
ಸಂಗ್ರಹ ಚಿತ್ರ
ನವದೆಹಲಿ: 2021ರ ಐಪಿಎಲ್ ಗೂ ಮುನ್ನ ಆಟಗಾರರ ಹರಾಜು ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಲೀಗ್ ಸಂಘಟಕರು ಬುಧವಾರ ಪ್ರಕಟಿಸಿದ್ದಾರೆ.
"ಫೆಬ್ರವರಿ 18ರಂದು 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಐಪಿಎಲ್ನ ಟ್ವಿಟರ್ ಹ್ಯಾಂಡಲ್ ಮೂಲಕ ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚೆನ್ನೈನಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳ ನಂತರ "ಮಿನಿ ಹರಾಜು" ನಡೆಯಲಿದೆ.
ಸರಣಿ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 5ರಿಂದ 9ರವರಗೆ ನಡೆಯಲಿದ್ದು ಎರಡನೇ ಟೆಸ್ಟ್ ಫೆಬ್ರವರಿ 13ರಿಂದ 17ರವರೆಗೆ ನಡೆಯಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪದೇ ಪದೇ ಪ್ರತಿಪಾದಿಸಿದರೂ ಭಾರತದಲ್ಲಿ ಐಪಿಎಲ್ ನಡೆಯುತ್ತದೆಯೇ ಎಂದು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ.
ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ 13ನೇ ಆವೃತ್ತಿಯನ್ನು ಯುಎಇಯಲ್ಲಿ ಸೆಪ್ಟೆಂಬರ್-ನವೆಂಬರ್ನಲ್ಲಿ ನಡೆಸಲಾಯಿತು.
ಆಸ್ಟ್ರೇಲಿಯಾದ ಅಗ್ರ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ನಿಂದ ಕ್ರಮವಾಗಿ ಬಿಡುಗಡೆ ಮಾಡಲಾಯಿತು. ಒಟ್ಟು 139 ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿದ್ದು, 57 ಆಟಗಾರರನ್ನು ಬಿಡುಗಡೆ ಮಾಡಲಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಅತಿದೊಡ್ಡ ಮೊತ್ತ(53.20 ಕೋಟಿ ರೂ.)ದೊಂದಿಗೆ ಹರಾಜಿನಲ್ಲಿ ಪ್ರವೇಶಿಸಲಿದ್ದು, ನಂತರದ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (35.90 ಕೋಟಿ ರೂ.) ಮತ್ತು ರಾಜಸ್ಥಾನ್ ರಾಯಲ್ಸ್ (34.85 ಕೋಟಿ ರೂ.) ಇದೆ. ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಹರಾಜಿನಲ್ಲಿ ತಲಾ 10.75 ಕೋಟಿ ರೂ.ನೊಂದಿಗೆ ಅತಿ ಕಡಿಮೆ ಮೊತ್ತ ಹೊಂದಿದೆ.