ಉತ್ತಮ ಆಟವಾಡುವ ಮನಸ್ಥಿತಿಯುಳ್ಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು: WTC ಫೈನಲ್ ಸೋಲಿನ ಬೆನ್ನಲ್ಲೇ ಕೊಹ್ಲಿ ಗರಂ

ಸೌಥ್ಯಾಂಪ್ಟನ್ ನಲ್ಲಿ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟಗಾರರ ವಿರುದ್ಧ ಗರಂ ಆಗಿದ್ದು, ಉತ್ತಮ ಆಟವಾಡುವ ಮನಸ್ಥಿತಿಯುಳ್ಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಆಟಗಾರರ ಆಯ್ಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published: 24th June 2021 01:13 PM  |   Last Updated: 24th June 2021 01:17 PM   |  A+A-


Kohli

ಕೊಹ್ಲಿ

Posted By : Srinivasamurthy VN
Source : PTI

ಸೌಥ್ಯಾಂಪ್ಟನ್: ಸೌಥ್ಯಾಂಪ್ಟನ್ ನಲ್ಲಿ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟಗಾರರ ವಿರುದ್ಧ ಗರಂ ಆಗಿದ್ದು, ಉತ್ತಮ ಆಟವಾಡುವ ಮನಸ್ಥಿತಿಯುಳ್ಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳುವ ಮೂಲಕ  ಆಟಗಾರರ ಆಯ್ಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಕಂಡ ಬಳಿಕ ಮಾತನಾಡಿದ ಕೊಹ್ಲಿ, 'ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡಕ್ಕೆ ಬೆನ್ನೆಲುಬಾಗಿ ಆಡಬಲ್ಲ ಆಟಗಾರರು ಇರುವಂತೆಯೇ ಟೆಸ್ಟ್​ ಪಂದ್ಯಾವಳಿಗಳಲ್ಲೂ ದೃಢವಾಗಿ ನಿಂತು ತಂಡಕ್ಕೆ ಆಸರೆಯಾಗಬಲ್ಲ ಆಟಗಾರರು ಬೇಕು. ಹೀಗಾಗಿ ಇದಕ್ಕೆ ಸೂಕ್ತ ಮನಸ್ಥಿತಿಯುಳ್ಳ ಆಟಗಾರರನ್ನು ಆರಿಸಬೇಕು ಎಂದು ಹೇಳಿದ್ದಾರೆ. 

ಬದಲಾವಣೆ ನಿಶ್ಚಿತ ಎಂದ ನಾಯಕ
'ಸಮಚಿತ್ತದಿಂದ ಆಡಬಲ್ಲ ಸಮರ್ಥ ಆಟಗಾರರು ಬೇಕು. ನಾವು ತಂಡದ ಅವಶ್ಯಕತೆಗಳೇನು ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಚರ್ಚಿಸುತ್ತೇವೆ. ಜತೆಗೆ, ಒಂದಷ್ಟು ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ಯಾವ ಕಾರಣಕ್ಕೂ ನಿರ್ದಿಷ್ಟ ನಿಯಮಕ್ಕೇ ಜೋತುಬಿದ್ದು ಅದನ್ನೇ ಕಣ್ಣುಮುಚ್ಚಿ  ಪಾಲಿಸಬೇಕು ಎಂದು ಹೇಳುವುದಿಲ್ಲ. ತಂಡದ ಸಾಮರ್ಥ್ಯ ಹೆಚ್ಚಿಸಲು ಏನೆಲ್ಲಾ ಬದಲಾವಣೆ ಮಾಡಬಹುದು ಎಂದು ಗಮನ ಹರಿಸುವುದು ಅವಶ್ಯಕವಾಗಿದೆ. ಎದುರಾಳಿಗಳನ್ನು ಹಿಮ್ಮೆಟ್ಟಸಲು ಹಾಗೂ ಹೆದರದೇ ಆಟವಾಡಲು ಸಿದ್ಧರಿರುವವರನ್ನು ಕಣಕ್ಕಿಳಿಸಬೇಕು.

ಸೂಕ್ತ ಸ್ಥಿತಿಯಲ್ಲಿ ಸೂಕ್ತ ಮನಸ್ಥಿತಿಯೊಂದಿಗೆ ಆಡುವುದು ಮುಖ್ಯ. ನಮ್ಮ ವೈಟ್​ಬಾಲ್​ ತಂಡವನ್ನೇ ಗಮನಿಸಿದರೆ ಅದು ಎಷ್ಟು ಪ್ರಬಲವಾಗಿದೆ ಎನ್ನುವುದು ಅರ್ಥವಾಗುತ್ತದೆ. ಅಲ್ಲಿ ತಂಡದ ಪ್ರತಿಯೊಬ್ಬರೂ ಅಚಲರಾಗಿ ನಿಲ್ಲಬಲ್ಲರು ಹಾಗೂ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಸೆಣೆಸಬಲ್ಲರು. ಇಲ್ಲಿಯೂ ಅದೇ ಮನೋಭಾವ ಬೇಕಾಗಿದೆ. ಹೀಗಾಗಿ ಬದಲಾವಣೆ ಜಾರಿ ಮಾಡಲು ಇನ್ನೂ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಎಂದೆಲ್ಲಾ ಕಾಯುವುದಿಲ್ಲ. ಅತಿ ಶೀಘ್ರದಲ್ಲೇ ಕೊರತೆಗಳನ್ನು ನೀಗಿಸುವತ್ತ ಹೆಜ್ಜೆ ಹಾಕುತ್ತೇವೆ ಎಂದು ಹೇಳಿದ್ದಾರೆ.

