ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಗಲು-ರಾತ್ರಿ ಕದನ: ಪಿಂಕ್ ಬಾಲ್ ಟೆಸ್ಟ್ ಗೆ ಕೊಹ್ಲಿ ಪಡೆ ಭರ್ಜರಿ ತಯಾರಿ
ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಮೈದಾನ ಎಂಬ ಕೀರ್ತಿಗೆ ಭಾಜನವಾಗಿರುವ ಮೊಟೇರಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಪಡೆ ಭರ್ಜರಿ ತಯಾರಿ ನಡೆಸಿದೆ.
Published: 22nd February 2021 02:14 PM | Last Updated: 22nd February 2021 04:18 PM | A+A A-

ಮೊಟೆರಾ ಅಂಗಳದಲ್ಲಿ ಕೊಹ್ಲಿ ಅಭ್ಯಾಸ
ಅಹ್ಮದಾಬಾದ್: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಮೈದಾನ ಎಂಬ ಕೀರ್ತಿಗೆ ಭಾಜನವಾಗಿರುವ ಮೊಟೇರಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಪಡೆ ಭರ್ಜರಿ ತಯಾರಿ ನಡೆಸಿದೆ.
ಹೌದು.. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರನೇ ಪಂದ್ಯ ಫೆಬ್ರವರಿ 24 ರಿಂದ 28 ವರೆಗೆ ನಡೆಯಲಿದ್ದು, ಈಗಾಗಲೇ ಭಾರತೀಯ ಆಟಗಾರರೂ ಮೊಟೆರಾ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈಗಾಗಲೇ 1-1ರಲ್ಲಿ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿರುವ ಕೊಹ್ಲಿ ಪಡೆ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ತಂಡ ಭಾನುವಾರ ಸಾಕಷ್ಟು ಅಭ್ಯಾಸ ನಡೆಸಿತು.
2ನೇ ಟೆಸ್ಟ್ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಆರ್ ಆಶ್ವಿನ್ ಮೂರನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ನಾಯಕ ಕೊಹ್ಲಿ, ರಿಷಬ್ ಪಂತ್, ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಸೇರಿದಂತೆ ತಂದ ಎಲ್ಲ ಆಟಗಾರರೂ ಭಾನುವಾರ ಕಠಿಣ ಅಭ್ಯಾಸ ನಡೆಸಿದರು. ಪ್ರಮುಖವಾಗಿ ವೇಗಿ ಮತ್ತು ತಂಡದ ಬೌಲಿಂಗ್ ಅಸ್ತ್ರಗಳಾದ ಜಸ್ ಪ್ರೀತ್ ಬುಮ್ರಾ ಮತ್ತು ಮಹಮದ್ ಸಿರಾಜ್ ಕೂಡ ಬ್ಯಾಟ್ ಹಿಡಿದು ಅಭ್ಯಾಸ ನಡೆಸಿದ್ದು ದಿನದ ವಿಶೇಷವಾಗಿತ್ತು. ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಬುಮ್ರಾ ಮೊಟೆರಾ ಅಂಗಳದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
How good is that view for a nets session #INDvENG #TeamIndia @Paytm pic.twitter.com/v0sfOMfzHp
— BCCI (@BCCI) February 20, 2021
ಉಳಿದಂತೆ ಶುಭ್ ಮನ್ ಗಿಲ್-ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಇಬ್ಬರೂ ಆಟಗಾರರು ನೆಟ್ಸ್ ನಲ್ಲಿ ಸಾಕಷ್ಟು ಹೊತ್ತು ಬೆವರು ಸುರಿಸಿದ್ದಾರೆ. ಅಂತೆಯೇ ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ ಕೂಡ ಕಠಿಣ ಅಭ್ಯಾಸ ನಡೆಸಿದರು. ತಂಡದ ಸ್ಪಿನ್ ಅಸ್ತ್ರಗಳಾದ ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಬೌಲಿಂಗ್ ಅಭ್ಯಾಸ ನಡೆಸಿದರು.
ಮೊಟೆರಾ ಕ್ರೀಡಾಂಗಣದ ವಿಶೇಷ
ಮೂರನೇ ಟೆಸ್ಟ್ ಪಂದ್ಯ ಹಲವು ವಿಶೇಷತೆಗಳಿಂದ ಕೂಡಿದ್ದು, ಈಗಾಗಲೇ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಶೇ.50 ರಷ್ಟು ಟೆಕೆಟ್ ಕೂಡ ಸೇಲ್ ಆಗಿದೆ. ಒಟ್ಟು 1.10 ಲಕ್ಷ ಪ್ರೇಕ್ಷಕ ಗ್ಯಾಲರಿ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೊರೊನಾ ಕಾರಣದಿಂದಾಗಿ ಶೇ.50 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂತೆಯೇ ಮೊಟೆರಾದಲ್ಲಿ ಜಗತ್ತಿನ ಶ್ರೇಷ್ಠ ಮಟ್ಟದ ಡ್ರೈನೇಜ್ ವ್ಯವಸ್ಥೆ ಇದ್ದು, ಎಷ್ಟೇ ಜೋರು ಮಳೆ ಸುರಿಯಲಿ, ಮಳೆ ನಿಂತ ಕೇವಲ ಅರ್ಧ ಗಂಟೆಯಲ್ಲಿ ಆಟವನ್ನು ಪುನರಾರಂಭಿಸುವ ರೀತಿಯ ಡ್ರೈನೇಜ್ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ.
ಒಂದೇ ಒಂದು ಹಗಲುರಾತ್ರಿ ಪಂದ್ಯ ಗೆದ್ದಿರುವ ಭಾರತ
ಇನ್ನು ಭಾರತ ತಂಡ 2ಹಗಲುರಾತ್ರಿ ಟೆಸ್ಟ್ ಪಂದ್ಯವನ್ನಾಡಿದ್ದು ಈ ಪೈಕಿ 2019 ನವೆಂಬರ್ ನಲ್ಲಿ ಕೋಲ್ಕತಾದ ಈಡನ್ ಗಾರ್ಡೆನ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆದ್ಜಿತ್ತು. ಆ ಬಳಿಕ ಕಳೆದ ವರ್ಷ ಡಿಸೆಂಬರ್ ನಲ್ಲಿ ಆಸಿಸ್ ವಿರುದ್ಧ ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಸೋತಿತ್ತು. ಇದು ಭಾರತಕ್ಕೆ ಮೂರನೇ ಹಗಲು ರಾತ್ರಿ ಪಂದ್ಯವಾಗಿಗ್ಗು, ತೀವ್ರ ಕುತೂಹಲ ಕೆರಳಿಸಿದೆ.
ಮೊಟೆರಾ ಕ್ರೀಡಾಂಗಣ ಉದ್ಘಾಟನೆಯಾದ ಬಳಿಕ ಆಯೋಜನೆಯಾಗಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಇದಾಗಿದ್ದು, ಇದೇ ಕಾರಣಕ್ಕೆ ಈ ಪಂದ್ಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಗೃಹ ಸಚಿವ ಅಮಿತ್ ಶಾ ವೀಕ್ಷಿಸಲಿದ್ದಾರೆ.