ಸಚಿನ್ ತೆಂಡೂಲ್ಕರ್ ಶತಕಗಳ ಶತಕಕ್ಕೆ 9 ವರ್ಷಗಳ ಸಂಭ್ರಮ, ಬಾಂಗ್ಲಾ ವಿರುದ್ಧ ಮೊದಲ, ಏಕದಿನದ ಅಂತಿಮ ಶತಕ!

ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಲೋಕದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ದಿನ ಇಂದು.. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಶತಕ ಸಿಡಿಸಿದ ಜಗತ್ತಿನ ಮೊದಲ ಮತ್ತು ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೆ ಸಚಿನ್ ಭಾಜನವಾಗಿ ಇಂದಿಗೆ 9 ವರ್ಷಗಳು ಕಳೆದಿವೆ.

Published: 16th March 2021 03:27 PM  |   Last Updated: 16th March 2021 04:34 PM   |  A+A-


Sachin Tendulkar-100th international ton

ಸಚಿನ್ ಶತಕಗಳ ಶತಕ

Posted By : Srinivasamurthy VN
Source : PTI

ನವದೆಹಲಿ: ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಲೋಕದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ದಿನ ಇಂದು.. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಶತಕ ಸಿಡಿಸಿದ ಜಗತ್ತಿನ ಮೊದಲ ಮತ್ತು ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೆ ಸಚಿನ್ ಭಾಜನವಾಗಿ ಇಂದಿಗೆ 9 ವರ್ಷಗಳು ಕಳೆದಿವೆ.

2012 ಮಾರ್ಚ್ 16ರ ಅಂದಿನ ಇದೇ ದಿನದಂದು ಭಾರತದ ಕ್ರಿಕೆಟ್ ದೇವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ 100ನೇ ಶತಕ ಸಿಡಿಸಿದ್ದರು. ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿದ ವಿಶ್ವದ ಮೊಟ್ಟ ಮೊದಲ ಹಾಗೂ ಏಕ ಮಾತ್ರ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಭಾಜನವಾದರು. 

100ನೇ ಶತಕಕ್ಕಾಗಿ ಬರೊಬ್ಬರಿ 1 ವರ್ಷ ತೆಗೆದುಕೊಂಡ ಸಚಿನ್
ಏಷ್ಯಾಕಪ್ ಗೂ ಮುನ್ನ 99 ಶತಕಗಳನ್ನು ಸಿಡಿಸಿದ್ದ ಸಚಿನ್ 100ನೇ ಶತಕಕ್ಕಾಗಿ ಭರ್ತಿ ಒಂದು ವರ್ಷ ನಾಲ್ಕು ದಿನಗಳಷ್ಟು ಸುದೀರ್ಘ ಕಾಲ ಕಾಯಬೇಕಾಯಿತು. 2011ರಲ್ಲಿ ಏಕದಿನ ವಿಶ್ವಕಪ್‌ನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಾಧನೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಅಲ್ಲಿಂದ ಬಳಿಕ ಅಕ್ಷರಶಃ ಶತಕದ ಬರ ಎದುರಿಸಿದ್ದರು. ಇದರಿಂದಾಗಿ 100ನೇ ಶತಕ ಗಳಿಸಲು ಸಾಧ್ಯವೇ ಎಂಬ ಅನುಮಾನ ಮೂಡಿತ್ತು. ಏಕದಿನ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ದ 85, ಅಲ್ಲಿಂದ ಬಳಿಕ ವಿಂಡೀಸ್ ವಿರುದ್ಧ 94 ಮತ್ತು ಆಸ್ಟ್ರೇಲಿಯಾ ವಿರುದ್ಧ 80 ರನ್ ಗಳಿಸಿ ಔಟಾಗಿದ್ದರು. ಈ ಮೂಲಕ ಶತಕದಂಚಿನಲ್ಲಿ ಎಡವುತ್ತಿದ್ದ ಸಚಿನ್ ತೆಂಡೂಲ್ಕರ್ ಅತೀವ ಒತ್ತಡಕ್ಕೊಳಾಗಿದ್ದರು.  ಕೊನೆಗೂ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದರು. 147 ಎಸೆತಗಳನ್ನು ಎದುರಿಸಿದ ಸಚಿನ್ ತೆಂಡೂಲ್ಕರ್ 12 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 114 ರನ್ ಗಳಿಸಿದರು. ಅಲ್ಲದೆ ಎಂದಿನಂತೆ ಆಕಾಶದತ್ತ ಬ್ಯಾಟ್ ಎತ್ತಿ ತಂದೆಗೆ ತಮ್ಮ ಸಾಧನೆಯನ್ನು ಅರ್ಪಿಸಿದರು. ಈ ಕ್ಷಣ ಭಾರತ ಸೇರಿದಂತೆ ವಿಶ್ವ ಕ್ರಿಕೆಟ್ ಪಾಲಿಗೆ ಅವಿಸ್ಮರಣೀಯವೆನಿಸಿದೆ.

ವಿಶ್ವ ಕ್ರಿಕೆಟ್ ನಲ್ಲಿ ಒಂದರ ನಂತರ ಒಂದರಂತೆ ಅನೇಕ ದಾಖಲೆಗಳನ್ನು ಬರೆದಿರುವ ಲಿಟ್ಲ್ ಮಾಸ್ಟರ್, ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕದ ಮೈಲುಗಲ್ಲು ತಲುಪಿದರು. 

ಮತ್ತೆ ಕಾಡಿದ ದುರಾದೃಷ್ಟ
ಇನ್ನು ಸಚಿನ್ ತೆಂಡೂಲ್ಕರ್ ಶತಕ ಗಳಿಸಿದಾಗೆಲ್ಲ ಭಾರತ ಸೋಲುತ್ತದೆಯೆಂಬ ಕಟ್ಟುಕಥೆಯಿತ್ತು. ದುರದೃಷ್ಟವಶಾತ್ ಏಷ್ಯಾ ಕಪ್‌ನಲ್ಲೂ ಅದೇ ಸಂಭವಿಸಿತ್ತು. ಸಚಿನ್ 100 ಶತಕಗಳ ಸಂಭ್ರಮಕ್ಕೆ ಕಹಿ ಅನುಭವದಂತೆ ಭಾರತ ಐದು ವಿಕೆಟ್ ಅಂತರದಿಂದ ಸೋಲಿಗೆ ಶರಣಾಯಿತು. ಭಾರತ ನೀಡಿದ 293 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ ತಮೀಮ್ ಇಕ್ಬಾಲ್ (70), ಜುಹುರುಲ್ ಇಸ್ಲಾಂ (53), ನಾಸೀರ್ ಹುಸೇನ್ (54), ಶಕಿ ಅಲ್ ಹಸನ್ (49) ಹಾಗೂ ನಾಯಕ ಮುಷ್ಫಿಕರ್ ರಹೀಂ (46) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ ಗೆದ್ದು ಬೀಗಿತು.  

ಬಾಂಗ್ಲಾ ವಿರುದ್ಧ ಮೊದಲ, ಏಕದಿನದ ಅಂತಿಮ ಶತಕ!
ಈ ಪಂದ್ಯದಲ್ಲಿ ಸಚಿನ್ ತಮ್ಮ 100ನೇ ಶತಕ ಸಿಡಿಸಿದರಾದರೂ, ಏಕದಿನ ಕ್ರಿಕೆಟ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ತಾವು ಎದುರಿಸುತ್ತಿದ್ದ ಶತಕ ಬರವನ್ನೂ ನೀಗಿಸಿಕೊಂಡರು. ಹೌದು.. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ಎಲ್ಲ ತಂಡಗಳ ವಿರುದ್ಧ ಶತಕ ಸಿಡಿಸಿದ್ದರು. ಆದರೆ ಕ್ರಿಕೆಟ್ ಶಿಶುವಾಗಿದ್ದ ಬಾಂಗ್ಲಾದೇಶದ ವಿರುದ್ಧ ಏಕದಿನದಲ್ಲಿ ಶತಕ ಸಿಡಿಸಿರಲಿಲ್ಲ. ಈ ಪಂದ್ಯದ ಮೂಲಕ ಆ ದಾಖಲೆಯನ್ನೂ ಕೂಡ ಸಚಿನ್ ತಮ್ಮದಾಗಿಸಿಕೊಂಡರು. ಅಲ್ಲದೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್‌ನಿಂದ ಸಿಡಿದ ಕೊನೆಯ ಶತಕವಾಗಿತ್ತು. 

