ಅಭಿಷೇಕ್ ಶುಕ್ಲ
ಅಭಿಷೇಕ್ ಶುಕ್ಲ

ಅಡ್ಡಿಗಳನ್ನು ಮೆಟ್ಟಿ ನಿಂತು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ವಿಶೇಷ ಚೇತನ ಅಭಿಷೇಕ್ ಶುಕ್ಲ!

ಬಾಲ್ಯದಿಂದ ಕ್ರಿಕೆಟ್ ನ ಕನಸು ಹೊತ್ತಿದ್ದ ಅಭಿಷೇಕ್ ಶುಕ್ಲಾ ಅವರ ಕನಸು ನನಸಾಗಿದೆ. ಆತ ಓರ್ವ ಉತ್ತಮ ಬ್ಯಾಟ್ಸ್ಮನ್ ಹಾಗೂ ಬೌಲರ್ ಕೂಡಾ ಹೌದು.

ನವದೆಹಲಿ: ಬಾಲ್ಯದಿಂದ ಕ್ರಿಕೆಟ್ ನ ಕನಸು ಹೊತ್ತಿದ್ದ ಅಭಿಷೇಕ್ ಶುಕ್ಲಾ ಅವರ ಕನಸು ನನಸಾಗಿದೆ. ಆತ ಓರ್ವ ಉತ್ತಮ ಬ್ಯಾಟ್ಸ್ಮನ್ ಹಾಗೂ ಬೌಲರ್ ಕೂಡಾ ಹೌದು. ಈ 23 ವರ್ಷದ ಯುವಕ ಕ್ರಿಕೆಟ್ ಮೈದಾನದಲ್ಲಿಯಷ್ಟೇ ಅಲ್ಲದೇ ನಿಜ ಜೀವನದಲ್ಲೂ ಆಲ್ ರೌಂಡರ್ ಆಗಿ ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ 

ಅಭಿಷೇಕ್ ಗೆ ಜನ್ಮತಃ ಎಡ ಭಾಗದ ಮೊಣಕೈ ನಿಂದ ಮುಂದೆ ಕೈ ಬೆಳವಣಿಗೆಯಾಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಆತ ಧೃತಿಗೆಡದೇ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರನ್ನು ನಿಜ ಜೀವನದಲ್ಲೂ ಆಲ್ ರೌಂಡರ್ ಎಂದದ್ದು!! 

ದೈಹಿತ ಅಡ್ಡಿಗಳನ್ನು ಮೆಟ್ಟಿ ನಿಂತಿರುವ ಅಭಿಷೇಕ್ ಈಗ ಭಾರತೀಯ ಅಂಗವಿಕಲ (ವಿಶೇಷ ಚೇತನರ) ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ಸೆಪ್ಟೆಂಬರ್ ನಲ್ಲಿ ಈ ವಿಭಾಗದ ಭಾರತ-ಬಾಂಗ್ಲಾದೇಶದ ನಡುವೆ ನಡೆಯಲಿರುವ ಮೂರೂ ಆವೃತ್ತಿಯ ಕ್ರಿಕೆಟ್ ಟೂರ್ನಮೆಂಟ್ ಗೆ ಆಯ್ಕೆಯಾಗಿದ್ದಾರೆ.

ಭಾರತದ ಅಂಗವಿಕಲ (ವಿಶೇಷ ಚೇತನ)ರ ಕ್ರಿಕೆಟ್ ಸಂಸ್ಥೆ (ಬಿಡಿಸಿಐ) ಆ.04-08 ವರೆಗೆ ಹೈದರಾಬಾದ್ ನಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ 
ಅಭಿಷೇಕ್ ಶುಕ್ಲಾ ಹೆಸರನ್ನು ಅಂತಿಮಗೊಳಿಸಲಾಗಿದೆ.

ಆ.08 ರಂದು ಅಭಿನಂದನಾ ಪತ್ರವನ್ನು ಬಿಡಿಸಿಐ ಪ್ರಧಾನ ಕಾರ್ಯದರಶಿ ಕೆ.ರಾಮಿ ರೆಡ್ಡಿ  ಅಭಿಷೇಕ್ ಶುಕ್ಲಾಗೆ ಕಳಿಸಿದ್ದು, ಮೂರು ಆವೃತ್ತಿ-ಟೆಸ್ಟ್-ಏಕದಿನ ಪಂದ್ಯ-ಟಿ20 ಗಳಿಗೆ ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. 

ಆಯ್ಕೆಯಾಗಿರುವ ಬಗ್ಗೆ ಮಾತನಾಡಿರುವ ಅಭಿಷೇಕ್, ಕ್ರಿಕೆಟ್ ನನ್ನ ಉತ್ಸಾಹ ಹಾಗೂ ಪ್ರೀತಿ, ಇಷ್ಟು ವರ್ಷಗಳ ಕಾಲ ಶ್ರಮಿಸಿದ್ದಕ್ಕೆ ಈಗ ಆಯ್ಕೆಯಾಗಿರುವುದು ನನ್ನ ಅತ್ಯುತ್ತಮವಾದುದ್ದನ್ನು ನೀಡುವುದಕ್ಕೆ ಉತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ. 

ಬಾಲ್ಯದಿಂದಲೂ ಅಭಿಷೇಕ್ ರಾಜ್ ಗಂಗ್ ಪುರ ಆದರ್ಶ್ ಕ್ರಿಕೆಟ್ ಕ್ಲಬ್ ನಲ್ಲಿ ಕ್ರಿಕೆಟ್ ಆಡುತ್ತಿದ್ದರು, ಕೋಚ್ ಗಳಾದ ಸಂಗ್ರಾಮ್ ದಾಸ್, ಕಿಶೋರ್ ಕೊಯ್ರಿ, ಕುಲ್ದೀಪ್ ಶರ್ಮಾ ಅಭಿಷೇಕ್ ಅವರಿಗೆ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯ ಮಾಡಿದರು.

8 ವರ್ಷಗಳ ಹಿಂದೆಯೇ ಬಿಡಿಸಿಐ ನ ಒಡಿಶಾದ ಘಟಕದ ಕಣ್ಣಿಗೆ ಬಿದ್ದಿದ್ದರು ಅಭಿಷೇಕ್, ಅದಾದ ಬಳಿಕ ಯುವ ಕ್ರಿಕೆಟಿಗನಿಗೆ ಬಿಡಿಸಿಐ ನ ಪರವಾಗಿ ಅನೇಕ ಟೂರ್ನಮೆಂಟ್ ಗಳಲ್ಲಿ ಆಡುವ ಅವಕಾಶ ಒದಗಿ ಬಂದಿತ್ತು.

ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲ ಅಭಿಷೇಕ್, ಪರಿಣಾಮ ಕಾರಿ ಬೌಲರ್ ಕೂಡ ಹೌದಾಗಿದ್ದು, ಗಂಟೆಗೆ 110-115 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ.

ವಿಶೇಶ ಚೇತನರಿಗೆ ಕ್ರಿಕೆಟ್ ಮೂಲಕ ಅರ್ಹ ಗೌರವ, ಮಾನ್ಯತೆ ಸಿಗುವುದು ಸಾಧ್ಯ ಎನ್ನುವ ಅಭಿಷೇಕ್ ತಮ್ಮ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದು, ಶೀಘ್ರವೇ ನೌಕರಿ ಸಿಗುವ ಭರವಸೆ ಹೊಂದಿದ್ದಾರೆ. "ಸಂಬಾಲ್ಪುರ ಜಿಲ್ಲೆಯಲ್ಲಿ ಕ್ರೇನ್ ಆಪರೇಟರ್ ಆಗಿರುವ  ನನ್ನ ತಂದೆ ಶಿವ್ ಶುಕ್ಲಾ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯಾಗಿದ್ದಾರೆ.  
ಸುಂದರ್ ಘರ್ ಜಿಲ್ಲೆಯ ರಾಜ್ ಗಂಗ್ ಪುರದ ಗೋಶಾಲಪಾದದಲ್ಲಿ 2 ರೂಮ್ ನ ಮನೆಯನ್ನು ಬಾಡಿಗೆಗೆ ಪಡೆದಿದ್ದು, ತಂದೆ-ತಾಯಿ ಮಿಥಿಲೇಶ್ ಸಹೋಡರಿ ಸಲೋಮಿ ಹಾಗೂ ಸಹೋಡರ ಆದರ್ಶ್ (ಇಬ್ಬರೂ ಶಾಲೆಯ ವಿದ್ಯಾರ್ಥಿಗಳು) ಜೊತೆಗಿದ್ದಾರೆ. ಅಭಿಷೇಕ್ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಕಾಂ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ಅಭಿಷೇಕ್ ಮಾತ್ರವಲ್ಲದೇ ಪಕ್ಕದ ಜರ್ಸುಗುಡ ಜಿಲ್ಲೆಯ ಜಗ್ಜೀತ್ ಮೊಹಂತಿ ಅವರೂ ಸಹ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ, ಜಗ್ಜೀತ್ (31) ವಿವಾಹಿತರಾಗಿದ್ದು 2 ವರ್ಷದ ಮಗನಿದ್ದಾನೆ. ಈತ ಸುಂದರ್ ಘರ್ ನ ಪಂಜಾಬ್ ರಾಷ್ಟ್ರೀಯ ಬ್ಯಾಂಕ್ ನ ಹೇಮಗಿರಿ ಬ್ರಾಂಚ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com