ಬ್ಯಾಟಿಂಗ್ ವೈಫಲ್ಯ
ರನ್​ ಗಳಿಕೆ ಬಗ್ಗೆಯೂ ಮಾತನಾಡಿರುವ ನಾಯಕ ಕೊಹ್ಲಿ, ನಾವು ಮೊದಲ ಇನ್ನಿಂಗ್ಸ್​ನಲ್ಲಿ 217ರನ್​ ಗಳಿಸಲಷ್ಟೇ ಸಾಧ್ಯವಾಯಿತು. ಎರಡನೇ ಪ್ರಯತ್ನದಲ್ಲಿ 170 ಗಳಿಸುವಷ್ಟರಲ್ಲಿ ಕೈ ಚೆಲ್ಲುವಂತಾಯಿತು. ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಿದೆ. ಆಟವನ್ನು ಸಮರ್ಪಕವಾಗಿ ನಿಭಾಯಿಸುವುದು  ಮುಖ್ಯವಾಗಿರುವುದರಿಂದ ಅದು ನಮ್ಮ ಕೈ ತಪ್ಪಿ ಹೋಗಲು ಬಿಡಬಾರದು. ಇವೆಲ್ಲಾ ನಮಗೆ ಅಸಾಧ್ಯವಾದ ವಿಚಾರಗಳೇನಲ್ಲ. ಆದರೆ, ಒಂದಷ್ಟು ಅವಲೋಕಿಸುವುದು ಅವಶ್ಯಕತೆ ಇದೆಯಷ್ಟೇ. ಬೌಲರ್​ಗಳನ್ನು ಕಟ್ಟಿಹಾಕುವತ್ತ ನಾವು ಎಚ್ಚರ ವಹಿಸಬೇಕು.

ಒಂದೇ ಕಡೆಗೆ ಅವರು ಹೆಚ್ಚು ಹೊತ್ತು ಬಾಲ್​ ಎಸೆಯಲು ಅವಕಾಶ ಕೊಡಬಾರದು. ಅವರ ಮೇಲೆ ಒತ್ತಡ ತರುವಂತೆ ಪದೇ ಪದೇ ಉತ್ತಮ ಆಟ ಪ್ರದರ್ಶಿಸಿದರೆ ಎದುರಾಳಿ ತಂಡದ ಬೌಲರ್​ಗಳನ್ನು ನಿಯಂತ್ರಿಸಬಹುದು. ಕೆಲವೊಂದು ಸಂದರ್ಭದಲ್ಲಿ ಔಟ್​ ಆಗದೇ ನಿಲ್ಲುವುದು ಎಷ್ಟು ಮುಖ್ಯವೆನಿಸುತ್ತದೋ ಅಷ್ಟೇ ಮುಖ್ಯ ನ್ಯೂಜಿಲೆಂಡ್​ನಂತಹ ತಂಡಗಳ ವಿರುದ್ಧ ಔಟ್​ ಆಗುವುದರ ಬಗ್ಗೆ ಚಿಂತಿಸದೇ ಆಡುವುದೂ ಆಗಿರುತ್ತದೆ. ಪರಿಸ್ಥಿತಿ ನಮಗೆ ಪೂರಕವಾಗಬೇಕೆಂದರೆ ಲೆಕ್ಕಾಚಾರ ಹಾಕಿ ಕೆಲ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರಬೇಕು ಎಂದು ಕೊಹ್ಲಿ ಸಲಹೆ ನೀಡಿದ್ದಾರೆ. 

ಟೆಸ್ಟ್ ಕ್ರೆಕೆಟ್ ಗೆ ಅತ್ಯಂತ ಮಹತ್ವವಿದೆ
ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅದ್ಭುತವಾಗಿದೆ ಹಾಗೂ ದೀರ್ಘ ಸ್ವರೂಪದ ಮಹತ್ವವನ್ನು ಉಳಿಸಿಕೊಳ್ಳಲು ಇದು ಅತ್ಯಂತ ಮಹತ್ವದ ಮಾರ್ಗವಾಗಿದೆ. ಈ ಸ್ವರೂಪವು ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್ ರೋಚಕವಾಗಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇನೆ. ಡಬ್ಲ್ಯುಟಿಸಿ ಫೈನಲ್‌ ತಲುಪುವ ಕಾರಣದಿಂದ ಎಲ್ಲಾ ಟೆಸ್ಟ್ ಪಂದ್ಯಗಳು ಆಸಕ್ತಿಯಿಂದ ಕೂಡಿರುತ್ತವೆ. ಐಸಿಸಿಯ ದಿಟ್ಟ ಹೆಜ್ಜೆ ಇದಾಗಿದೆ ಎಂದು ಐಸಿಸಿಯ ಪ್ರಯತ್ನವನ್ನು ಕೊಹ್ಲಿ ಶ್ಲಾಘಿಸಿದರು.


Stay up to date on all the latest ಕ್ರಿಕೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp