2028 ಲಾಸ್ ಏಂಜಲೀಸ್ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ: ಅಧಿಕೃತ ಮನವಿಗೆ ಐಸಿಸಿ ಸಿದ್ಧತೆ!

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಖಚಿತ ಪಡಿಸಿದೆ.
ಒಲಂಪಿಕ್ಸ್ ಗೆ ಕ್ರಿಕೆಟ್
ಒಲಂಪಿಕ್ಸ್ ಗೆ ಕ್ರಿಕೆಟ್

ದುಬೈ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಖಚಿತ ಪಡಿಸಿದೆ.

ಒಲಂಪಿಕ್ಸ್ ಗೆ ಕ್ರಿಕೆಟ್ ಸೇರಿಸುವ ಕುರಿತು ಸಾಕಷ್ಚು ವರ್ಷಗಳಿಂದ ಚರ್ಚೆಯಾಗುತ್ತಿದೆಯಾದರೂ ಇದೇ ಮೊದಲ ಬಾರಿಗೆ ಐಸಿಸಿ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರಿಸುವ ಕುರಿತು ಅಧಿಕೃತವಾಗಿ ಮನವಿ ಮಾಡುವುದಾಗಿ ಹೇಳಿದೆ.

ಮೂಲಗಳ ಪ್ರಕಾರ ಈಗಾಗಲೇ ಐಸಿಸಿ ಸಹ ಒಲಿಂಪಿಕ್ ವರ್ಕಿಂಗ್ ಗ್ರೂಪ್ ಅನ್ನು ರಚಿಸಿದ್ದು, ಇದು 2028 ರಿಂದ ಆರಂಭವಾಗುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನೂ ಕೂಡ ಭಾಗವಾಗಿಸುವ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಇಯಾನ್ ವಾಟ್ಮೋರ್ ಐಸಿಸಿ ಒಲಿಂಪಿಕ್ ವರ್ಕಿಂಗ್ ಗ್ರೂಪ್ ನ ಅಧ್ಯಕ್ಷರಾಗಿರುತ್ತಾರೆ ಮತ್ತು ಐಸಿಸಿ ಸ್ವತಂತ್ರ ನಿರ್ದೇಶಕ ಇಂದ್ರ ನೂಯಿ ಅವರ ಜೊತೆ ಸೇರಿಕೊಳ್ಳಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ  ಮಾಡಿರುವ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು, 'ಈ ಬಿಡ್‌ನ ಹಿಂದೆ ನಮ್ಮ ಕ್ರೀಡೆ ಒಗ್ಗಟ್ಟಾಗಿದೆ, ಮತ್ತು ನಾವು ಒಲಿಂಪಿಕ್ಸ್ ಅನ್ನು ಕ್ರಿಕೆಟ್ ನ ದೀರ್ಘಾವಧಿಯ ಭವಿಷ್ಯದ ಭಾಗವಾಗಿ ನೋಡುತ್ತೇವೆ. ನಾವು ಜಾಗತಿಕವಾಗಿ ಒಂದು ಶತಕೋಟಿಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ಅವರಲ್ಲಿ 90 ಪ್ರತಿಶತದಷ್ಟು ಜನರು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಅಲ್ಲದೆ ಸ್ಪಷ್ಟವಾಗಿ ಕ್ರಿಕೆಟ್ ಬಲವಾದ ಮತ್ತು ಭಾವೋದ್ರಿಕ್ತ ಅಭಿಮಾನಿಗಳನ್ನು ಹೊಂದಿದೆ, ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ನಮ್ಮ ಶೇ. 92ರಷ್ಟು ಅಭಿಮಾನಿ ಬಳಗವಿದೆ. ಅದೇ ಸಮಯದಲ್ಲಿ ಅಮೆರಿಕದಲ್ಲಿ 30 ಮಿಲಿಯನ್ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಆ ಅಭಿಮಾನಿಗಳು ತಮ್ಮ ನಾಯಕರು ಒಲಿಂಪಿಕ್ ಪದಕಕ್ಕಾಗಿ ಸ್ಪರ್ಧಿಸುವುದನ್ನು ನೋಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. 

ಅಂತೆಯೇ ಒಲಂಪಿಕ್ಸ್ ಕ್ರೀಡಾಕೂಟದ ಆಯೋಜಕರನ್ನು ಅಭಿನಂದಿಸಿದ ಬಾರ್ಕ್ಲೇ ಕೊರೋನಾ ಸಾಂಕ್ರಾಮಿಕದ ನಡುವೆಯೂ ಇಷ್ಟು ದೊಡ್ಡ ಕ್ರೀಡಾಕೂಟ ಆಯೋಜವೆ ಸಣ್ಣ ವಿಷಯವೇನಲ್ಲ ಎಂದು ಹೇಳಿದ್ದಾರೆ. 

"ಮೊದಲನೆಯದಾಗಿ ಐಸಿಸಿಯಲ್ಲಿ ಪ್ರತಿಯೊಬ್ಬರ ಪರವಾಗಿ, ಐಒಸಿ, ಟೋಕಿಯೊ 2020 ಮತ್ತು ಜಪಾನ್‌ನ ಜನರನ್ನು ಇಂತಹ ಕಷ್ಟಕರ ಸಂದರ್ಭಗಳಲ್ಲಿ ಇಂತಹ ಅದ್ಭುತ ಕ್ರೀಡಾಕೂಟವನ್ನು ಆಯೋಜಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. ಇದು ನಿಜವಾಗಿಯೂ ಅದ್ಭುತವಾಗಿದೆ ಮತ್ತು ಪ್ರಪಂಚದ ಕಲ್ಪನೆಯನ್ನು ಸೆರೆಹಿಡಿದಿದ್ದು, ಕ್ರಿಕೆಟ್ ಭವಿಷ್ಯದ ಕ್ರೀಡಾಕೂಟದ ಭಾಗವಾಗಲು ನಾವು ಇಷ್ಟಪಡುತ್ತೇವೆ. ಕ್ರಿಕೆಟ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಉತ್ತಮ ಸೇರ್ಪಡೆಯಾಗಲಿದೆ ಎಂದು ನಾವು ನಂಬುತ್ತೇವೆ, ಆದರೆ ಇತರ ಅನೇಕ ಶ್ರೇಷ್ಠ ಕ್ರೀಡೆಗಳು ಅದೇ ರೀತಿ ಮಾಡಲು ಬಯಸುತ್ತಿರುವುದರಿಂದ ನಮ್ಮ ಸೇರ್ಪಡೆ ಸುಲಭವಲ್ಲ ಎಂದು ನಮಗೆ ತಿಳಿದಿದೆ. ಆದರೆ ನಮ್ಮ ಅತ್ಯುತ್ತಮ ಹೆಜ್ಜೆಯನ್ನು ಮುಂದಿಡಲು ಮತ್ತು ಕ್ರಿಕೆಟ್ ಮತ್ತು ಒಲಿಂಪಿಕ್ಸ್ ಎಂತಹ ಉತ್ತಮ ಪಾಲುದಾರಿಕೆಯನ್ನು ತೋರಿಸಲು ಇದು ಸೂಕ್ತ ಸಮಯ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಐಸಿಸಿ ಒಲಂಪಿಕ್ ವರ್ಕಿಂಗ್ ಗ್ರೂಪ್ ಭಾಗವಾಗಿ ಜಿಂಬಾಬ್ವೆ ಕ್ರಿಕೆಟ್ ತವೆಂಗ್ವಾ ಮುಕುಹ್ಲಾನಿ, ಐಸಿಸಿ ಅಸೋಸಿಯೇಟ್ ಮೆಂಬರ್ ಡೈರೆಕ್ಟರ್ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಉಪಾಧ್ಯಕ್ಷ ಮಹಿಂದಾ ವಲ್ಲಿಪುರಂ ಇರಲಿದ್ದಾರೆ. 

ಈ ವಿಚಾರವಾಗಿ ಮಾತನಾಡಿದ ಅಮೆರಿಕ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಪರಾಗ್ ಮರಾಠೆ "ಒಲಿಂಪಿಕ್ ಬಿಡ್‌ಗೆ ಸಮಯ ಪಕ್ವವಾಗಿದೆ. ಅಮೇರಿಕಾ ಕ್ರಿಕೆಟ್ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳ್ಳಲು ಕ್ರಿಕೆಟ್‌ನ ಬಿಡ್ ಅನ್ನು ಬೆಂಬಲಿಸಲು ಸಾಧ್ಯವಾಗಿರುವುದಕ್ಕೆ ರೋಮಾಂಚನವಾಗಿದೆ. ಅಮೇರಿಕಾದಲ್ಲಿ ಈಗಾಗಲೇ ಅನೇಕ ಭಾವೋದ್ರಿಕ್ತ ಕ್ರಿಕೆಟ್ ಅಭಿಮಾನಿಗಳು ಮತ್ತು ಆಟಗಾರರು ಮತ್ತು ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮತ್ತು ಕ್ರೀಡೆಯನ್ನು ಅನುಸರಿಸುವ ಮೂಲಕ, ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯು ಹೆಚ್ಚಿನ ಮೌಲ್ಯವನ್ನು ನೀಡುತ್ತದೆ ಮತ್ತು ನಮ್ಮ ಸ್ವಂತ ದೃಷ್ಟಿಕೋನವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ಈ ದೇಶದಲ್ಲಿ ಕ್ರಿಕೆಟ್ ಅನ್ನು ಮುಖ್ಯವಾಹಿನಿಯ ಕ್ರೀಡೆಯಾಗಿ ಸ್ಥಾಪಿಸಲು ಇದು ನೆರವಾಗುತ್ತದೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com