ಐಪಿಎಲ್ ಟೂರ್ನಿಗೆ ಪಿಚ್ ಗಳ ಅತಿಯಾದ ಬಳಕೆಯಿಂದ ಟಿ20 ವಿಶ್ವಕಪ್ ಗೆ ತೊಂದರೆ: ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಚರ್
ಐಪಿಎಲ್ ಪಂದ್ಯವಾಳಿ ಮುಂದುವರೆಸುವುದರಿಂದ ಟಿ20 ವಿಶ್ವಕಪ್ ಟೂರ್ನಿಗೆ ತೊಂದರೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.
Published: 05th July 2021 04:57 PM | Last Updated: 05th July 2021 05:43 PM | A+A A-

ಮಾರ್ಕ್ ಬೌಷರ್
ನವದೆಹಲಿ: ಐಪಿಎಲ್ ಪಂದ್ಯವಾಳಿ ಮುಂದುವರೆಸುವುದರಿಂದ ಟಿ20 ವಿಶ್ವಕಪ್ ಟೂರ್ನಿಗೆ ತೊಂದರೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.
ESPNcricinfoಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಅರಬ್ ಸಂಯುಕ್ತ ರಾಷ್ಟ್ರ (ಯುಎಇ)ಗಳ ಕ್ರಿಕೆಟ್ ಮೈದಾನಗಳಲ್ಲಿ ಐಪಿಎಲ್ ಪಂದ್ಯ ನಡೆಸಿದರೆ ಅಲ್ಲಿನ ಪಿಚ್‍ಗಳು ಹಾಳಾಗಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಪಿನ್ನರ್‍ಗಳಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ತಡೆ ಸ್ಥಗಿತವಾಗಿದ್ದ ಐಪಿಎಲ್ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ಭಾರತ ತೀರ್ಮಾನಿಸಿದೆ. ಇದರ ಜತೆಗೆ ಟಿ20 ವಿಶ್ವಕಪ್ ಪಂದ್ಯಾವಳಿಗಳು ಅರಬ್ ರಾಷ್ಟ್ರದಲ್ಲೇ ನಡೆಯುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
'ಐಪಿಎಲ್ ನಂತರ ಮೈದಾನ ಪಿಚ್ ಗಳು ಒಣಗಿ ಹೋಗಲಿವೆ. ವಿಕೆಟ್‌ಗಳು ಸ್ವಲ್ಪ ಒಣಗಲಿವೆ. ನಾವು ದಕ್ಷಿಣ ಆಫ್ರಿಕಾದಲ್ಲಿ ಬಳಸಿದಂತಹ ಪಿಚ್ ಗಳು ಇದಾಗಿರುವದಿಲ್ಲ. ಅಲ್ಲಿ ನೀವು 180 ರಿಂದ 200 ರನ್ ಗಳಿಸಬಹುದಿತ್ತು. ಆದರೆ ಇಲ್ಲಿ ನೀವು ಕೌಶಲ್ಯ ಹೊಂದಿರಬೇಕು; ನೀವು ಸ್ಮಾರ್ಟ್ ಆಗಿರಬೇಕು. ಇಂತಹ ಪರಿಸ್ಥಿತಿಯಲ್ಲಿ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗಲಿದ್ದು, ಉಪಖಂಡದ ಆಟಗಾರರಿಗೆ ನೆರವಾಗುತ್ತದೆ. ಇಲ್ಲಿ ಹೆಚ್ಚು ಮೈದಾನಗಳಿಲ್ಲ. ಹೀಗಾಗಿ ಖಂಡಿತಾ ಪಿಚ್ ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪಿಚ್ ಗಳು ಸತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ಸ್ಕೋರ್‌ಗಳು ಇನ್ನಷ್ಟು ಕೆಳಕ್ಕೆ ಹೋಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇಂತಹ ವಾತಾವರಣದಲ್ಲಿ ಬ್ಯಾಟಿಂಗ್ ಕಠಿಣವಾಗುವುದರಿಂದ ಸ್ಪಿನ್ನರ್‌ಗಳು ಪ್ರಬಲರಾಗುತ್ತಾರೆ. ನಾವು ಮೊದಲು ಐಪಿಎಲ್ ನೋಡಿ ಅಲ್ಲಿ ದಾಖಲಾಗುವ ಸ್ಕೋರ್ ಗಳನ್ನು ವಿಶ್ಲೇಷಿಸಿ ತಯಾರಿ ನಡೆಸಬೇಕಿದೆ. ಇಲ್ಲಿ ಸ್ಪಿನ್ನರ್ ಗಳು ಖಂಡಿತಾ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನನಗನ್ನಿಸುತ್ತಿದೆ ಎಂದು ಬೌಚರ್ ಹೇಳಿದರು.
ಇನ್ನು ಈ ಹಿಂದೆ ಗ್ರೆನಡಾದ ಸೇಂಟ್ ಜಾರ್ಜ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯನ್ನು ದಕ್ಷಿಣ ಆಫ್ರಿಕಾ 3-2 ಅಂತರದಿಂದ ಜಯಿಸಿತ್ತು. ಈ ಸರಣಿಯಲ್ಲಿ ಆಫ್ರಿಕಾದ ಎಡಗೈ ಸ್ಪಿನ್ನರ್ ತಬ್ರೇಜ್ ಶಮ್ಸಿ ಏಳು ವಿಕೆಟ್ ಗಳಿಸಿದ್ದರು.
ಮುಂಬರುವ ಸೆ.19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ಟೂರ್ನಿಯ ಬಾಕಿಪಂದ್ಯಗಳು ನಡೆದರೆ, ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ.