ನಿಜಕ್ಕೂ ಗೋಡೆಯೇ!: ಗಾಯದ ನಡುವೆಯೇ 3 ಗಂಟೆಗಳ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದ ವಿಹಾರಿ, ಅಶ್ವಿನ್!

ಭಾರತದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಕೂಡ ಸೋಮವಾರ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಐತಿಹಾಸಿಕ ಕ್ಷಣ ಎನ್ನಬಹುದು. 

Published: 12th January 2021 03:10 PM  |   Last Updated: 12th January 2021 04:46 PM   |  A+A-


Hanuma Vihari-R Ashwin

ಹನುಮ ವಿಹಾರಿ ಮತ್ತು ಅಶ್ವಿನ್

Posted By : Srinivasamurthy VN
Source : PTI

ಸಿಡ್ನಿ: ಭಾರತದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಕೂಡ ಸೋಮವಾರ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಐತಿಹಾಸಿಕ ಕ್ಷಣ ಎನ್ನಬಹುದು. 

ಕೆಲವೇ ಆಟಗಾರರು ಇಡೀ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ. ಹೌದು ಸಿಡ್ನಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗಿದ್ದರೂ ಭಾರತಕ್ಕೆ ಮಾತ್ರ ಈ ಪಂದ್ಯ ಗೆದ್ದಷ್ಟೇ ಸಂತಸ ತಂದಿದೆ. ಹೌದು.. ಆಸ್ಟ್ರೇಲಿಯಾ ನೀಡಿದ್ದ 406 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ರೋಹಿತ್ ಶರ್ಮಾ (52), ಶುಬ್ ಮನ್ ಗಿಲ್ (31), ಚೇತೇಶ್ವರ ಪೂಜಾರ (77), ರಿಷಬ್ ಪಂತ್ (97) ಗೆಲುವಿನ ಆಸೆ ಚಿಗುರೊಡೆಸಿದ್ದರು. ಆದರೆ ಈ ಎಲ್ಲ ಆಟಗಾರರ ವಿಕೆಟ್ ಪತನದ ಬಳಿಕ ಗೆಲುವಿನ ಆಸೆಯಲ್ಲಿ ತೇಲುತ್ತಿದ್ದ ಭಾರತಕ್ಕೆ ಅಕ್ಷರಶಃ ಸೋಲಿನ ಭೀತಿ ಶುರುವಾಗಿತ್ತು. ಕಾರಣ ಕೆಳಕ್ರಮಾಂಕದಲ್ಲಿ ಬ್ಯಾಟ್ ಮಾಡುವಲ್ಲಿ ಸಮರ್ಥ ಆಟಗಾರರು ಇರಲಿಲ್ಲ. ರವೀಂದ್ರ ಜಡೇಜಾ ಇದ್ದರಾದರೂ ಗಾಯದ ಸಮಸ್ಯೆಯಿಂದಾಗಿ ಅವರು ಮೈದಾನಕ್ಕೆ ಇಳಿಯಲೇ ಇಲ್ಲ. 

ಹೀಗಾಗಿ ಆ ಸಂದರ್ಭದಲ್ಲಿ ಕ್ರೀಸ್ ನಲ್ಲಿದ್ದ ಹನುಮ ವಿಹಾರಿ-ಆರ್ ಅಶ್ವಿನ್ ಮೇಲೆ ಇಡೀ ಪಂದ್ಯ ನಿಂತಿತ್ತು. ಆಘಾತಕಾರಿ ವಿಚಾರವೆಂದರೆ ಹನುಮ ವಿಹಾರಿ ಮತ್ತು ಅಶ್ವಿನ್ ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದರು.  ಅವರನ್ನು ಆಸ್ಪತ್ರೆ ಕರೆದೊಯ್ದು ಸ್ಯಾನಿಂಗ್ ಮಾಡಿಸಿದಾಗ ಅವರ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ವೈದ್ಯಕೀಯ ಭಾಷೆಯಲ್ಲಿ ಗ್ರೇಡ್ 2 ಟಿಯರ್ (ಮಂಡಿರಜ್ಜು) ಎಂದು ಹೇಳಲಾಗುವ ಗಾಯದ ಸಮಸ್ಯೆಗೆ ತುತ್ತಾಗಿದ್ದ ವಿಹಾರಿ ಟೆಸ್ಟ್ ನ ಅಂತಿಮ ದಿನ ಹೊರಗುಳಿಯುವುದು ಮಾತ್ರವಲ್ಲ ಮುಂದಿನ ಪಂದ್ಯದಿಂದಲೂ ದೂರ ಉಳಿಯಬೇಕಾಗುತ್ತದೆ ಎಂದು ಹೇಳಲಾಗಿತ್ತು,.

ಸಾಮಾನ್ಯವಾಗಿ ಗ್ರೇಡ್ 2 ಟಿಯರ್ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಓರ್ವ ಆಟಗಾರನಿಗೆ 3 ರಿಂದ 6 ವಾರಗಳು ತೆಗೆದುಕೊಳ್ಳುತ್ತದೆ. ಅಲ್ಲದೆ ಆಲ್ ರೌಂಡರ್ ಜಡೇಜಾ ಕೂಡ ಗಾಯದ ಸಮಸ್ಯೆಯಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೇ ಕಾರಣಕ್ಕೆ ಭಾರತಕ್ಕೆ ಸೋಲು ಕಟ್ಟಿಟ್ಟಬುತ್ತಿ ಎಂದೇ ಹೇಳಲಾಗಿತ್ತು. ಪೂಜಾರ ಔಟಾದ ಬಳಿಕ ಅನ್ಯ ಮಾರ್ಗವಿಲ್ಲದೇ ತಾತ್ಕಾಲಿಕ ಚಿಕಿತ್ಸೆ ಪಡೆದು ಕ್ರೀಸ್ ಗೆ ಆಗಮಿಸಿದ್ದರು. ಆದರೆ ಗಾಯದಿಂದ ಬಳಲುತ್ತಿರುವ ಆಟಗಾರ ಎಷ್ಟು ಹೊತ್ತುತಾನೆ ಕ್ರೀಸ್ ನಲ್ಲಿರಲು ಸಾಧ್ಯ.  ಆದರೆ ಎಲ್ಲ ಅನುಮಾನಗಳು ಮತ್ತು ಪ್ರಶ್ನೆಗಳನ್ನು ತಲೆಕೆಳಗೆ ಮಾಡುವಂತೆ ವಿಹಾರಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು.  ಆರ್ ಅಶ್ವಿನ್ ಜೊತೆಗೂಡಿದ ವಿಹಾರಿ ಅಕ್ಷರಶಃ ಆಸಿಸ್ ಬೌಲರ್ ಗಳ ಬೆವರಿಳಿಸಿ, ತಾಳ್ಮೆಯ ಪರೀಕ್ಷೆ ಮಾಡಿದ್ದರು. 

ಮೊಣಕಾಲಿನ ಗಾಯದ ನಡುವೆಯೇ ಕ್ರೀಸ್ ನಲ್ಲಿ  ಗಟ್ಟಿಯಾಗಿ ನೆಲೆಯೂರಿದ್ದ ವಿಹಾರಿ, ಬರೊಬ್ಬರಿ 3 ಗಂಟೆಗಳ ಕಾಲ ಮ್ಯಾರಥಾನ್ ಇನ್ನಿಂಗ್ಸ್ ಆಡಿದ್ದರು. ವಿಹಾರಿಗೆ ಆರ್ ಅಶ್ವಿನ್ ಕೂಡ ಅತ್ಯುತ್ತಮ ಸಾಥ್ ನೀಡಿದ್ದರು.

ಅಶ್ವಿನ್ ಗೂ ಗಾಯದ ಸಮಸ್ಯೆ ಇತ್ತು
ಇನ್ನು ಸಿಡ್ನಿ ಟೆಸ್ಟ್ ಹೀರೋಗಳಲ್ಲಿ ಒಬ್ಬರಾದ ಆರ್ ಅಶ್ವಿನ್ ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದರು. 4ನೇ ದಿನದಾಟದ ವೇಳೆ ಬೆನ್ನುನೋವಿಗೆ ತುತ್ತಾಗಿದ್ದ ಅಶ್ವಿನ್ ರಾತ್ರಿ ಇಡೀ ತೀವ್ರ ನೋವು ಅನುಭವಿಸಿದ್ದರಂತೆ. ಈ ವಿಚಾರವನ್ನು ಅವರ ಪತ್ನಿ ಪ್ರಿತಿ ಸಾಮಾಜಿಕ ಜಾಲತಾಣಗಳಲ್ಲಿ  ಬಹಿರಂಗಪಡಿಸಿದ್ದಾರೆ. ನಾಲ್ಕನೇ ದಿನದಾಟದ ಬಳಿಕ ಅಶ್ವಿನ್ ತೀವ್ರ ಬೆನ್ನುನೋವಿಗೆ ತುತ್ತಾಗಿದ್ದರು. ರಾತ್ರಿ ಅತೀವ ನೋವಿನೊಂದಿಗೆ ಮಲಗಿದ್ದ ಅಶ್ವಿನ್ ಬೆಳಗ್ಗೆ ಎದ್ದಾಗ ಅವರಿಗೆ ತಮ್ಮ ಶೂಲೇಸ್ ಕಟ್ಟಲೂ ಕೂಡ ಬಗ್ಗಲಾಗದ ಪರಿಸ್ಥಿತಿ ಇತ್ತು. ಅಶ್ವಿನ್ ಗೆ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದಿನ ಆಟದ ಬಳಿಕ ನಿಜ್ಕೂ ನನಗೆ ಅಚ್ಚರಿಯಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ವಿಹಾರಿ-ಅಶ್ವಿನ್ 256 ಎಸೆತಗಳ ಮುರಿಯದ ಜೊತೆಯಾಟ
256 ಎಸೆತಗಳಲ್ಲಿ ಮುರಿಯದ ಆರನೇ ವಿಕೆಟ್‌ಗೆ ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ 62 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ್ದರು. ಈ ಮೂಲಕ ಆಸೀಸ್ ನೆಲದಲ್ಲಿ ಆರನೇ ವಿಕೆಟ್‌ಗೆ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಸರಣಿಯಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜ ಆರನೇ ವಿಕೆಟ್‌ಗೆ 244 ಎಸೆತಗಳನ್ನು ಎದುರಿಸಿದ್ದರು. ಈ ಸಾಧನೆಯನ್ನೀಗ ವಿಹಾರಿ-ಅಶ್ವಿನ್ ಜೋಡಿ ಮೀರಿಸಿದೆ. ಅಂತೆಯೇ 128 ಎಸೆತಗಳನ್ನು ಎದುರಿಸಿದ ರವಿಚಂದ್ರನ್ ಅಶ್ವಿನ್ ಏಳು ಬೌಂಡರಿಗಳ ನೆರವಿನಿಂದ ಅಜೇಯ 39 ರನ್ ಗಳಿಸಿದ್ದರು. ಈ ಮೂಲಕ ಮ್ಯಾಚ್ ಸೇವಿಂಗ್ ಇನ್ನಿಂಗ್ಸ್ ಕಟ್ಟುವ ಮೂಲಕ ಬ್ಯಾಟಿಂಗ್‌ಗೂ ಸೈ ಎನಿಸಿಕೊಂಡಿದ್ದಾರೆ.

ಮುಕ್ತಕಂಠದಿಂದ ಶ್ಲಾಘಿಸಿದ ಕ್ಯಾಪ್ಟನ್ ರಹಾನೆ
ಇನ್ನು ಅಶ್ವಿನ್ ಮತ್ತು ವಿಹಾರಿ ಆಟವನ್ನು ನಾಯಕ ಅಜಿಂಕ್ಯ ರಹಾನೆ ಮುಕ್ತಕಂಠದಿಂದ ಶ್ಲಾಘಿಸಿದ್ದು, ಫಲಿತಾಂಶ ಏನೇ ಆಗಿರಲಿ ಪಂದ್ಯದ ಅಂತಿಮ ಕ್ಷಣದವರೆಗೂ ನಾವು ಕಠಿಣ ಹೋರಾಟವನ್ನು ನೀಡಬೇಕು ಎಂದು ನಾಲ್ಕನೇ ದಿನದಾಟದ ಬಳಿಕ ತಂಡ ನಿರ್ಧರಿಸಿತ್ತು. ಪಂದ್ಯದ ಆರಂಭಕ್ಕೂ ಮುನ್ನ ನಾವು ನಮ್ಮ ಪಾತ್ರವನ್ನು ನಿರ್ವಹಿಸುವುದು ಹಾಗೂ ಕೊನೆಯವರೆಗೂ ಹೋರಾಡುವುದನ್ನು ಗುರಿಯಾಗಿಸಿಕೊಂಡೆವು. ಫಲಿತಾಂಶದ ಬಗ್ಗೆ ಚಿಂತೆ ಮಾಡಲಿಲ್ಲ. ಇಂದು ನಾವು ಹೋರಾಡಿದ ರೀತಿ ಹಾಗೂ ಪಂದ್ಯದುದ್ದಕ್ಕೂ ನೀಡಿದ ಪ್ರದರ್ಶನ ಶ್ರೇಷ್ಠವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲೂ ಆಸ್ಟ್ರೇಲಿಯಾ 200 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಲ್ಲಿಂದ 338 ರನ್‌ಗಳಿಗೆ ಆಲೌಟ್ ಮಾಡಲು ಸಾಧ್ಯವಾಗಿದ್ದು ನಿಜಕ್ಕೂ ಶ್ರೇಷ್ಠವಾಗಿದೆ.  ನಾವು ಕೆಲ ವಿಭಾಗಗಳಲ್ಲಿ ನಾವು ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಹನುಮ ವಿಹಾರಿ ಹಾಗೂ ಆರ್ ಅಶ್ವಿನ್ ಅವರು ಬ್ಯಾಟಿಂಗ್ ಮಾಡಿದ ರೀತಿ ಹಾಗೂ ಅವರು ತೋರಿದ ಪಾತ್ರ ನಿರ್ವಹಣೆ ನಿಜಕ್ಕೂ ಅದ್ಭುತವಾಗಿತ್ತು. ಕಳೆದ ಮೂರು ಪಂದ್ಯಗಳಲ್ಲಿ ವಿಹಾರಿ ಆಡಿದ್ದರೂ ಅಂದುಕೊಂಡಷ್ಚು ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ವಿಹಾರಿ ಸಾಮರ್ಥ್ಯ ಏನು ಎಂಬುದು ಸಾಬೀತಾಗಿದೆ.  ರಿಷಬ್ ಪಂತ್ ಬ್ಯಾಟಿಂಗ್ ಪ್ರದರ್ಶನ ಅಂತಿಮ ದಿನ ಭಾರತ ಗುರಿ ಬೆನ್ನಟ್ಟುವ ವೇಳೆ ಪಂದ್ಯದ ಗತಿಯನ್ನು ಬದಲಾಯಿಸಿತ್ತು ಎಂದು ರಹಾನೆ ಹೇಳಿದ್ದಾರೆ. 

ಇನ್ನು ಇದೇ ವೇಳೆ ಮಾತನಾಡಿದ ವಿಹಾರಿ ನಾನು ಗಾಯಗೊಳ್ಳದೇ ಹೋಗಿದಿದ್ದರೆ ಮತ್ತು ಪೂಜಾರ ಇನ್ನೊಂದಿಷ್ಟು ಸಮಯ ಕ್ರೀಸ್ ನಲ್ಲಿದ್ದಿದ್ದರೆ ಪಂದ್ಯದ ಫಲಿತಾಂಶ ಬೇರೆಯಾಗಿರುತ್ತಿತ್ತೇನೋ.. ಆದರೂ ಡ್ರಾ ಕೂಡ ಉತ್ತಮ ಫಲಿತಾಂಶ ಎಂದು ನಾನು ಭಾವಿಸುತ್ತೇನೆ ಎಂದು  ಹೇಳಿದ್ದಾರೆ.
 

Stay up to date on all the latest ಕ್ರಿಕೆಟ್ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp