ಇಂಗ್ಲೆಂಡ್ ನಲ್ಲಿ ಬಯೋಬಬಲ್ ಉಲ್ಲಂಘನೆ: ಮೂರು ಶ್ರೀಲಂಕಾ ಕ್ರಿಕೆಟಿಗರ ಅಮಾನತು
ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟಿಗರು ಬಯೋಬಬಲ್ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಮೂರು ಲಂಕಾ ಕ್ರಿಕೆಟಿಗರನ್ನು ಟೂರ್ನಿಯಿಂದ ಅಮಾನತು ಮಾಡಲಾಗಿದೆ.
Published: 28th June 2021 04:57 PM | Last Updated: 28th June 2021 05:24 PM | A+A A-

ಸಂಗ್ರಹ ಚಿತ್ರ
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟಿಗರು ಬಯೋಬಬಲ್ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಮೂರು ಲಂಕಾ ಕ್ರಿಕೆಟಿಗರನ್ನು ಟೂರ್ನಿಯಿಂದ ಅಮಾನತು ಮಾಡಲಾಗಿದೆ.
ಮೂಲಗಳ ಪ್ರಕಾರ ಶ್ರೀಲಂಕಾ ಬ್ಯಾಟ್ಸ್ ಮನ್ ಗಳಾದ ಕುಶಾಲ್ ಮೆಂಡಿಸ್ ಮತ್ತು ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಸೇರಿದಂತೆ ಮೂವರು ಆಟಗಾರರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಅವರನ್ನು ಕೂಡಲೇ ದೇಶಕ್ಕೆ ಹಿಂದಿರುಗುವಂತೆ ಆದೇಶಿಸಲಾಗಿದೆ.
ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ 20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ಭಾನುವಾರ ರಾತ್ರಿ ಶ್ರೀಲಂಕಾ ತಂಡದ ಓಪನರ್ ದನುಷ್ಕಾ ಗುಣತಿಲಕಾ ಅವರೊಂದಿಗೆ ಕುಶಾಲ್ ಮೆಂಡಿಸ್ ಮತ್ತು ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಡರ್ಹಾಮ್ ಬೀದಿಗಳಲ್ಲಿ ಓಡಾಡಿದ್ದರು. ಈ ಮೂವರೂ ಆಟಗಾರರು ಲಂಕಾ ತಂಡದ ಆಡುವ 11 ಆಟಗಾರರ ತಂಡದ ಭಾಗವಾಗಿದ್ದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಅವರು, ಬಯೋಬಬಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಕಾರ್ಯಕಾರಿ ಸಮಿತಿ ಕುಶಾಲ್ ಮೆಂಡಿಸ್, ದನುಷ್ಕಾ ಗುಣತಿಲಕ ಮತ್ತು ನಿರೋಶನ್ ಡಿಕ್ವೆಲ್ಲಾ ಅವರನ್ನು ಅಮಾನತುಗೊಳಿಸಿದೆ ಮತ್ತು ಅವರನ್ನು ತಕ್ಷಣ ಶ್ರೀಲಂಕಾಕ್ಕೆ ಕರೆಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಂತೆಯೇ ಶ್ರೀಲಂಕಾದ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ ವಿಡಿಯೋಗೆ ಪ್ರತಿಕ್ರಿಯಿಸಿದ ಎಸ್‌ಎಲ್‌ಸಿ ಮುಖ್ಯಸ್ಥ ಶಮ್ಮಿ ಸಿಲ್ವಾ, "ಆಟಗಾರರು (ನೀತಿ ಸಂಹಿತೆ) ಉಲ್ಲಂಘಿಸಿರುವುದರಿಂದ ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.