ಆಟಗಾರರು, ಸಿಬ್ಬಂದಿಗಳಿಗೆ ಕೊರೋನಾ: ಐಪಿಎಲ್ 2021 ಸರಣಿ ರದ್ದು

ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಅನ್ನು ರದ್ದು ಮಾಡಿದೆ.

Published: 04th May 2021 01:26 PM  |   Last Updated: 04th May 2021 03:14 PM   |  A+A-


Posted By : Raghavendra Adiga
Source : ANI

ನವದೆಹಲಿ: ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಅನ್ನು ರದ್ದು ಮಾಡಿದೆ.

ದೆಹಲಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯಕ್ಕೆ ಮುಂಚಿತವಾಗಿ ಸನ್‌ರೈಸರ್ಸ್ ಹೈದರಾಬಾದ್‌ನ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹಾ ಕೋವಿಡ್-19ಗೆ ಪಾಸಿಟಿವ್ ವರದಿ ಪಡೆದ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಎಸ್‌ಆರ್‌ಹೆಚ್ ತಂಡದ ಮೂಲವೊಂದು ಈ ಬೆಳವಣಿಗೆಯನ್ನು ಪಿಟಿಐಗೆ ದೃಢಪಡಿಸಿದ್ದು ಇದೀಗ ಇಡೀ ತಂಡ ಕ್ವಾರಂಟೈನ್ ನಲ್ಲಿದೆ ಎಂದಿದೆ.

ಈ ಸೀಸನ್ ನ ಐಪಿಎಲ್ ಸರಣಿಯನ್ನು ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಎಎನ್‌ಐಗೆ ತಿಳಿಸಿದ್ದಾರೆ.

ಕೋಲ್ಕತ್ತಾ  ನೈಟ್ ರೈಡರ್ಸ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಬೌಲರ್ ಸಂದೀಪ್ ವಾರಿಯರ್ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟ ನಂತರ ನಿನ್ನೆ ನಡೆಯಬೇಕಿದ್ದ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲಾಗಿತ್ತು.

"ಪಂದ್ಯಾವಳಿಯನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿದೆ. ಮುಂದಿನ ಲಭ್ಯವಿರುವ ಅವಕಾಶದಲ್ಲಿ ನಾವು ಈವೆಂಟ್ ನಡೆಸಲು ಪ್ರಯತ್ನಿಸುತ್ತೇವೆ ಆದರೆ ಪ್ರಸ್ತುತ ತಿಂಗಳು ಅಸಾಧ್ಯವಾಗಿದೆ" ಎಂದು ಲೀಗ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಪಿಟಿಐಗೆ ತಿಳಿಸಿದರು. "ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ (ಐಪಿಎಲ್ ಜಿಸಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತುರ್ತು ಸಭೆಯಲ್ಲಿ ಐಪಿಎಲ್ 2021 ಸೀಸನ್ ಅನ್ನು ರದ್ದು ಮಾಡಲು ಸರ್ವಾನುಮತದಿಂದ ನಿರ್ಧರಿಸಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಟಗಾರರು, ಸಿಬ್ಬಂದಿ ಮತ್ತು ಐಪಿಎಲ್ ಸಂಘಟನೆಯಲ್ಲಿ ಪಾಲ್ಗೊಳ್ಳುವ ಇತರರ ಸುರಕ್ಷತೆಯ ಬಗ್ಗೆ ಬಿಸಿಸಿಐ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಎಲ್ಲಾ ಪಾಲುದಾರರ ಸುರಕ್ಷತೆ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಅದು ಹೇಳಿದೆ. ಈವೆಂಟ್‌ನಲ್ಲಿ ಭಾಗವಹಿಸಿದ್ದ  ಆಟಗಾರರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಲು ಬಿಸಿಸಿಐ ಸಕಲ ನೆರವನ್ನು ನೀಡಲಿದೆ ಎಂದು ತಿಳಿಸಿದೆ. ಐಪಿಎಲ್ ಆಟಗಾರರ ಪೈಕಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಸ್ಟಾರ್ ಆಟಗಾರರಿದ್ದಾರೆ.

ಪಂದ್ಯಾವಳಿಯ ಫೈನಲ್ ಅನ್ನು ಮೇ 30 ಕ್ಕೆ ಯೋಜಿಸಲಾಗಿತ್ತು.

ಸಿ.ಎಸ್.ಕೆ. ಬೌಲಿಂಗ್ ತರಬೇತುದಾರ ಎಲ್ ಬಾಲಾಜಿ ವೈರಸ್ ಗೆ ಪಾಸಿಟಿವ್ ವರದಿ ಪಡೆದಿದ್ದು ಈ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಬುಧವಾರದ ಪಂದ್ಯ ಮುಂಡೂಡಲಾಗಿತ್ತು. ಮಂಡಳಿಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಯಾರಾದರೂ ಆರು ದಿನಗಳ ಕಠಿಣ ಸಂಪರ್ಕತಡೆಗೆ ಒಳಗಾಗಬೇಕಾಗುತ್ತದೆ ಮತ್ತು ಆ ಅವಧಿಯಲ್ಲಿ ಮೂರು ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಗಳನ್ನು ಒದಗಿಸಬೇಕು.

"ಹೊಸ ಬಯೋ ಬಬಲ್ ರಚಿಸಲು ಕನಿಷ್ಠ ನಾಲ್ಕು ಹೋಟೆಲ್‌ಗಳ ಅಗತ್ಯವಿರುವುದರಿಂದ ಅನೇಕ ಹೋಟೆಲ್ ಸಿಬ್ಬಂದಿಗೆ ಏಳು ದಿನಗಳ ಕಠಿಣ ಸಂಪರ್ಕತಡೆಯನ್ನು ಒದಗಿಸುವುದು ಸವಾಲಾಗಿದೆ. ಪಂದ್ಯಾವಳಿಯನ್ನು ಮುಂಬೈಗೆ ಸ್ಥಳಾಂತರಿಸಿದರೆ, ಕೋಲ್ಕತ್ತಾ ಹಾಗೂ ಬೆಂಗಳೂರು ತಮ್ಮ ನಿಗದಿಯಾಗಿದ್ದ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದವು.

ಇದಕ್ಕೆ ಕೆಲವೇ ದಿನಗಳ ಮೊದಲು, ಆಸ್ಟ್ರೇಲಿಯಾದ ಮೂವರು ಆಟಗಾರರು ಲೀಗ್‌ನಿಂದ ಹೊರನಡೆದಿದ್ದರು. ಕೋವಿಡ್ 19 ಆತಂಕಗಳನ್ನು ಉಲ್ಲೇಖಿಸಿ ಜಾಗತಿಕ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮಧ್ಯೆ ಅವರು ಸ್ವದೇಶಕ್ಕೆ ವಾಪಾಸಾಗಿದ್ದರು.

2020 ರ ಐಪಿಎಲ್ ಯುಎಇಯಲ್ಲಿ ನಡೆದಿತ್ತು. ಅಲ್ಲದೆ ಆ ಸಮಯದಲ್ಲಿ, ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಮಾತ್ರ ಸೋಂಕುಗಳು ವರದಿಯಾಗಿದ್ದವು. ಭಾರತವು ಪ್ರಸ್ತುತ ಪ್ರತಿದಿನ 3 ಲಕ್ಷ ಪ್ರಕರಣಗಳನ್ನು ದಾಖಲಿಸುತ್ತಿದೆ ಮತ್ತು 3,000 ಕ್ಕೂ ಹೆಚ್ಚು ಸಾವುಗಳನ್ನು ಕಾಣುತ್ತಿದೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp