
ವೇಗಿ ಉಮೇಶ್ ಯಾದವ್
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಗಳಿಗಾಗಿ ವೇಗಿ ಉಮೇಶ್ ಯಾದವ್ ಸೋಮವಾರ ಟೀಂ ಇಂಡಿಯಾಕ್ಕೆ ಮರಳಿದ್ದಾರೆ.
ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ನಂತರ ಉಮೇಶ್ ಯಾದವ್ ಮತ್ತೆ ತಂಡವನ್ನು ಸೇರಿಕೊಂಡರೆ, ವಿಜಯ ಹಜಾರೆ ಟ್ರೋಫಿಯಲ್ಲಿ ಆಡಲು ಸಾಧ್ಯವಾಗುವಂತೆ ಶಾರ್ದುಲ್ ಠಾಕೂರ್ ಅವರನ್ನು ಟೀಂ ಇಂಡಿಯಾದಿಂದ ಬಿಡುಗಡೆ ಮಾಡಲಾಗಿದೆ.
ಹಗಲು- ರಾತ್ರಿಯ ಮೂರನೇ ಟೆಸ್ಟ್ ಪಂದ್ಯ ಅಹಮದಾಬಾದಿನಲ್ಲಿ ಬುಧವಾರದಿಂದ ಆರಂಭವಾಗಲಿದೆ. ಭಾನುವಾರ ಮೊಟೇರಾದಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉಮೇಶ್ ಯಾದವ್ ಪಾಲ್ಗೊಂಡಿದ್ದರು. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಟೀಂ ಇಂಡಿಯಾವನ್ನು ಸೇರಿಕೊಂಡರು ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ವಿಜಯ ಹರಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಲು ಅನುಕೂಲವಾಗುವಂತೆ ಶಾರ್ದುಲ್ ಠಾಕೂರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಡಿಸೆಂಬರ್ ತಿಂಗಳಲ್ಲಿ ಮೆಲ್ಬರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ಗಾಯಗೊಂಡಿದ್ದರು. ಅದಕ್ಕಾಗಿ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಅವರನ್ನು ಹೊರಗಿಡಲಾಗಿತ್ತು. ಪಿಂಕ್ ಬಾಲ್ ಟೆಸ್ಟ್ ನಲ್ಲಿ ಅವರು ಆಡುವ
ಸಾಧ್ಯತೆಯಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಸ್ತುತ ಭಾರತ- ಇಂಗ್ಲೆಂಡ್ ತಲಾ 1-1 ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿವೆ.