ANI
ಚೆನ್ನೈ: ಕೌಶಲ್ಯಾಧರಿತವಾಗಿಯೇ ಅರ್ಜುನ್ ತೆಂಡೂಲ್ಕರ್ ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಚೆನ್ನೈನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂಗಳ ಮೂಲಬೆಲೆಯಲ್ಲೇ ಅರ್ಜುನ್ ತೆಂಡೂಲ್ಕರ್ ರನ್ನು ಖರೀದಿ ಮಾಡಿತ್ತು. ಈ ಹಿಂದೆ ಅರ್ಜುನ್ ತೆಂಡೂಲ್ಕರ್ ರ ತಂದೆ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೂ ಕೂಡ ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದರು. ಈಗಲೂ ಸಹ ಸಚಿನ್ ತಂಡದ ಪ್ರಧಾನ ಸಲಹಾಗಾರರಾಗಿದ್ದು, ಇದು ಅರ್ಜುನ್ ತೆಂಡೂಲ್ಕರ್ ಆಯ್ಕೆ ಮೇಲೆ ಪರಿಣಾಮ ಬೀರಿರಬಹುದು ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಮುಂಬೈ ಇಂಡಿಯನ್ಸ್ ತಂಡ ಸ್ಪಷ್ಟನೆ ನೀಡಿದ್ದು, ಅರ್ಜುನ್ ತೆಂಡೂಲ್ಕರ್ ರನ್ನು ಅವರ ಕೌಶಲ್ಯದ ಮೇರೆಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
'ಮುಂಬೈ ಇಂಡಿಯನ್ಸ್ನೊಂದಿಗಿನ ಒಪ್ಪಂದವು ಅರ್ಜುನ್ಗೆ ಕಲಿಕೆಯ ಪ್ರಕ್ರಿಯೆಯಾಗಲಿದೆ. 21 ವರ್ಷದ ಎಡಗೈ ಮಧ್ಯಮ ವೇಗಿಗೆ ಇದು ಅತ್ಯುತ್ತಮ ಅವಕಾಶವಾಗಿದ್ದು, ಸಮಯದೊಂದಿಗೆ ಆಟವನ್ನು ಕಲಿಯಲಿದ್ದಾರೆ. ಅಂತೆಯೇ ಅವರ ಕೌಶಲ್ಯವೂ ಕೂಡ ವೃದ್ದಿಯಾಗುತ್ತದೆ. ಪ್ರಸ್ತುತ ನಾವು ಅರ್ಜುನ್ ತೆಂಡೂಲ್ಕರ್ ರ ಕೌಶಲ್ಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ. ಖಂಡಿತಾ ಅರ್ಜುನ್ ಮೇಲೆ ಅವರ ತಂದೆ ಸಚಿನ್ ಅವರ ಟ್ಯಾಗ್ ಇದೆ. ಅದೃಷ್ಟವಶಾತ್ ಅರ್ಜುನ್ ಓರ್ವ ಬೌಲರ್.. ಅದರೆ ಖಂಡಿತಾ ಅರ್ಜುನ್ ಅವರ ರೀತಿ ಸಚಿನ್ ಬೌಲಿಂಗ್ ಮಾಡಿದರೆ ಖಂಡಿತಾ ಹೆಮ್ಮೆ ಪಡುತ್ತಾರೆ ಎಂದು ಹೇಳಿದರು.
ಅಂತೆಯೇ ಅರ್ಜುನ್ ಈಗಿನ್ನೂ 21 ವರ್ಷದ ಹುಡುಗ... ಆತ ಕಲಿಯುವುದು ಸಾಕಷ್ಟಿದೆ. ಮುಂಬೈ ಇಂಡಿಯನ್ಸ್ ತಂಡ ಅರ್ಜುನ್ ಗೆ ಕಲಿಕೆಯ ಪಾಠಶಾಲೆಯಾಗಲಿದೆ. ಆತ ಚಿಕ್ಕವನಿರಬಹುದು.. ಆದರೆ ತನ್ನ ವೃತ್ತಿ ಜೀವನದ ಕುರಿತು ಗಂಭೀರ ಗಮನ ಹರಿಸಿದ್ದಾನೆ. ನಾವು ಆತನಿಗೆ ಸಮಯ ನೀಡಬೇಕಿದ್ದು, ಈ ಟೂರ್ನಿ ಅರ್ಜುನ್ ಮೇಲೆ ಹೆಚ್ಚಿನ ಒತ್ತಡ ಹೇರಲಾರದು ಎಂದು ಭಾವಿಸುತ್ತೇನೆ. ಯಾವುದೇ ಕ್ಷಣದಲ್ಲೂ ಅರ್ಜುನ್ ಗೆ ಸಲಹೆ ನೀಡಲು ನಾವು ಸಿದ್ಧ ಎಂದು ಜಯವರ್ಧನೆ ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಟೀಂ ಇಂಡಿಯಾ ಮಾಜಿ ವೇಗಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಜಹೀರ್ ಖಾನ್ ಅವರು, ಖಂಡಿತಾ ಸಚಿನ್ ತೆಂಡೂಲ್ಕರ್ ಅವರ ಮಗ ಎಂಬ ಒತ್ತಡ ಯಾವಾಗಲೂ ಅರ್ಜುನ್ ಮೇಲಿರುತ್ತದೆ. ನಾನು ನೆಟ್ ನಲ್ಲಿ ಸಾಕಷ್ಟು ಸಮಯ ಅರ್ಜುನ್ ಜೊತೆ ಕಳೆದಿದ್ದೇನೆ. ಅಂತೆಯೇ ಅರ್ಜುನ್ ಗೆ ಬೌಲಿಂಗ್ ನ ರಣತಂತ್ರಗಳ ಕುರಿತು ಕಲಿಸುವ ಪ್ರಯತ್ನ ಮಾಡಿದ್ದೇನೆ. ನಿಜಕ್ಕೂ ಅತ ಕಠಿಣ ಶ್ರಮ ಪಡುವ ಹುಡುಗ. ಮುಂಬೈ ಇಂಡಿಯನ್ಸ್ ತಂಡ ವಾತಾವರಣವು ಅರ್ಜುನ್ ವೃತ್ತಿ ಜೀವನಕ್ಕೆ ಖಂಡಿತಾ ನೆರವಾಗಲಿದೆ. ಅರ್ಜುನ್ ಪರಿಶ್ರಮ ನೋಡುತ್ತಿದ್ದರೆ ಅತ ಖಂಡಿತಾ ಉತ್ತಮ ಕ್ರಿಕೆಟಿಗನಾಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ. ಅರ್ಜುನ್ ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆ. ತನ್ನ ಸಾಮರ್ಥ್ಯವನ್ನು ಅರ್ಜುನ್ ಪ್ರದರ್ಶಿಸಬೇಕು ಎಂದು ಜಹೀರ್ ಖಾನ್ ಹೇಳಿದರು.
ಮುಂಬೈ ಇಂಡಿಯನ್ಸ್ ತಂಡ ಸೇರಲು ಉತ್ಸುಕನಾಗಿದ್ದೇನೆ: ಅರ್ಜುನ್ ತೆಂಡೂಲ್ಕರ್
ಇನ್ನು ಮುಂಬೈ ಇಂಡಿಯನ್ಸ್ ತಂಡ ಸೇರ್ಪಡೆ ವಿಚಾರವಾಗಿ ಹರ್ಷ ವ್ಯಕ್ತಪಡಿಸಿರುವ ಅರ್ಜುನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್ ತಂಡ ಸೇರಲು ಉತ್ಸುಕನಾಗಿದ್ದೇನೆ. ಐಪಿಎಲ್ ಆರಂಭವಾದ ದಿನದಿಂದಲೂ ನಾನು ಮುಂಬೈ ಇಂಡಿಯನ್ಸ್ ತಂಡದ ಕಟ್ಟಾ ಅಭಿಮಾನಿಯಾಗಿದ್ದೆ. ಇದೀಗ ಅದೇ ತಂಡಕ್ಕೆ ನಾನು ಆಯ್ಕೆಯಾಗಿರುವುದು ನಿಜಕ್ಕೂ ಖುಷಿತಂದಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಅರ್ಜುನ್, "ಬಾಲ್ಯದಿಂದಲೂ, ನಾನು ಮುಂಬೈ ಇಂಡಿಯನ್ಸ್ ತಂಡದ ಕಟ್ಟಾ ಅಭಿಮಾನಿಯಾಗಿದ್ದೇನೆ. ನನ್ನ ಮೇಲೆ ಭರವಸೆ ಇಟ್ಟು ತಂಡಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ತಂಡದ ತರಬೇತುದಾರರು, ಮಾಲೀಕರು ಮತ್ತು ಸಹಾಯಕ ಸಿಬ್ಬಂದಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಹಿಂದೆ ಸಾಕಷ್ಟು ಸಮಯವನ್ನು ಮುಂಬೈ ಇಂಡಿಯನ್ಸ್ ತಂಡದ ಜೊತೆ ಕಳೆದಿದ್ದೇನೆ. ಆ ಆನುಭವ ನನಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಉಳಿದಂತೆ ಗುರುವಾರ ನಡೆದ ಆಟಗಾರರ ಹರಾಜಿನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ನಾಥನ್ ಕೌಲ್ಟರ್-ನೈಲ್, ಜಿಮ್ಮಿ ನೀಶಮ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಮತ್ತು ಪಿಯೂಷ್ ಚಾವ್ಲಾ ರನ್ನು ಖರೀದಿ ಮಾಡಿತು. ಅರ್ಜುನ್ ಐಪಿಎಲ್ 2020 ರ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾದ ಕೊನೆಯ ಆಟಗಾರನಾಗಿದ್ದು, ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂಗಳ ಮೂಲ ಬೆಲೆಗೇ ಖರೀದಿ ಮಾಡಿತು.