
ಸಿಡ್ನಿ ಟೆಸ್ಟ್
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯ ವಿರೋಚಿತ ಡ್ರಾದಲ್ಲಿ ಅಂತ್ಯಗೊಂಡರೂ ಭಾರತದ ಮ್ಯಾರಥಾನ್ ಇನ್ನಿಂಗ್ಸ್ ಹಲವು ದಾಖಲೆಗಳನ್ನು ಬರೆದಿದೆ.
ಹೌದು.. ಟೆಸ್ಟ್ ಕ್ರಿಕೆಟ್ ನೈಜ ಸೌಂದರ್ಯವನ್ನು ಜಗತ್ತಿಗೆ ನಿರೂಪಿಸಿದ ಪಂದ್ಯಗಳ ಪಟ್ಟಿಗೆ ನಿನ್ನೆ ಅಂತ್ಯವಾದ ಭಾರತ ಮತ್ತು ಆಸ್ಚ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಕೂಡ ಸೇರಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 4ನೇ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 131 ಓವರ್ ಗಳನ್ನು ಆಡಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇದು ಜಾಗತಿಕ ಕ್ರಿಕೆಟ್ ನ ದಾಖಲೆಯಾಗಿದೆ.
ಬಹುಶ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಡ್ರಾ ಫಲಿತಾಂಶ ದಾಖಲಿಸಲಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕೊನೆಯ ದಿನದಾಟದಲ್ಲಿ 407 ರನ್ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 131 ಓವರ್ಗಳ ಮ್ಯಾರಥಾನ್ ಇನ್ನಿಂಗ್ಸ್ ಬೆಳೆಸುವ ಮೂಲಕ ಸಂಭವನೀಯ ಸೋಲನ್ನು ತಪ್ಪಿಸಿದೆ. ಚೇತೇಶ್ವರ ಪೂಜಾರ, ರಿಷಭ್ ಪಂತ್, ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟದ ಬೆಂಬಲದೊಂದಿಗೆ ಐದನೇ ದಿನದಾಟದ ಓವರ್ ಗಳುಸೇರಿದಂತೆ ಒಟ್ಟು 131 ಓವರ್ಗಳನ್ನು ಎದುರಿಸಿರುವ ಭಾರತ ತಂಡವು ಅಮೋಘ ಸಾಧನೆ ಮಾಡಿದೆ. ಇದು ಪಂದ್ಯವೊಂದನ್ನು ಡ್ರಾಗೊಳಿಸಲು ಅಂತಿಮ ಇನ್ನಿಂಗ್ಸ್ನಲ್ಲಿ ಭಾರತ ಆಡಿರುವ ಐದನೇ ಗರಿಷ್ಠ ಓವರ್ಗಳ ಸಂಖ್ಯೆಯಾಗಿದೆ. 1979ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ 150.5 ಓವರ್ಗಳನ್ನು ಎದುರಿಸಿರುವುದು ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.
ಏಷ್ಯಾ ತಂಡದ ಶ್ರೇಷ್ಠ ಸಾಧನೆ
ಈ ಮಧ್ಯೆ ಆಸ್ಟ್ರೇಲಿಯಾ ನೆಲದಲ್ಲಿ ಪಂದ್ಯವನ್ನು ಡ್ರಾಗೊಳಿಸಲು ಏಷ್ಯಾ ತಂಡವೊಂದರಿಂದ ದಾಖಲಾದ ಶ್ರೇಷ್ಠ ಪ್ರದರ್ಶನ ಇದಾಗಿದೆ. ಈ ಹಿಂದೆ 2014/15ನೇ ಇಸವಿಯಲ್ಲಿ ಇದೇ ಸಿಡ್ನಿ ಮೈದಾನದಲ್ಲಿ 89.5 ಓವರ್ಗಳನ್ನು ಬ್ಯಾಟಿಂಗ್ ಮಾಡಿರುವ ಭಾರತ ಈಗ 131 ಓವರ್ಗಳನ್ನು ಎದುರಿಸುವ ಮೂಲಕ ತನ್ನದೇ ದಾಖಲೆಯನ್ನು ಉತ್ತಮಪಡಿಸಿದೆ. ಅಂದ ಹಾಗೆ 1980ನೇ ಇಸವಿಯ ಬಳಿಕ ಭಾರತ ತಂಡವು ನಾಲ್ಕನೇ ಇನ್ನಿಂಗ್ಸ್ನಲ್ಲಿ ಇದೇ ಮೊದಲ ಬಾರಿಗೆ 131 ಓವರ್ಗಳನ್ನು ಸಮರ್ಥವಾಗಿ ಎದುರಿಸಿದೆ.
ಆಫ್ರಿಕಾ ಹೆಸರಲ್ಲಿ ದಾಖಲೆ
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಅತೀ ಹೆಚ್ಚು ಓವರ್ ಗಳನ್ನು ಆಡಿ ಪಂದ್ಯ ಡ್ರಾ ಮಾಡಿಕೊಂಡ ಶ್ರೇಯ ದಕ್ಷಿಣಆಫ್ರಿಕಾ ಹೆಸರಿನಲ್ಲಿದೆ. 2012ರ ನವೆಂಬರ್ ನಲ್ಲಿ ಇದೇ ಆಸ್ಟ್ಟ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ಆಫ್ರಿಕಾ ತಂಡ 148 ಓವರ್ ಗಳನ್ನು ಆಡಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಓವರ್ ಗಳ ಡ್ರಾ ಪಂದ್ಯವಾಗಿದೆ. ನಂತರದ ಸ್ಥಾನದಲ್ಲಿ ಸಿಡ್ನಿ ಟೆಸ್ಟ್ ಇದ್ದು. 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ-ಆಫ್ರಿಕಾ ವಿರುದ್ಧದ 200ರ ಡೆಸೆಂಬರ್ 16ರ ಪರ್ತ್ ಟೆಸ್ಟ್ ಇದೆ. ಈ ಪಂದ್ಯದಲ್ಲಿ ಆಫಿರ್ಕಾ ತಂಡ 126 ಓವರ್ ಗಳನ್ನು ಆಡಿ ಪಂದ್ಯ ಡ್ರಾ ಮಾಡಿಕೊಂಡಿತ್ತು.