ಐಸಿಸಿ ಟೆಸ್ಟ್ ರ್ಯಾಂಕಿಂಗ್: 2ನೇ ಸ್ಥಾನಕ್ಕೇರಿದ ಸ್ಟೀವ್ ಸ್ಮಿತ್, ಕೊಹ್ಲಿ 3ನೇ ಸ್ಥಾನಕ್ಕೆ ಕುಸಿತ; ಪೂಜಾರಗೆ 8ನೇ ಸ್ಥಾನ
ಸಿಡ್ನಿ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್ ಪಟ್ಟಿ ಪರಿಷ್ಕರಿಸಿದ್ದು, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅಂತೆಯೇ 2ನೇ ಸ್ಥಾನದಲ್ಲಿದ್ದ ಕೊಹ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, 3ನೇ ಸ್ಥಾನದಲ್ಲಿದ್ದ ಸ್ಚೀವ್ ಸ್ಮಿತ್ 2ನೇ ಸ್ಥಾನಕ್ಕೇರಿದ್ದಾರೆ.
Published: 12th January 2021 02:13 PM | Last Updated: 12th January 2021 02:28 PM | A+A A-

ವಿರಾಟ್ ಕೊಹ್ಲಿ-ಸ್ಟೀವ್ ಸ್ಮಿತ್
ದುಬೈ: ಸಿಡ್ನಿ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್ ಪಟ್ಟಿ ಪರಿಷ್ಕರಿಸಿದ್ದು, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಅಂತೆಯೇ 2ನೇ ಸ್ಥಾನದಲ್ಲಿದ್ದ ಕೊಹ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, 3ನೇ ಸ್ಥಾನದಲ್ಲಿದ್ದ ಸ್ಚೀವ್ ಸ್ಮಿತ್ 2ನೇ ಸ್ಥಾನಕ್ಕೇರಿದ್ದಾರೆ.
ಅಗ್ರ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ 919 ಅಂಕಗಳನ್ನು ಹೊಂದಿದ್ದು, ಸ್ಟೀವ್ ಸ್ಮಿತ್ 900 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. ಇನ್ನು 2ನೇ ಸ್ಥಾನದಲ್ಲಿದ್ದ ಭಾರತದ ವಿರಾಟ್ ಕೊಹ್ಲಿ 870 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತ ಆಸಿಸ್ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಚೇತೇಶ್ವರ ಪೂಜಾರ 753 ಅಂಕಗಳೊಂದಿಗೆ 8ನೇ ಸ್ಥಾನಕ್ಕೇರಿದ್ದಾರೆ. ಇನ್ನು ಆರನೇ ಸ್ಥಾನದಲ್ಲಿದ್ದ ಅಜಿಂಕ್ಯ ರಹಾನೆ 756 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದ್ದು, 7ನೇ ಸ್ಥಾನದಲ್ಲಿದ್ದ ಬೆನ್ ಸ್ಟೋಕ್ಸ್ 760 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಅಂತೆಯೇ ಸಿಡ್ನಿ ಟೆಸ್ಟ್ ನಲ್ಲಿ ಕೇವಲ 3 ರನ್ ಗಳಿಂದ ಶತಕ ವಂಚಿತರಾಗಿ, ಭಾರತವನ್ನು ಸೋಲಿನ ಅಪಾಯದಿಂದ ಪಾರು ಮಾಡಿದ್ದ ಭಾರತದ ರಿಷಬ್ ಪಂತ್ ಬರೊಬ್ಬರಿ 19 ಸ್ಥಾನಗಳ ಜಿಗಿತಕಂಡು 26ನೇ ಸ್ಖಾನಕ್ಕೇರಿದ್ದಾರೆ. ಉಳಿದಂತೆ ಸಿಡ್ನಿ ಟೆಸ್ಟ್ ನ ಹೀರೋಗಳಾದ ಹನುಮವಿಹಾರಿ 52 ಮತ್ತು ಆರ್ ಅಶ್ವಿನ್ 89ನೇ ಸ್ಖಾನಕ್ಕೇರಿದ್ದಾರೆ. ಶುಬ್ ಮನ್ ಗಿಲ್ 69ನೇ ಸ್ಥಾನಕ್ಕೇರಿದ್ದಾರೆ.
ಇತ್ತ ಬೌಲರ್ ಗಳ ಶ್ರೇಯಾಂಕದಲ್ಲಿ ಪ್ಯಾಟ್ ಕಮಿನ್ಸ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಇಂಗ್ಲೆಂಡ್ ಸ್ಟುವರ್ಟ್ ಬ್ರಾಡ್ 2 ಮತ್ತು ನ್ಯೂಜಿಲೆಂಡ್ ನೀಲ್ ವ್ಯಾಗ್ನರ್ 3ನೇ ಸ್ಥಾನದಲ್ಲಿದ್ದಾರೆ. ಆರ್ ಅಶ್ವಿನ್ 2 ಸ್ಥಾನ ಕುಸಿತಕಂಡಿದ್ದು, 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬುಮ್ರಾ ಕೂಡ ಒಂದು ಸ್ಥಾನ ಕುಸಿತಕಂಡಿದ್ದು, 10 ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಬೌಲರ್ ಗಳ ರ್ಯಾಂಕಿಂಗ್ ನ ಟಾಪ್ 10 ಪಟ್ಟಿಯಲ್ಲಿ ಮತ್ತಾವುದೇ ಭಾರತೀಯ ಬೌಲರ್ ಗಳು ಸ್ಥಾನ ಪಡೆದಿಲ್ಲ.