ಬಳಿಕ 2013 ನವೆಂಬರ್ ತಿಂಗಳಲ್ಲಿ ತಮ್ಮ ಕೊನೆಯ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 74 ರನ್ ಪೇರಿಸಿರುವ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ದಾಖಲೆಯ 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್, 53.78ರ ಸರಾಸರಿಯಲ್ಲಿ 15921 ರನ್ ಪೇರಿಸಿದ್ದಾರೆ. ಹಾಗೆಯೇ 463 ಏಕದಿನ ಪಂದ್ಯಗಳಲ್ಲಿ 44.83ರ ಸರಾಸರಿಯಲ್ಲಿ 18426 ರನ್ ಗಳಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನಗಳಲ್ಲಿ ಅನುಕ್ರಮವಾಗಿ 51 ಹಾಗೂ 49 ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಏಕದಿನದಲ್ಲಿ ದ್ವಿಶತಕ (200*ಅಜೇಯ) ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಭಾಜನವಾಗಿದ್ದಾರೆ. ಟೆಸ್ಟ್‌ನಲ್ಲಿ ಸಚಿನ್ ಗರಿಷ್ಠ ಸ್ಕೋರ್ ಅಜೇಯ 248 ರನ್ ಆಗಿದೆ.

ಸಚಿನ್ ದಾಖಲೆ ಬೆನ್ನತ್ತಿರುವ ಕೊಹ್ಲಿ
ಇನ್ನು ಸಚಿನ್ ತೆಂಡೂಲ್ಕರ್ ಅವರ ಈ ಐತಿಹಾಸಿಕ ದಾಖಲೆಗೆ ಇಂದಿಗೆ 9 ವರುಷಗಳೇ ಸಂದರೂ ಇಲ್ಲಿಯವರೆಗೂ ಯಾರಿಂದಲೂ ಈ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.  ಸಮಕಾಲೀನ ಕ್ರಿಕೆಟಿಗರ ಪೈಕಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 70 ಶತಕಗಳನ್ನು ಸಿಡಿಸಿ ಸಚಿನ್ ದಾಖಲೆಯ ಸನಿಹದಲ್ಲಿದ್ದಾರೆ. ಉಳಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿರುವ ಆಟಗಾರರ ಪಟ್ಟಿಯಲ್ಲಿ 100 ಶತಕಗಳೊಂದಿಗೆ ಸಚಿನ್ ಅಗ್ರಸ್ಥಾನದಲ್ಲಿದ್ದರೆ, 71 ಶತಕ ಸಿಡಿಸಿರುವ ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದಾರೆ. 70 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, 63 ಶತಕಗಳನ್ನು ಸಿಡಿಸಿರುವ ಶ್ರೀಲಂಕಾದ ಕ್ರಿಕೆಟ್ ದಂತಕಥೆ ಕುಮಾರ ಸಂಗಕ್ಕಾರ 4 ಮತ್ತು 62 ಶತಕಗಳನ್ನು ಸಿಡಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ದಂತಕಥೆ ಜಾಕ್ ಕ್ಯಾಲಿಸ್ 5ನೇ ಸ್ಥಾನದಲ್ಲಿದ್ದಾರೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp