'ಖೇಲ್ ರತ್ನ' ಪ್ರಶಸ್ತಿಗೆ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಮಿಥಾಲಿ ರಾಜ್ ಹೆಸರು ಶಿಫಾರಸು

ಭಾರತದ ಅತ್ಯುನ್ನತ ಕ್ರೀಡಾ ಪ್ತಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.
ಆರ್ ಅಶ್ವಿನ್, ಮಿಥಾಲಿ ರಾಜ್
ಆರ್ ಅಶ್ವಿನ್, ಮಿಥಾಲಿ ರಾಜ್

ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪ್ತಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಎಎನ್‌ಐ ಸುದ್ದಿ ಸಂಸ್ಥೆ ಪ್ರಕಾರ, ಕೆ.ಎಲ್. ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ಶಿಖರ್ ಧವನ್ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತದೆ.

34 ವರ್ಷದ ಬಲಗೈ ಆಫ್ ಬ್ರೇಕರ್ 2010 ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದ ಇದುವರೆಗೆ 79 ಟೆಸ್ಟ್, 111 ಏಕದಿನ ಮತ್ತು 46 ಅಂತರಾಷ್ಟ್ರೀಯ ಟಿ20ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಇತ್ತೀಚೆಗೆ, ಮಿಥಾಲಿ 22 ವರ್ಷಗಳಿಗಿಂತ ಹೆಚ್ಚು ಕಾಲ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಹೊಂದಿರುವ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿಎಂಬ ಹೆಗ್ಗಳಿಕೆಗೆ ಪಾತ್ರರಾದರು. 38 ವರ್ಷದ ಈಕೆ ಜೂನ್ 26, 1999 ರಂದು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ (22 ವರ್ಷ 91 ದಿನಗಳು) ಮಾತ್ರವೇ ಪುರುಷರ ವಿಭಾಗದಲ್ಲಿ ಮಿಥಾಲಿ ರಾಜ್ ಅವರಿಗಿಂತ ಹೆಚ್ಚಿನ ದಿನಗಳ ಕಾಲ ಕ್ರಿಕೆಟ್ ವೃತ್ತಿ ಬದುಕನ್ನು ಹೊಂದಿದರು. ಆದರೆ ಮಹಿಳಾ ಕ್ರಿಕೆಟಿಗರ ಪೈಕಿ 22 ವರ್ಷಗಳವರೆಗೆ ಬೇರೆ ಯಾವುದೇ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿಲ್ಲ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ಕೇಂದ್ರ ಕ್ರೀಡಾ ಸಚಿವಾಲಯ ಈ ಹಿಂದೆ ನಿರ್ಧರಿಸಿತ್ತು. 

ಇನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಫುಟ್ಬಾಲ್ ಆಟಗಾರ ಸುನಿಲ್ ಛೇಟ್ರಿ ಅವರ ಹೆಸರನ್ನು ಈ ಅತ್ಯುನ್ನತ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಒಡಿಶಾ ಸರ್ಕಾರವು ದ್ಯುತಿ ಚಾಂದ್ ಅವರನ್ನು ಖೇಲ್ ರತ್ನ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಿದೆ. ಅಲ್ಲದೆ ಒಡಿಶಾ ಸರ್ಕಾರವು ಇತರ ಐದು ಶಿಫಾರಸುಗಳನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಿದೆ.

2020 ರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಐದು ಜನರಲ್ಲಿ ರೋಹಿತ್ ಶರ್ಮಾ ಕೂಡ ಇದ್ದರು ಇವರು ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಈ ಅತ್ಯುನ್ನತ ಗೌರವಕ್ಕೆ ಪಾತ್ರವಾದ ನಾಲ್ಕನೇ ಕ್ರಿಕೆಟಿಗರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com