ ಪ್ರಯತ್ನ ಮಾಡುತ್ತಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ. 

"ಈ ಕೊರೋನವೈರಸ್ ಏರಿಕೆಯನ್ನು ನಿಭಾಯಿಸಲು, ಲಸಿಕೆ ಪಡೆಯುವುದು ಒಂದೇ ಪರಿಹಾರ ಎಂದು ನಾನು ಭಾವಿಸುತ್ತೇನೆ. ಆಟಗಾರರಿಗೆ ಲಸಿಕೆ ಹಾಕಬೇಕು ಎಂದು ಬಿಸಿಸಿಐ ಸಹ ಆ ಮಾರ್ಗಗಳ ಬಗ್ಗೆ ಯೋಚಿಸುತ್ತಿದೆ. ಕೊರೋನವೈರಸ್ ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ ಮತ್ತು ನೀವು ಗಡುವನ್ನೂ ನೀಡಲು ಸಾಧ್ಯವಿಲ್ಲ.  ಆದ್ದರಿಂದ, ಈಗ ಆಟಗಾರರಿಗೆ ಲಸಿಕೆ ನೀಡುವ ಕುರಿತು ಯೋಚಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಶುಕ್ಲಾ ಹೇಳಿದ್ದಾರೆ.
 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp