ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಘಟನೆ: ಒಂದೇ ಓವರ್ ನಲ್ಲಿ ಆರು ವಿಕೆಟ್ ಪಡೆದು ದೆಹಲಿ ಬಾಲಕನ ಸಾಧನೆ!
ದುಬೈನಲ್ಲಿ ನಡೆಯುತ್ತಿರುವ ಕಾರ್ವಾನ್ ಅಂಡರ್-19 ಗ್ಲೋಬಲ್ ಲೀಗ್ ಟಿ- 20 ಪಂದ್ಯದಲ್ಲಿ ಭಾರತೀಯ ಮೂಲದ(ದೆಹಲಿ) ಬಾಲಕ ಹರ್ಷಿತ್ ಸೇಠ್ ಒಂದೇ ಓವರ್‌ನಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ.
Published: 14th December 2021 03:28 PM | Last Updated: 14th December 2021 03:28 PM | A+A A-

ಹರ್ಷಿತ್
ದುಬೈ: ದುಬೈನಲ್ಲಿ ನಡೆಯುತ್ತಿರುವ ಕಾರ್ವಾನ್ ಅಂಡರ್-19 ಗ್ಲೋಬಲ್ ಲೀಗ್ ಟಿ- 20 ಪಂದ್ಯದಲ್ಲಿ ಭಾರತೀಯ ಮೂಲದ(ದೆಹಲಿ) ಬಾಲಕ ಹರ್ಷಿತ್ ಸೇಠ್ ಒಂದೇ ಓವರ್‌ನಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ.
ಪಾಕಿಸ್ತಾನದ ಹೈದರಾಬಾದ್‌ನ ಹಾಕ್ಸ್ ಅಕಾಡೆಮಿ ಆರ್ ಸಿ ಜಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ದುಬೈ ಕ್ರಿಕೆಟ್ ಕೌನ್ಸಿಲ್ ಆಫ್ ಸ್ಟಾರ್ಲೆಟ್ ಪ್ರತಿನಿಧಿಸಿದ್ದ ಹರ್ಷಿತ್ ಡಬಲ್ ಹ್ಯಾಟ್ರಿಕ್ ಸೇರಿದಂತೆ ಒಟ್ಟು 8 ವಿಕೆಟ್(4-0-4-8) ಸಾಧಿಸಿದ್ದರಿಂದ ಪ್ರವಾಸಿ ತಂಡ 44 ರನ್‌ಗಳಿಗೆ ಕುಸಿದಿದೆ.
ಪ್ರಸಕ್ತ ಕ್ರಿಕೆಟ್‌ನಲ್ಲಿ ಬಹುತೇಕ ಅಸಾಧ್ಯವಾದ ಡಬಲ್ ಹ್ಯಾಟ್ರಿಕ್ ದಾಖಲೆಯನ್ನು ಎಡಗೈ ಸ್ಪಿನ್ನರ್ ಹರ್ಷಿತ್ ಸಾಧಿಸಿದ್ದಾನೆ. ಈ ವರ್ಷ ನವೆಂಬರ್ 28 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಘಟನೆ ಇನ್ನೂ ನಡೆದಿಲ್ಲ.
ಆದಾಗ್ಯೂ, 2017ರ ಜನವರಿಯಲ್ಲಿ ಆಸ್ಟ್ರೇಲಿಯಾದ ಕ್ಲಬ್ ಕ್ರಿಕೆಟ್‌ನಲ್ಲಿ ಇಂತಹದೇ ಘಟನೆ ನಡೆದಿತ್ತು. ಗೋಲ್ಡನ್ ಪಾಯಿಂಟ್ ಕ್ರಿಕೆಟ್ ಕ್ಲಬ್‌ಗಾಗಿ ಅಲೆಡ್ ಕ್ಯಾರಿ ಡಬಲ್ ಹ್ಯಾಟ್ರಿಕ್ ದಾಖಲಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ. ಇದಕ್ಕೂ ಮುನ್ನ 1930ರಲ್ಲಿ ಭಾರತೀಯ ಶಾಲಾ ಕ್ರಿಕೆಟ್‌ನಲ್ಲಿ ವೈ.ಎಸ್ ರಾಮಸ್ವಾಮಿ, 1951ರಲ್ಲಿ ಇಂಗ್ಲಿಷ್ ಸ್ಥಳೀಯ ಕ್ರಿಕೆಟ್‌ನಲ್ಲಿ ಜಿ. ಸಿರೆಟ್ ಸಾಧನೆ ಮಾಡಿದ್ದರು ಎಂದು ತಿಳಿದು ಬರುತ್ತದೆ.